ಕನ್ನಡ ಚಿತ್ರರಂಗದಲ್ಲಿ ಹಾರಾರ್ ಕಥೆಯಾಧರಿಸಿ ಬಂದ ಅದೆಷ್ಟೋ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಿವೆ. ಇದೀಗ ಅನು ಪ್ರಭಾಕರ್, ಹರ್ಷಿಕಾ ಪೂಣಚ್ಚ, ವೇಣು ಪ್ರಮುಖ ಪಾತ್ರ ನಿರ್ವಹಿಸಿರುವ ಹಾರರ್ ಸಿನಿಮಾ 'ಹಗ್ಗ'ದ ಟೀಸರ್ ಅನಾವರಣಗೊಂಡಿದೆ. ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ಆರ್ ಚಂದ್ರು ಟೀಸರ್ ಅನಾವರಣಗೊಳಿಸಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಿರ್ಮಾಪಕರಾದ ಕೆ.ಮಂಜು, ದಯಾಳ್ ಸೇರಿದಂತೆ ಅನೇಕ ಗಣ್ಯರು ಹಗ್ಗ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಟೀಸರ್ ಬಿಡುಗಡೆ ನಂತರ ಮಾತನಾಡಿದ ನಿರ್ದೇಶಕ ಅವಿನಾಶ್, ನಾನು ಮೂಲತಃ ಮೆಕಾನಿಕಲ್ ಇಂಜಿನಿಯರ್. ಸಿನಿಮಾ ನಿರ್ದೇಶನ ನನ್ನ ಕನಸು. ಆ ಕನಸು 'ಹಗ್ಗ' ಚಿತ್ರದ ಮೂಲಕ ಈಡೇರಿದೆ. ಈ ಚಿತ್ರದಲ್ಲಿ ಅನು ಪ್ರಭಾಕರ್, ವೇಣು, ಹರ್ಷಿಕಾ ಪೂಣಚ್ಚ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆದರೆ 'ಹಗ್ಗ'ವೇ ನಮ್ಮ ಚಿತ್ರದ ನಾಯಕ. ಹಾರರ್ ಜಾನರ್ನ ಚಿತ್ರವಾದರೂ, ಒಂದು ಪ್ರಮುಖ ಸಂದೇಶ ಸಹ ಇದರಲ್ಲಿದೆ ಎಂದರು.
ಹರ್ಷಿಕಾ ಪೂಣಚ್ಚ - ಅನು ಪ್ರಭಾಕರ್ (ETV Bharat) ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿರುವ ಅನು ಪ್ರಭಾಕರ್ ಮಾತನಾಡಿ, ಅವಿನಾಶ್ ಅವರು ಈ ಚಿತ್ರದ ಕುರಿತು ಹೇಳಿದಾಗ ನನ್ನ ಪಾತ್ರ ಬಹಳ ಇಷ್ಟವಾಯಿತು. ನನ್ನನ್ನು ಸೂಪರ್ ಹೀರೋ ಎಂದು ತೋರಿಸಿದ್ದಾರೆ. ಪಾತ್ರದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಆದರೆ, ಒಳ್ಳೆಯ ಪಾತ್ರಕೊಟ್ಟ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಧನ್ಯವಾದಗಳು ಎಂದು ತಿಳಿಸಿದರು.
'ಹಗ್ಗ' ಟೀಸರ್ ರಿಲೀಸ್ ಈವೆಂಟ್ (ETV Bharat) ಇನ್ನೂ ಹರ್ಷಿಕಾ ಪೂಣಚ್ಚ ಮಾತನಾಡಿ, ನನ್ನದು ಈ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರ. ಯಾವುದೋ ಒಂದು ವಿಷಯದ ಅನ್ವೇಷಣೆಗಾಗಿ ಹಳ್ಳಿಗೆ ಹೋಗುತ್ತೇನೆ. ಈ ಚಿತ್ರದಲ್ಲಿ ಜೀಪ್ ಡ್ರೈವ್ ಮಾಡಿದ್ದು, ಸಖತ್ ಥ್ರಿಲ್ ನೀಡಿತ್ತು ಎಂದು ತಿಳಿಸಿದರು.
ಬಳಿಕ ಯುವ ನಟ ವೇಣು ಮಾತನಾಡಿ, ಇದು ನನ್ನ ಮೊದಲ ಚಿತ್ರ. ನಟನೆಗೆ ತಬಲನಾಣಿ ಅವರು ಬಹಳ ಸಹಾಯ ಮಾಡಿದರು. ನಮ್ಮ ಚಿತ್ರ ಪ್ರೇಕ್ಷಕರಿಗೆ ಇಷ್ಟ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಅನು ಪ್ರಭಾಕರ್, ವೇಣು, ಹರ್ಷಿಕಾ ಅಲ್ಲದೇ ತಬಲನಾಣಿ, ಅವಿನಾಶ್, ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಪ್ರಿಯ ಹೆಗ್ಡೆ, ಮೈಕೋ ಮಂಜು, ಸಂಜು ಬಸಯ್ಯ, ಸದಾನಂದ ಕಾಳಿ ಸೇರಿದಂತೆ ಮುಂತಾದವರು ತಾರಾ ಬಳಗದಲ್ಲಿದ್ದಾರೆ.
ಇದನ್ನೂ ಓದಿ:ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲಾದ ಬಾಲಿವುಡ್ ನಟಿ ಜಾಹ್ನವಿ ಕಪೂರ್ - Janhvi Kapoor Hospitalised
'ಹಗ್ಗ' ಚಿತ್ರದ ನಿರ್ಮಾಪಕ ರಾಜ್ ಭಾರದ್ವಾಜ್ ಮಾತನಾಡಿ, ಚಿತ್ರಕ್ಕೆ ನಾನೇ ಕಥೆ ಬರೆದು ನಿರ್ಮಾಣ ಮಾಡಿದ್ದೇನೆ. ಅವಿನಾಶ್ ನಿರ್ದೇಶನ ಮಾಡಿದ್ದಾರೆ. ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿರುವ ಎಲ್ಲ ಗಣ್ಯರಿಗೂ ಧನ್ಯವಾದಗಳು. ಈಗಾಗಲೇ ಮೋಷನ್ ಪೋಸ್ಟರ್ ಮೂಲಕ 'ಹಗ್ಗ' ಜನರ ಮನಸ್ಸಿಗೆ ಹತ್ತಿರವಾಗಿದೆ. ಇದೀಗ ಟೀಸರ್ ಬಿಡುಗಡೆಯಾಗಿದೆ. ನಮ್ಮ ಸಿನಿಮಾ ಪ್ರೇಕ್ಷಕರಿಗೆ ಹಿಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ರಾಜವರ್ಧನ್ ಜೊತೆ ದಿವ್ಯಾ ಸುರೇಶ್ ಮಸ್ತ್ ಡ್ಯಾನ್ಸ್: ನಾಳೆ 'ಹಿರಣ್ಯ' ತೆರೆಗೆ - Hiranya
ವಸಂತ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರಾಜ್ ಭಾರದ್ವಾಜ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನವಿದೆ. ಸಿನಿಟೆಕ್ ಸೂರಿ ಛಾಯಾಗ್ರಹಣ ಹಾಗೂ ಎನ್.ಎಂ ವಿಶ್ವ ಅವರ ಸಂಕಲನವಿದೆ. ಹಾಗೇ ಮನೋಹರ್ ಎಸ್.ಪಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಸದ್ಯ ಟೀಸರ್ನಿಂದಲೇ ಕುತೂಹಲ ಹುಟ್ಟಿಸಿರೋ 'ಹಗ್ಗ' ಚಿತ್ರ ಆಗಸ್ಟ್ ತಿಂಗಳಲ್ಲಿ ಪ್ರೇಕ್ಷಕರೆದುರು ಬರಲಿದೆ.