ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ 'ಕಲ್ಕಿ 2898 ಎಡಿ' ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಬುಧವಾರ ಸಂಜೆ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಅದ್ಧೂರಿಯಾಗಿ ಜರುಗಿದ್ದು, ಇಡೀ ಚಿತ್ರತಂಡ ಭಾಗಿಯಾಗಿತ್ತು. ಈವೆಂಟ್ನ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿವೆ. ಅಮಿತಾಭ್ ಬಚ್ಚನ್ ಅವರು ಅಶ್ವಿನಿ ದತ್ ಪಾದ ಸ್ಪರ್ಶಿಸಿರುವ ವಿಡಿಯೋ ವ್ಯಾಪಕವಾಗಿ ನೆಟ್ಟಿಗರ ಗಮನ ಸೆಳೆದಿದೆ.
'ಕಲ್ಕಿ 2898 ಎಡಿ' ಪ್ರೀ ರಿಲೀಸ್ ಈವೆಂಟ್ನಲ್ಲಿ ಬಿಗ್ ಬಿ ಪಾದಗಳನ್ನು ಸ್ಪರ್ಶಿಸುತ್ತಿದ್ದಂತೆ ಒಂದು ಕ್ಷಣಕ್ಕೆ ನಿರ್ಮಾಪಕ ಚಲಸಾನಿ ಅಶ್ವಿನಿ ದತ್ ಮೂಕವಿಸ್ಮಿತರಾದರು. ಕೂಡಲೇ ನಿರ್ಮಾಪಕರು ಕೂಡ ಪಾದ ಸ್ಪರ್ಶಿಸಲು ಮುಂದಾದರು. ಈ ವಿಡಿಯೋ ಆನ್ಲೈನ್ನಲ್ಲಿ ಜಾಗ ಗಿಟ್ಟಿಸಿಕೊಂಡಿದೆ. ನಿರ್ಮಾಪಕರು ಗುರುವಾರ ತಡರಾತ್ರಿ ಸೋಷಿಯಲ್ ಮೀಡಿಯಾ ಮೂಲಕ ಬಿಗ್ ಬಿಗೆ ತಮ್ಮ ಗೌರವ ಅರ್ಪಿಸಿದ್ದಾರೆ.
ಅಶ್ವಿನಿ ದತ್ ಎಕ್ಸ್ ಪೋಸ್ಟ್: "ಅಂತಹ ಕ್ಷಣಗಳು ಅನಿರೀಕ್ಷಿತ ಮತ್ತು ಆಘಾತಕಾರಿ. ನನ್ನ ಮೇಲಿನ ಅಚಲ ಪ್ರೀತಿಯನ್ನು ಅವರು ಈ ಮೂಲಕ ತೋರ್ಪಡಿಸಿದ್ದಾರೆ. ಅಮಿತಾಭ್ ಜಿ ಅವರ ವಿನಮ್ರ ಭಾವವನ್ನು ಅತ್ಯುತ್ತಮ ಉದಾತ್ತತೆಯೊಂದಿಗೆ ಪ್ರತಿಯಾಗಿ ನೀಡಲು ಇಷ್ಟಪಡುತ್ತೇನೆ. ಅವರೊಬ್ಬ ಭಾರತೀಯ ಚಿತ್ರರಂಗದ ಪರಾಕ್ರಮಿ ಯೋಧ'' ಎಂಬರ್ಥದಲ್ಲಿ ಗುಣಗಾನ ಮಾಡಿದ್ದಾರೆ.
ಅಮಿತಾಭ್ ಅವರನ್ನು ಶತಮಾನಗಳ ದಂತಕಥೆ ಎಂದು ವರ್ಣಿಸುವ ಮೂಲಕ ತಮ್ಮ ಈ ಪೋಸ್ಟ್ ಅನ್ನು ಪೂರ್ಣಗೊಳಿಸಿದ್ದಾರೆ. "ಅವರ ಅಲೌಕಿಕ ಸ್ಪರ್ಶಕ್ಕೆ ನನ್ನ ಗೌರವ" ಎಂಬುದಾಗಿಯೂ ತಿಳಿಸಿದ್ದಾರೆ. ಕಲ್ಕಿ 2898 ಎಡಿಯ ಪ್ರೀ-ರಿಲೀಸ್ ಈವೆಂಟ್ ಬುಧವಾರ ಸಂಜೆ ಮುಂಬೈನಲ್ಲಿ ನಡೆಯಿತು. ಸಿನಿಮಾ ದಂತಕಥೆ ಬಚ್ಚನ್ ಜಿ ವೇದಿಕೆಯ ಮೇಲೆ ಅಶ್ವಿನಿ ದತ್ ಅವರ ಪಾದ ಸ್ಪರ್ಶಿಸಿ ಎಲ್ಲರ ಹುಬ್ಬೇರುವಂತೆ ಮಾಡಿದರು. ಜೊತೆಗೆ ವೇದಿಕೆಯಲ್ಲಿ, "ಅವರು ತಮ್ಮ ಹೆಣ್ಣುಮಕ್ಕಳೊಂದಿಗೆ ವೈಜಯಂತಿ ಫಿಲ್ಮ್ಸ್ ಹೊಂದಿದ್ದಾರೆ. ಅವರಿಗಿಂತ ಹೆಚ್ಚು ಸರಳ, ವಿನಮ್ರ ವ್ಯಕ್ತಿಯನ್ನು ನಾನೆಂದಿಗೂ ಭೇಟಿ ಮಾಡಿಲ್ಲ" ಎಂದು ಅಶ್ವಿನಿ ದತ್ ಬಗ್ಗೆ ಗುಣಗಾನ ಮಾಡಿದರು.
ಇದನ್ನೂ ಓದಿ:ಬಿಟೌನ್ಗೆ ಹೊರಟ 'ವೀರಸಿಂಹ ರೆಡ್ಡಿ' ಡೈರೆಕ್ಟರ್: ಸನ್ನಿ ಡಿಯೋಲ್ಗೆ ಗೋಪಿಚಂದ್ ಆ್ಯಕ್ಷನ್ ಕಟ್ - Sunny deols new project
"ಅವರು ಯಾವಾಗಲೂ ಸೆಟ್‌ನಲ್ಲಿ ಕಾಣುವ ಮೊದಲ ವ್ಯಕ್ತಿ. ನಿಮ್ಮನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿರುತ್ತಾರೆ. ನಿಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುತ್ತಾರೆ. ಬೇರೆ ಯಾರೂ ಈ ರೀತಿ ಯೋಚಿಸುವುದಿಲ್ಲ" ಎಂದು ಅಮಿತಾಭ್, ಅಶ್ವಿನಿ ಅವರ ಪಾದಸ್ಪರ್ಶಿಸುವ ಮೊದಲು ತಿಳಿಸಿದರು. 1974ರಲ್ಲಿ ಸ್ಥಾಪನೆಗೊಂಡ ಟಾಲಿವುಡ್‌ನ ಅತಿದೊಡ್ಡ ಚಲನಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ವೈಜಯಂತಿ ಮೂವೀಸ್ ಅನ್ನು ಅಶ್ವಿನಿ ದತ್ ನಡೆಸುತ್ತಿದ್ದರು. ಅವರಿಗೆ ಸ್ವಪ್ನಾ, ಪ್ರಿಯಾಂಕಾ ಮತ್ತು ಶ್ರವಂತಿ ಎಂಬ ಮೂವರು ಪುತ್ರಿಯರಿದ್ದಾರೆ. ಪ್ರಿಯಾಂಕಾ, ಕಲ್ಕಿ ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ಜೊತೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಅಂತಾರಾಷ್ಟ್ರೀಯ ಟೀ-ಶರ್ಟ್ ದಿನ: ಜನಪ್ರಿಯತೆಗೆ ಕಾರಣಗಳೇನು? - International T Shirt Day