ಶಿವಮೊಗ್ಗ: ಜಿಲ್ಲೆಯಲ್ಲಿ ಸೋಮವಾರ ನಡೆಸಿದ ಜಿಲ್ಲಾ ಮಟ್ಟದ ಕೌಶಲ್ಯ ಮತ್ತು ರೋಜಗಾರ್ ಉದ್ಯೋಗ ಮೇಳದಲ್ಲಿ 324 ನಿರುದ್ಯೋಗಿ ಯುವಕರ - ಯುವಕರಿಗೆ ವಿವಿಧ ಕಂಪನಿಗಳು ಉದ್ಯೋಗ ಪತ್ರವನ್ನು ನೀಡಿವೆ. ಜೊತೆಗೆ 683 ಜನರನ್ನು ಶಾರ್ಟ್ ಲಿಸ್ಟ್ ಮಾಡಿವೆ. ಇದರಿಂದಾಗಿ ಅಂದಾಜು 1 ಸಾವಿರ ಮಂದಿ ಉದ್ಯೋಗ ದೊರಕಿದಂತಾಗಿದೆ.
ಶಿವಮೊಗ್ಗದ ಆಚಾರ್ಯ ತುಳಸಿ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಕೌಶಲ್ಯ ಮತ್ತು ರೋಜಗಾರ್ ಉದ್ಯೋಗಮೇಳವನ್ನು ಆಯೋಜಿಸಲಾಗಿತ್ತು.
ಈ ಉದ್ಯೋಗ ಮೇಳಕ್ಕೆ ಆನ್ ಲೈನ್ನಲ್ಲಿ 45 ಕಂಪನಿಗಳು ನೋಂದಣಿ ಮಾಡಿದ್ದವು. ಆದರೆ, ಇಂದು 39 ಕಂಪನಿಗಳು ಮೇಳಕ್ಕೆ ಬಂದಿದ್ದವು. ಟಯೋಟ, ಶಾಹಿ ಸೇರಿದಂತೆ ಪ್ರಮುಖ ಕಂಪನಿಗಳು ಭಾಗವಹಿಸಿದ್ದವು. ಇನ್ನು ಉದ್ಯೋಗ ಅರಸಿ ಆನ್ ಲೈನ್ನಲ್ಲಿ ನೋಂದಣಿ ಮಾಡಿಕೊಂಡಿದ್ದ 3,800 ಜನರ ಪೈಕಿ 2,778 ಜನರು ಆಗಮಿಸಿದ್ದರು.
ಮುಂದಿನ ಬಾರಿ ಉಚಿತ ಬಸ್ ಪಾಸ್ ವಿತರಣೆ: ಉದ್ಯೋಗ ಮೇಳ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಇಂತಹ ಮೇಳದಿಂದ ನಿರುದ್ಯೋಗಿ ಯುವಕ - ಯುವತಿಯರಿಗೆ ಹಾಗೂ ಕಂಪನಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದರು.
ಕೌಶಲ್ಯ ಮತ್ತು ರೋಜಗಾರ್ ಉದ್ಯೋಗ ಮೇಳ ಯಶಸ್ವಿಯಾಗಿದೆ. ಯಾರಿಗೆ ಉದ್ಯೋಗದ ಅವಶ್ಯಕತೆ ಇದೆ ಅಂತಹ ವಿದ್ಯಾರ್ಥಿಗಳು, ಅಭ್ಯರ್ಥಿಗಳು ಬಂದಿದ್ದಾರೆ. ಗ್ರಾಮೀಣ ಭಾಗದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಅಂತಹವರಿಗೆ ಬಸ್ ಪಾಸ್ ಕೊಡುವ ವ್ಯವಸ್ಥೆ ಮುಂದಿನ ದಿನಗಳಲ್ಲಿ ಮಾಡಲಾಗುವುದು. ಸುಮಾರು 40 ಕ್ಕೂ ಹೆಚ್ಚು ಕಂಪನಿಗಳು ಈ ಮೇಳಕ್ಕೆ ಬಂದಿವೆ. ಉದ್ಯೋಗ ಮೇಳ ನಾಮಕೇವಾಸ್ತೆ ಆಗಬಾರದು ಎಂಬ ನಿಟ್ಟಿನಲ್ಲಿ ಮೇಳ ಆಯೋಜಿಸಲಾಗಿದೆ. ಆನ್ ಲೈನ್ನಲ್ಲಿ ರಿಜಿಸ್ಟರ್ ಆದವರಿಗೆ ಬಸ್ ಪಾಸ್ ಕೊಡವ ಬಗ್ಗೆ ತೀರ್ಮಾ ಮಾಡಲಾಗುವುದು ಎಂದು ಭರವಸೆ ನೀಡಿದರು.
ಉದ್ಯೋಗ ಮೇಳದಿಂದ ನಾವು ಬೆಂಗಳೂರಿಗೆ ಹೋಗುವುದು ತಪ್ಪಿದೆ: ಇಂದಿನ ಉದ್ಯೋಗ ಮೇಳದಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಕಂಪನಿಗಳಿಗೆ ಹೋಗುವುದು ತಪ್ಪಿದೆ. ಇದರಿಂದ ನಮಗೆ ಅನುಕೂಲವಾಗಿದೆ. ಇದರಿಂದ ನಮ್ಮ ಹಣ ಸಹ ಉಳಿದಿದೆ. ಇದು ನಮ್ಮಂತಹ ಉದ್ಯೋಗ ಅರಸುವವರಿಗೆ ಒಳ್ಳೆಯ ಅವಕಾಶವಾಗಿದೆ. ಡಿಗ್ರಿ, ಡಿಪ್ಲೋಮ ಮುಗಿಸಿದವರಿಗೆ ಇಲ್ಲಿ ಅವಕಾಶವಿದೆ. ನಾವು ಐ ಪೋನ್ ಕಂಪನಿಯ ಸಂದರ್ಶನ ಮುಗಿಸಿ ಬಂದಿದ್ದೇನೆ ಎಂದು ಮೇಳದಲ್ಲಿ ಭಾಗಿಯಾಗಿದ್ದ ಕವನ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಅದೇ ರೀತಿ ಉದ್ಯೋಗ ಮೇಳಕ್ಕೆ ಆಗಮಿಸಿದ ಅನನ್ಯ ಎಂಬ ವಿದ್ಯಾರ್ಥಿನಿ ಮಾತನಾಡಿ, ನಾನು ಮೂರು ಕಂಪನಿಗೆ ರಿಸ್ಯೂಮ್ ಕೊಟ್ಟಿದ್ದೇನೆ. ಇಲ್ಲಿ ಒಂದು ಸಾವಿರಕ್ಕೂ ಅಧಿಕ ಉದ್ಯೋಗಗಳು ಬೇಕು ಎಂದು ವಿವಿಧ ಕಂಪನಿಗಳು ಬಂದಿವೆ. ಇದು ನಮಗೆ ತುಂಬ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಶಾಹಿ ಗಾರ್ಮೆಂಟ್ಸ್ನ ಹೆಚ್.ಆರ್ ವಿಭಾಗದ ನಿಖಿಲ್ ಮಾತನಾಡಿ, ನಮ್ಮ ಸಂಸ್ಥೆಗೆ ಉದ್ಯೋಗಿಗಳು ಸಾಕಷ್ಟು ಜನ ಬೇಕಾಗಿದ್ದಾರೆ. ನಾವು ಪ್ರತಿ ಹಳ್ಳಿಗಳಿಗೂ ಹೋಗಿ ಉದ್ಯೋಗಿಗಳನ್ನು ಕರೆದುಕೊಂಡು ಬರುತ್ತಿದ್ದೇವೆ. ಈಗ ಇಂತಹ ಮೇಳ ಮಾಡುತ್ತಿರುವುದರಿಂದ ನಮ್ಮಂತಹ ಕಂಪನಿಗಳಿಗೆ ತುಂಬಾ ಅನುಕೂಲವಿದೆ. ನಮ್ಮ ವಿವಿಧ ವಿಭಾಗಗಳಿಗೆ ನೇಮಕ ಮಾಡಿಕೊಳ್ಳಲು ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪರೀಕ್ಷಾ ದಿನಗಳಲ್ಲಿ ಮಕ್ಕಳ ಆಹಾರ ಕ್ರಮ ಹೇಗಿರಬೇಕು ? ಇಲ್ಲಿದೆ ತಜ್ಞರ ಸಲಹೆ
ಇದನ್ನೂ ಓದಿ: ಅಂಗವೈಕಲ್ಯ ಮೆಟ್ಟಿನಿಂತು ಸಾಧನೆ; ಜೆಇಇ ಮೇನ್ಸ್ನಲ್ಲಿ ವಿಕಲಚೇತನ ವರ್ಗದಲ್ಲಿ ದೇಶಕ್ಕೆ ಹಿಮನೇಶ ಟಾಪರ್