ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ 'ಬಡೇ ಮಿಯಾನ್ ಚೋಟೆ ಮಿಯಾನ್'. ಇತ್ತೀಚೆಗೆ ಚಿತ್ರತಂಡ ಟೀಸರ್ ಅನಾವರಣಗೊಳಿಸಿ, ಸಿನಿಮಾ ವೀಕ್ಷಿಸುವ ಪ್ರೇಕ್ಷಕರ ಕಾತರ ಹೆಚ್ಚಿಸಿದೆ. ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಭರ್ಜರಿ ಆ್ಯಕ್ಷನ್ ಸೀನ್ಗಳಲ್ಲಿ ಮಿಂಚಿದ್ದಾರೆ.
ಬುಧವಾರ ಅನಾವರಣಗೊಂಡಿರುವ ಟೀಸರ್ ಸಿನಿಮಾದ ಕಥಾವಸ್ತುವಿನ ಒಂದು ನೋಟವನ್ನು ಒದಗಿಸಿದೆ. ಭಾರತಕ್ಕೆ ಅಪಾಯವನ್ನು ಉಂಟು ಮಾಡುವ ಪೃಥ್ವಿರಾಜ್ ಸುಕುಮಾರನ್ ಅವರನ್ನು ಎದುರಿಸಲು ಅಕ್ಷಯ್ ಮತ್ತು ಟೈಗರ್ ಒಟ್ಟಿಗೆ ಸೇರುತ್ತಾರೆ. ಸ್ಫೋಟಗಳು, ಹೆಲಿಕಾಪ್ಟರ್‌ಗಳು, ಕ್ಷಿಪಣಿಗಳು ತೀವ್ರ ಯುದ್ಧದ ಸುಳಿವು ನೀಡಿದೆ. ಚಿತ್ರ ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್ ಒಳಗೊಂಡಿದೆ ಎಂಬುದನ್ನು ಟೀಸರ್ ಖಚಿತಪಡಿಸಿದೆ.
ದೇಶಭಕ್ತಿ ಅಂಶಗಳುಳ್ಳ ಟೀಸರ್ನಲ್ಲಿ ಸೈನಿಕರಾಗಿ ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಅಬ್ಬರಿಸಿದ್ದು, ಖಳನಾಯಕನಾಗಿ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟಿಮಣಿಯರಾದ ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್, ಅಲಯಾ ಎಫ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ. ಹಾಲಿವುಡ್ ರೇಂಜ್ಗೆ ಬಿಗ್ ಬಜೆಟ್ನಲ್ಲಿ 'ಬಡೇ ಮಿಯಾನ್ ಚೋಟೆ ಮಿಯಾನ್' ಅನ್ನು ನಿರ್ಮಿಸಲಾಗಿದೆ. ಅಲಿ ಅಬ್ಬಾಸ್ ಜಾಫರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ವಶು ಭಗ್ನಾನಿ, ದೀಪಿಕ್ಷಾ ದೇಶ್ಮುಖ್, ಜಾಕಿ ಭಗ್ನಾನಿ, ಹಿಮಾಂಶು ಕಿಶನ್ ಮೆಹ್ರಾ, ಅಲಿ ಅಬ್ಬಾಸ್ ಜಾಫರ್ ನಿರ್ಮಾಣ ಮಾಡಿದ್ದಾರೆ. ವಶು ಭಗ್ನಾನಿ ಮತ್ತು ಪೂಜಾ ಎಂಟರ್ಟೈನ್ಮೆಂಟ್ ಎಎಝೆಡ್ ಫಿಲ್ಮ್ಸ್ ಸಹಯೋಗದಡಿ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. 2024ರ ಏಪ್ರಿಲ್ - ಈದ್ ಸಂದರ್ಭ ಹಿಂದಿ, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.
ಇದನ್ನೂ ಓದಿ:''ಜನರಿಂದಲೇ ದೇಶ, ಜನರಿಂದಲೇ ಸಿನಿಮಾ; ಜನರೇ ದೇಶ - ಜನರೇ ಸಿನಿಮಾ'': ಬ್ಲಿಂಕ್ ಚಿತ್ರತಂಡ
'ಬಡೇ ಮಿಯಾನ್ ಚೋಟೆ ಮಿಯಾನ್' ಬಾಲಿವುಡ್ ನಟ ಅಜಯ್ ದೇವಗನ್ ಅವರ ಸ್ಪೋರ್ಟ್ಸ್ ಡ್ರಾಮಾ 'ಮೈದಾನ್' ಜೊತೆ ಪೈಪೋಟಿ ನಡೆಸಲಿದೆ. ಎರಡೂ ಚಿತ್ರಗಳು 2024ರ ಈದ್ ಸಂದರ್ಭ ಥಿಯೇಟರ್‌ಗೆ ಎಂಟ್ರಿ ಕೊಡಲಿದೆ. ಬಾಕ್ಸ್ ಆಫೀಸ್ ಪೈಪೋಟಿ ಹಿನ್ನೆಲೆ ಈಗಾಗಲೇ ಕೆಲ ಬಾಲಿವುಡ್ನ ಬಹುನಿರೀಕ್ಷಿತ ಸಿನಿಮಾಗಳು ಹಿನ್ನಡೆ ಕಂಡಿರೋದನ್ನು ಕಾಣಬಹುದು. ಕಳೆದ ವರ್ಷ ಬಂದ ಅಕ್ಷಯ್ ಕುಮಾರ್ ಅವರ ಓ ಮೈ ಗಾಡ್ 2 ಸಿನಿಮಾ ಕೂಡ ಗಲ್ಲಾಪೆಟ್ಟಿಗೆ ಪೈಪೋಟಿ ಎದುರಿಸಿತ್ತು. ಇದೀಗ 'ಬಡೇ ಮಿಯಾನ್ ಚೋಟೆ ಮಿಯಾನ್' vs 'ಮೈದಾನ್' ಪೈಪೋಟಿ ಏರ್ಪಡಲಿದ್ದು ಯಾವ ಸಿನಿಮಾ ಸದ್ದು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:ಮೊದಲ ದಿನ 22 ಕೊಟಿ ರೂ. ಕಲೆಕ್ಷನ್ ಮಾಡಿದ 'ಫೈಟರ್'