ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮನೆಯಲ್ಲೀಗ ಮದುವೆ ಸಂಭ್ರಮ. ಇದೇ ಶುಕ್ರವಾರ ನಡೆಯಲಿರುವ ಅದ್ಧೂರಿ ಸಮಾರಂಭಗಳು ಜೂನ್ ಕೊನೆಯಲ್ಲೇ ಶುರುವಾಗಿದ್ದು, ದೇಶ-ವಿದೇಶದ ಖ್ಯಾತನಾಮರು ಆಗಮಿಸಲಿದ್ದಾರೆ.
ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್ ಅಂಬಾನಿ ಜುಲೈ 12ರಂದು ತಮ್ಮ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಹಸೆಮಣೆ ಏರಲಿದ್ದು, ಮದುವೆಪೂರ್ವ ಸಮಾರಂಭಗಳು ಜೂನ್ 29ರಂದೇ ಆರಂಭವಾಗಿವೆ. ಸೋಷಿಯಲ್ ಮೀಡಿಯಾಗಳಲ್ಲಿ ಹಲ್ದಿ ಸಮಾರಂಭದ ಫೋಟೋ, ವಿಡಿಯೋಗಳು ಹರಿದಾಡುತ್ತಿವೆ.
ಜುಲೈ 8ರಂದು ನಡೆದ ಹಲ್ದಿ ಸಮಾರಂಭದಲ್ಲಿ ವಧು ರಾಧಿಕಾ ಮರ್ಚೆಂಟ್ ಹಳದಿ ಲೆಹೆಂಗಾ ಧರಿಸಿದ್ದರು. ಹೂವಿನ ದುಪಟ್ಟಾ, ಜ್ಯುವೆಲರಿ ಧರಿಸಿ ಬೆರಗುಗೊಳಿಸುವ ನೋಟ ಬೀರಿದ್ದಾರೆ. ಮಂಗಳವಾರ ಸೆಲೆಬ್ರಿಟಿ ಸ್ಟೈಲಿಸ್ಟ್ ರಿಯಾ ಕಪೂರ್ ಅವರು ರಾಧಿಕಾ ಅವರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಅನಾಮಿಕಾ ಖನ್ನಾ ವಿನ್ಯಾಸಗೊಳಿಸಿದ ಉಡುಗೆಯಲ್ಲಿ ವಧು ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಸಮಾರಂಭದ ನಂತರ ರಾಧಿಕಾ ಪಿಂಕ್ ಲೆಹೆಂಗಾ ಚೋಲಿ ಧರಿಸಿರುವ ಚಿತ್ರಗಳನ್ನೂ ಸಹ ಈ ಪೋಸ್ಟ್ ಒಳಗೊಂಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಲ್ದಿ ಫೋಟೋಗಳನ್ನು ಹಂಚಿಕೊಂಡ ರಿಯಾ ಕಪೂರ್, ''ನಿಜವಾದ ಫೂಲ್ ದುಪಟ್ಟಾದಲ್ಲಿ ನನ್ನ ರಾಧಿಕಾ ಮರ್ಚೆಂಟ್'' ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ರಾಧಿಕಾರ ದುಪಟ್ಟಾ, ಮೊಗ್ರಾ ಹೂವಿನ ಮೊಗ್ಗುಗಳಿಂದ ಅಲಂಕರಿಸಲ್ಪಟ್ಟಿದೆ. ಶಾಲ್ನ ಬಾರ್ಡರ್ ಹಳದಿ ಚೆಂಡು ಹೂವುಗಳಿಂದ ಮಾಡಲ್ಪಟ್ಟಿತ್ತು. ದುಪಟ್ಟಾ ಮಾತ್ರವಲ್ಲದೇ, ಆಭರಣಗಳೂ ಸಹ ಹೂವಿನಿಂದಲೇ ಮಾಡಲ್ಪಟ್ಟಿವೆ. ಕೆಂಪು ಬಿಂದಿ ಮತ್ತು ನ್ಯೂಡ್ ಲಿಪ್ಸ್ಟಿಕ್ ವಧುವಿನ ಕಳೆ ಹೆಚ್ಚಿಸಿದೆ.
ಇದನ್ನೂ ಓದಿ:25 ದಿನ ಪೂರೈಸಿದ 'Love...ಲಿ': ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸುವಂತೆ ವಸಿಷ್ಠ ಸಿಂಹ ಮನವಿ - Love li Movie
ಮುಂಬೈ-ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜುಲೈ 12ರಂದು ರಾಧಿಕಾ ಮತ್ತು ಅನಂತ್ ಅಂಬಾನಿ ಸಪ್ತಪದಿ ತುಳಿಯಲಿದ್ದಾರೆ. ಜೂನ್ 29ರಂದು ಅಂಬಾನಿಯ ಐಷಾರಾಮಿ ಆಂಟಿಲಿಯಾ ನಿವಾಸದಲ್ಲಿ ಪೂಜಾ ಸಮಾರಂಭದೊಂದಿಗೆ ವಿವಾಹಪೂರ್ವ ಉತ್ಸವಗಳು ಪ್ರಾರಂಭವಾದವು. ನಂತರ, ಜುಲೈ 3ರಂದು 'ಮಾಮೆರು' ಸಮಾರಂಭ ನಡೆಯಿತು. ಜುಲೈ 5ರಂದು ಅದ್ಧೂರಿ ಸಂಗೀತ ಸಮಾರಂಭ ಜರುಗಿದ್ದು, ಬಹುತೇಕ ಬಾಲಿವುಡ್ ಗಣ್ಯರು ಪಾಲ್ಗೊಂಡಿದ್ದರು.
ಇದನ್ನೂ ಓದಿ:ಅನಂತ್ - ರಾಧಿಕಾ ಅರಿಶಿಣ ಶಾಸ್ತ್ರ ಸಮಾರಂಭಕ್ಕೆ ತಾರಾ ಮೆರಗು: ಸಲ್ಮಾನ್ಖಾನ್ನಿಂದ ನಿರ್ದೇಶಕ ಆಟ್ಲಿವರೆಗೆ ಹಲವರು ಭಾಗಿ - Ahead of Anant Radhika Wedding
ಇತ್ತೀಚೆಗೆ ನಡೆದ ಹಲ್ದಿಯಲ್ಲಿ ಅನನ್ಯಾ ಪಾಂಡೆ, ಸಾರಾ ಅಲಿ ಖಾನ್ ಮತ್ತು ಸಲ್ಮಾನ್ ಖಾನ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಮೂರು ದಿನಗಳ ಕಾಲ ಮದುವೆ ನಡೆಯಲಿದೆ. ಶುಕ್ರವಾರ, ಜುಲೈ 12ರಂದು 'ಶುಭ ವಿವಾಹ', ಜುಲೈ 13ರಂದು 'ಶುಭ ಆಶೀರ್ವಾದ' ಮತ್ತು ಜುಲೈ 1 ರಂದು 'ಮಂಗಲ್ ಉತ್ಸವ' ಅಥವಾ ಆರತಕ್ಷತೆ ಸೇರಿದಂತೆ ಮೂರು ಪ್ರಮುಖ ಕಾರ್ಯಕ್ರಮಗಳು ನಡೆಯಲಿವೆ.