ಕರ್ನಾಟಕ

karnataka

ETV Bharat / entertainment

'ನನ್ನಿಂದಲೇ ಅವರು ಟಾಪ್​​ 3 ತಲುಪಿದ್ದು': ಬಿಗ್‌ ಬಾಸ್ ವಿನಯ್ ಗೌಡ ಸಂದರ್ಶನ..! - Bigg Boss Vinay Gowda

ಬಿಗ್‌ ಬಾಸ್ ಶೋನ ಮೂರನೇ ರನ್ನರ್ ಅಪ್‌ ವಿನಯ್ ಗೌಡ ಜಿಯೋ ಸಿನಿಮಾದ ಎಕ್ಸ್‌ಕ್ಲ್ಯೂಸಿವ್ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Bigg Boss Vinay Gowda
ಬಿಗ್‌ ಬಾಸ್ ವಿನಯ್ ಗೌಡ

By ETV Bharat Karnataka Team

Published : Jan 30, 2024, 7:59 PM IST

ಭಾನುವಾರ ರಾತ್ರಿ 'ಕನ್ನಡ ಬಿಗ್‌ ಬಾಸ್ ಸೀಸನ್​ 10'ರ ವಿಜೇತರ ಹೆಸರು ಘೋಷಣೆಯಾಗಿದೆ. ಮೂರನೇ ರನ್ನರ್ ಅಪ್‌ ಆಗಿ ವಿನಯ್ ಗೌಡ ಹೊರಹೊಮ್ಮಿದ್ದಾರೆ. ನೇರಮಾತು, ಏಟಿಗೆ ಎದುರೇಟು, ನಿಷ್ಠುರ ನಡತೆಯಿಂದಲೇ ಅಭಿಮಾನಿಗಳನ್ನು ಸಂಪಾದಿಸಿರುವ ವಿನಯ್ ಮನೆಯಿಂದ ಹೊರಬಂದ ಕೂಡಲೇ ಜಿಯೋ ಸಿನಿಮಾಗೆ ಎಕ್ಸ್‌ಕ್ಲ್ಯೂಸಿವ್ ಸಂದರ್ಶನ ನೀಡಿದ್ದಾರೆ.

ಹಾಯ್, ಹಲೋ, ನಮಸ್ಕಾರ. ನಾನು ನಿಮ್ಮ ಪ್ರೀತಿಯ ವಿನಯ್ ಗೌಡ. ಬಿಗ್‌ ಬಾಸ್ ಮನೆಯಿಂದ ಮೂರನೇ ರನ್ನರ್ ಅಪ್‌ ಆಗಿ ಹೊರಗೆ ಬಂದಿದ್ದೇನೆ. ಇಲ್ಲಿವರೆಗೆ ಬಂದಿದ್ದು, ಖುಷಿ ಕೊಟ್ಟಿದೆ ಎಂದು ಹೇಳಲು ಖಂಡಿತಾ ಸಾಧ್ಯವಿಲ್ಲ. ಯಾಕೆಂದರೆ ನಾನು ಕನಿಷ್ಠ ಟಾಪ್‌ 3ನಲ್ಲಿ ಇರುತ್ತೇನೆ ಎಂದುಕೊಂಡಿದ್ದೆ. ಆದರೆ ನಮ್ಮ ಜನರೇ ವೋಟ್ ಮಾಡಿರುವುದು. ಇಲ್ಲಿವರೆಗೆ ಕರೆತಂದಿದ್ದಕ್ಕೆ ಅವರಿಗೆ ಧನ್ಯವಾದ ಸಲ್ಲಿಸಲು ಇಷ್ಟಪಡುತ್ತೇನೆ. ಅಲ್ಲಿ ಗೆಲ್ಲದಿದ್ದರೂ ಪರವಾಗಿಲ್ಲ. ಇಲ್ಲಿದ್ದು ಸಾಕಷ್ಟು ಜನರ ಹೃದಯ ಗೆದ್ದಿದ್ದೇನೆ. ಪೀಪಲ್ಸ್ ಚಾಂಪಿಯನ್ ಅಂತಾ ಹೇಳೋದಕ್ಕೆ ಬಹಳ ಖುಷಿಯಾಗುತ್ತದೆ. ಹೊರಗಡೆ ಜನರು ತುಂಬಾ ಸಪೋರ್ಟ್‌ ಮಾಡುತ್ತಿದ್ದಾರೆ ಎಂದು ಕೇಳಿದ್ದೇನೆ. ಹೊರಗೆ ಹೋಗಿ ಜನರ ಸ್ಪಂದನೆ ಸ್ವೀಕರಿಸಲು ಕಾಯುತ್ತಿದ್ದೇನೆ (ಸಂದರ್ಶನದ ಸಮಯ ಈ ಮಾತನ್ನು ತಿಳಿಸಿದ್ದರು, ಸದ್ಯ ಜನರನ್ನು ಭೇಟಿಯಾಗಿದ್ದಾರೆ) ಎಂದು ತಿಳಿಸಿದ್ದರು.

ಹೌದು, ಮನೆಯೊಳಗೆ ಬಹಳ ಅಗ್ರೆಸಿವ್ ಆಗಿ ಆಡುತ್ತಿದ್ದೆ. ಆದರೆ, ಅದು ಬೇಕು ಬೇಕಂತ ಮಾಡಿದ್ದಲ್ಲ. ಆ ಕ್ಷಣಕ್ಕೆ, ಆ ಟಾಸ್ಕ್‌ಗೆ ಏನು ಬೇಕಾಗಿತ್ತೋ ಅದನ್ನು ಮಾಡಿದ್ದೇನೆ. ಮತ್ತೆ ಡೇ ಒನ್‌ನಿಂದ ಬಿಗ್‌ ಬಾಸ್ ಸ್ಟಾರ್ಟ್‌ ಆಯ್ತು ಅಂದ್ರೆ ಈ ಹಿಂದೆ ಇದ್ದ ಹಾಗೆಯೇ ಇರುತ್ತೇನೆ. ಹಾಗಾಗಿ ನಾನು ನಡೆದುಕೊಂಡ ರೀತಿಗೆ ಯಾವ ರಿಗ್ರೆಟ್ಸ್ ಕೂಡ ಇಲ್ಲ. ನನ್ನ ಆಟ, ನನ್ನ ತನವನ್ನು ನಾನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಕೊನೆಯ ದಿನಗಳಲ್ಲಿ ಹಾಗೆ ಆಡಿದ್ದು, ಯಾಕೆಂದ್ರೆ ಅಂಥ ಟಾಸ್ಕ್‌ಗಳೇ ಇರಲಿಲ್ಲ. ಕೊನೆಯ ದಿನಗಳಲ್ಲಿ ಎಲ್ಲರೂ ಖುಷಿಯಾಗಿ ಇರೋಣ ಎಂದುಕೊಂಡು ಹಾಗೆ ಇದ್ದೆವು ಎಂದು ತಿಳಿಸಿದರು.

ಸ್ಪರ್ಧಿಗಳು ತಮಗಿಷ್ಟವಾದವರ ಜೊತೆ ಇರುತ್ತಿದ್ದರು: ಮೊದ ಮೊದಲು ಮನೆಯೊಳಗೆ ಹೋದಾಗ ಬಹಳಷ್ಟು ಜನರು ಇದ್ದರು. ಎರಡು ಗುಂಪು ಆಯ್ತು. ಅದನ್ನು ಗುಂಪು ಎಂದು ಯಾಕೆ ಕರೆದರು ಎಂದು ನನಗೆ ಗೊತ್ತಾಗಲಿಲ್ಲ. ಯಾರೂ ಅಲ್ಲಿ ಹೋಗಿ ಗುಂಪು ಮಾಡಿಕೊಳ್ಳಬೇಕು ಎಂದು ಅಂದುಕೊಂಡು ಹೋಗುವುದಿಲ್ಲ. ಒಂದು ರೀತಿಯ ಮೈಂಡ್‌ಸೆಟ್ ಇರುವವರು ಒಂದು ಕಡೆ ಇರುತ್ತಾರೆ. ಇನ್ನೊಂದು ರೀತಿಯ ಮೈಂಡ್‌ಸೆಟ್ ಇರುವವರು ಇನ್ನೊಂದು ಕಡೆ ಇರುತ್ತಾರೆ. ಹಾಗಾಗಿ, ನನ್ನ ಜೊತೆ ಯಾರೆಲ್ಲಾ ವೈಬ್ ಆಗ್ತಿದ್ರೋ ಅವರೆಲ್ಲರೂ ಜೊತೆಗೆ ಸೇರಲು ಶುರುಮಾಡಿದರು. ನನ್ನ ಜೊತೆಯಲ್ಲಿ ಯಾರು ಯಾರೆಲ್ಲ ವೈಬ್ ಆಗಲಿಲ್ಲವೋ ಅವರೆಲ್ಲ ಸಪರೇಟ್ ಆಗಲು ಶುರುವಾದ್ರು. ಆ ಬಾಂಡಿಂಗ್, ವೈಬ್ ಇದ್ದಿದ್ದಕ್ಕೇ ಇಷ್ಟು ದಿನಗಳ ಜರ್ನಿಯಲ್ಲಿ ನನ್ನ ಜೊತೆ ಕೆಲವರು ಇದ್ರು. ನನ್ನನ್ನು ಸಪೋರ್ಟ್‌ ಮಾಡುತ್ತಿದ್ರು.

ಬ್ಯಾಡ್‌ಲಕ್ ಅಂದ್ರೆ ನನ್ನ ಜೊತೆ ಇರುವವರೇ ಒಬ್ಬೊಬ್ಬರಾಗಿ ಎಲಿಮಿನೇಟ್ ಆಗಿ ಹೊರಗೆ ಹೋದರು. ಆದರೆ ನಾವು ಮನೆಯೊಳಗಿದ್ದರೂ ಹೊರಗಿದ್ದರೂ ನಾವು ಸ್ನೇಹಿತರೇ. ಆದರೆ ಆ ಇನ್ನೊಂದು ಗುಂಪು ಅಲ್ಲೇ ಕಿತ್ತಾಡಿಕೊಂಡು, ಹೊಡೆದಾಡಿಕೊಂಡು, ಪರಚಾಡಿಕೊಂಡು ಸಪರೇಟ್ ಆಗಿಬಿಟ್ಟರು. ಹೊರಗೆ ಬಂದ್ಮೇಲೆ ಇನ್ನೇನು ಆಗುತ್ತೋ ಗೊತ್ತಿಲ್ಲ ಎಂದು ತಿಳಿಸಿದರು.

ಕಾರ್ತಿಕ್, ಸಂಗೀತಾ ಮೊದಲಿನಿಂದಲೂ ಪರಿಚಿತರು:ಮನೆಯೊಳಗಿದ್ದ ಸ್ಪರ್ಧಿಗಳಲ್ಲಿ ಕಾರ್ತಿಕ್ ಒಂದು ವರ್ಷದಿಂದ ನನಗೆ ಪರಿಚಯ. ಸಂಗೀತಾ ಏಳು ವರ್ಷಗಳಿಂದ ಪರಿಚಯ. ನಾವಿಬ್ಬರೂ ಒಂದು ಧಾರಾವಾಹಿಯಲ್ಲಿ ಕೆಲಸ ಮಾಡಿದ್ದೆವು. ನನಗೆ ಕಾರ್ತಿಕ್‌ ಜೊತೆ ರೈವಲರಿ (ಪೈಪೋಟಿ) ಏನಿಲ್ಲ. ಟಾಸ್ಕ್ / ಗೇಮ್​ ಅಂತಾ ಬಂದಾಗ, ಮಾತಿಗೆ ಮಾತು ಬಂದೇ ಬರುತ್ತವೆ. ಹಾಗಾಗಿ ಭಿನ್ನಾಭಿಪ್ರಾಯ ಬರುತ್ತಿದ್ದವು. ಆದರೆ ಬೇಗನೇ ಪರಸ್ಪರ ಮಾತನಾಡಿಕೊಂಡು ಸರಿ ಹೋಗುತ್ತಿದ್ದೆವು. ಇನ್ನು ಮುಂದೆಯೂ ನಾನು ಕಾರ್ತಿಕ್ ಒಳ್ಳೆ ಫ್ರೆಂಡ್ಸ್ ಆಗೇ ಇರುತ್ತೇವೆ ಎಂದು ತಿಳಿಸಿದರು.

ಸಂಗೀತಾ ಶೃಂಗೇರಿ ಪಾರ್ವತಿಯಾಗಿ ನನ್ನ ಜೊತೆ ನಟಿಸಿದ್ದರು. ಬಿಗ್​ ಬಾಸ್​ ಮನೆಯೊಳಗೆ ಬಂದಾಗ, ಮೊದಲ ವಾರದ ನಾಮಿನೇಷನ್‌ನಲ್ಲಿ ಅವರು ನನ್ನ ಫ್ರೆಂಡ್, ಹಾಗಾಗಿ ನಾಮಿನೇಟ್ ಮಾಡಬಾರದು ಅಂತೇನು ಇರಲಿಲ್ಲ. ನಾನು ಇಲ್ಲಿಗೆ ಆಟ ಆಡಲು ಬಂದಿರೋದು. ಅವರು ಮಾಡಿರುವ ತಪ್ಪುಗಳಿಗೆ ನಾಮಿನೇಟ್ ಮಾಡಿದ್ದೆ. ಫ್ರೆಂಡ್ಸ್, ಗೊತ್ತಿರೋರು, ಬಿಟ್ಟುಬಿಡೋಣ ಅಂತಾ ಅಂದುಕೊಳ್ಳಲಿಲ್ಲ. ಅವರಿಬ್ಬರೂ ತಪ್ಪು ಮಾಡಿದ್ರು. ನಾನು ಹೇಳಿದ ಮೇಲೂ ತಪ್ಪು ಮಾಡಿದ್ರು. ನಾಮಿನೇಟ್ ಮಾಡಿದೆ. ಹಾಗಾಗಿ ಅವರು ನನ್ನ ಬಗ್ಗೆ ನಕಾರಾತ್ಮಕವಾಗಿ ತಿಳಿದುಕೊಂಡರು. ಗೊತ್ತಿರೋರನ್ನೇ ನಾಮಿನೇಟ್ ಮಾಡ್ತಾನೆ. ಸ್ನೇಹಿತರನ್ನೇ ನಾಮಿನೇಟ್ ಮಾಡ್ತಾನೆ ಎಂದುಕೊಂಡರು ಅಂತಾ ತಿಳಿಸಿದರು.

ಬಿಗ್​ ಬಾಸ್​ನಲ್ಲಿ ನಟಿಸಲು ಸಾಧ್ಯವಿಲ್ಲ: ಆದ್ರೆ, ಏನೂ ಮಾಡಕ್ಕಾಗಲ್ಲ. ನಾನಿರೋದೇ ಹೀಗೆ. ನೂರಕ್ಕೂ ಹೆಚ್ಚು ದಿನಗಳ ಕಾಲ ಇಲ್ಲಿ ನಟನೆ ಮಾಡಲು ಆಗಲ್ಲ. ನೂರಕ್ಕೂ ಹೆಚ್ಚು ದಿನ ನಟನೆ ಮಾಡಿದ್ರೂ, ಆ ಅಭಿನಯವನ್ನು ಲೈಫ್‌ಲಾಂಗ್ ಮಾಡಿಕೊಂಡು ಹೋಗಬೇಕು. ಅಷ್ಟರಲ್ಲೇ ಆ ಆ್ಯಕ್ಟಿಂಗ್ ಮುಗಿಯತ್ತದೆ. ಯಾರು ಯಾರು ಮನೆಯೊಳಗೆ ಫೇಕ್ ಆಗಿದ್ರು ಎಂಬುದು ನಿಮಗೆ ಗೊತ್ತಾಗುತ್ತದೆ. ಯಾಕೆಂದರೆ ಜೀವನ ಪರ್ಯಂತ ನಟನೆ ಮಾಡಿಕೊಂಡು ಹೋಗೋದಕ್ಕೆ ಸಾಧ್ಯವಿಲ್ಲ. ಮನಸಾರೆ ಎಲ್ಲರಿಗೂ ಬೆಸ್ಟ್ ವಿಶಸ್​ ​​ ಹೇಳ್ತೀನಿ. ನಟನೆ ಮುಂದುವರಿಸಿ, ಲೈಫ್‌ನಲ್ಲಿ ಚೆನ್ನಾಗಿರಿ ಎಂದು ತಿಳಿಸಿದರು.

'ನಾನು ವಿಲನ್ನೇ!'... ನಾನು ಎಲ್ಲಿಯೂ ಫೇಕ್ ಆಗಿ ಇರಲಿಲ್ಲ. ಯಾರಿಗೆ ಎಷ್ಟು ಬೇಜಾರಾದರೂ ಪರವಾಗಿಲ್ಲ. ಅಹಂಕಾರಿ ಎಂದು ಹೇಳಿದರೂ ಪರವಾಗಿಲ್ಲ. ಯಾರು ಎಷ್ಟೇ 'ವಿಲನ್' ಅಂದ್ರೂ ಪರವಾಗಿಲ್ಲ. ನಾನದನ್ನು ಒಪ್ಪಿಕೊಳ್ತೀನಿ. ನಾನು ವಿಲನ್ನೇ! ಎಂದು ತಿಳಿಸಿದರು.

ಜೆನ್ಯೂನ್ ಸ್ಪರ್ಧಿಗಳಿವರು: ಮನೆಯೊಳಗೆ ಜೆನ್ಯೂನ್ ಆಗಿ ಆಡಿದ್ದು ನಮ್ರತಾ, ಪವಿ. ಮೈಕಲ್ ಜಂಟಲ್‌ಮ್ಯಾನ್​. ಸಿರಿ, ವರ್ತೂರ್​ ಸಂತೋಷ್ ಹೀಗೆ ಬೆರಳೆಣಿಕೆಯಷ್ಟು ಜನರು ಮಾತ್ರವೇ ಜೆನ್ಯೂನ್ ಆಗಿದ್ರು ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.

ನನ್ನಿಂದಲೇ ಅವರು ಟಾಪ್​​ 3ಗೆ ಹೋಗಿದ್ದು: ಕಾರ್ತಿಕ್, ಸಂಗಿತಾ ಮತ್ತು ಪ್ರತಾಪ್ ಟಾಪ್‌ 3ಗೆ ಹೋಗಿದ್ದಾರೆ ಅಂದ್ರೆ ಅದರ ಕ್ರೆಡಿಟ್ ನನಗೇನೇ ಸಲ್ಲಬೇಕು. ಆ ಮೂವರೂ ನನ್ನ ಜೊತೆಗೆ ಜಗಳ ಮಾಡಿಕೊಂಡೇ ಅಲ್ಲಿಗೆ ತಲುಪಿರುವುದು. ಇನ್ನೂ ನನಗೆ ಕಾರ್ತಿಕ್​​ ಗೆಲ್ಲಬೇಕು ಎಂದು ಆಸೆ ಇತ್ತು ಎಂದು ತಿಳಿಸಿದರು.

ಜಿಯೋ ಸಿನಿಮಾ ಫನ್‌ ಫ್ರೈಡೇ: ಜಿಯೋ ಸಿನಿಮಾ ಫನ್‌ ಫ್ರೈಡೇ ಬಂತು ಅಂದ್ರೇ ನಮಗೇನೋ ಬಹಳ ಕುತೂಹಲ. ಜಗಳ ಮಾಡದೇ ಮಜಾ ಮಾಡಲು ಅವಕಾಶ ಸಿಗುತ್ತಿತ್ತು. ಮೊದಲ ವಾರದ ಮ್ಯೂಸಿಕಲ್ ಪಾಟ್ ಗೇಮ್ ನನಗೆ ತುಂಬಾ ಇಷ್ಟವಾಗಿತ್ತು. ಕೊನೆಯಲ್ಲಿ, ಬಾಲ್‌ನ ಆ ಕಡೆ ಈ ಕಡೆ ತಳ್ಳುವ ಟಾಸ್ಕ್ ಚೆನ್ನಾಗಿತ್ತು. ಎಲ್ಲ ಫ್ರೈಡೇಗಳೂ ಸಖತ್ತಾಗಿದ್ದವು. ಅದಕ್ಕಾಗಿ ಕಾಯುತ್ತಿದ್ದೆವು ನಾವು ಎಂದು ತಿಳಿಸಿದರು.

ನನ್ನ ಮನಸ್ಸಿಗೆ, ಕುಟುಂಬಕ್ಕೆ ನಿಷ್ಠನಾಗಿದ್ದೆ: ಯಾರಿಗೆ ಏನು ಅನಿಸಿತೋ ನನಗೆ ಗೊತ್ತಿಲ್ಲ. ನಾನು ನನ್ನ ಮನಸ್ಸಿಗೆ ಮತ್ತು ನನ್ನ ಫ್ಯಾಮಿಲಿಗೆ ನಿಷ್ಠನಾಗಿದ್ದೆ. ಅಷ್ಟೇ ಸಾಕು. ಬಿಗ್‌ ಬಾಸ್‌ ಮನೆಯಲ್ಲಿ ನನ್ನ ಫೇವರಿಟ್​ ಮೊಮೆಂಟ್ ಅಂದರೆ ಅದು ಕ್ಯಾಪ್ಟನ್ ಆಗಿದ್ದು. ಹಾಗೆಯೇ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು ಇನ್ನೊಂದು ಅವಿಸ್ಮರಣೀಯ ಗಳಿಗೆ. ಯಾಕೆಂದರೆ ನೂರಕ್ಕೂ ಹೆಚ್ಚು ದಿನಗಳ ಕಾಲ ಕಾದು ಕಾದು, ಇನ್ನು ಸಿಗುವುದಿಲ್ಲ ಎಂಬ ಹಂತದಲ್ಲಿ ಸಿಕ್ಕಿದ ಚಪ್ಪಾಳೆ ಅದು. ಅದರಲ್ಲಿಯೂ ಅವರು ಹೇಳಿದ ಒಂದಿಷ್ಟು ಮಾತುಗಳು ಮನಸ್ಸಿನಾಳಕ್ಕೆ ನಾಟಿತು.

ಇದನ್ನೂ ಓದಿ:'ಮಕ್ಬೂಲ್'ಗೆ 20 ವರ್ಷಗಳ ಸಂಭ್ರಮ: ಸೂಪರ್​ ಹಿಟ್​ ಸಿನಿಮಾದ ಇಂಟ್ರೆಸ್ಟಿಂಗ್ ವಿಚಾರಗಳಿಲ್ಲಿವೆ

ಬಿಗ್‌ ಬಾಸ್‌ಗೆ ಧನ್ಯವಾದ ಅರ್ಪಿಸಲು ಇಚ್ಛಿಸುತ್ತೇನೆ. ಎಲ್ಲೋ ಇದ್ದ ನನ್ನನ್ನು ಕರೆದುಕೊಂಡು ಬಂದು, ಇಷ್ಟುದೊಡ್ಡ ವೇದಿಕೆ ಮಾಡಿ ಕೊಟ್ಟಿದೆ. ಇಷ್ಟು ದಿನ ನನ್ನನ್ನು ಮಹದೇವ, ಶಿವ ಎಂದು ನನ್ನ ಪಾತ್ರಗಳ ಮೂಲಕ ಗುರುತು ಹಿಡಿಯುತ್ತಿದ್ದರು. ಇದೀಗ ಜನರು ನನ್ನನ್ನು ವಿನಯ್ ಎಂದು ಗುರುತಿಸುತ್ತಿದ್ದಾರೆ. ಈ ವಿಷಯಕ್ಕೆ ನಾನು ಬಿಗ್‌ ಬಾಸ್‌ಗೆ ಕೃತಜ್ಞನಾಗಿರುತ್ತೇನೆ. ಥ್ಯಾಂಕ್ಯೂ ಬಿಗ್‌ ಬಾಸ್‌. ಐ ಲವ್ ಯೂ.. ಎಂದು ವಿನಯ್​ ತಿಳಿಸಿದ್ದಾರೆ.

ABOUT THE AUTHOR

...view details