ಅಯೋಧ್ಯೆ(ಉತ್ತರ ಪ್ರದೇಶ): ಭಾರತೀಯ ಚಿತ್ರರಂಗದ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಂದು ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಿಗಿ ಭದ್ರತೆಯ ನಡುವೆ ಬಿಗ್ ಬಿ ದೇವಸ್ಥಾನದಿಂದ ಹೊರಬರುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಬಚ್ಚನ್ ಬಿಳಿ ಕುರ್ತಾ, ಪೈಜಾಮ ಧರಿಸಿದ್ದರು.
ಜನವರಿ 22ರಂದು ರಾಮಮಂದಿರದಲ್ಲಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ನಡೆದಿದೆ. ಐತಿಹಾಸಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಒಂದು ಗಂಟೆಗಳ ಕಾಲ ಧಾರ್ಮಿಕ ವಿಧಿ-ವಿಧಾನಗಳು ಜರುಗಿ, ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಡೆದಿತ್ತು. ಭವ್ಯ ಸಮಾರಂಭಕ್ಕೆ ಸಾವಿರಾರು ಗಣ್ಯ ಅತಿಥಿಗಳು ಸೇರಿದಂತೆ ಸುಮಾರು 8,000ಕ್ಕೂ ಹೆಚ್ಚು ಆಹ್ವಾನಿತರು ಆಗಮಿಸಿದ್ದರು. ಅಮಿತಾಭ್ ಬಚ್ಚನ್ ತಮ್ಮ ಪುತ್ರ ಅಭಿಷೇಕ್ ಬಚ್ಚನ್ ಜೊತೆ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಅಮಿತಾಭ್ ಬಚ್ಚನ್ ಅಯೋಧ್ಯೆಯಲ್ಲಿ 10,000 ಸ್ಕ್ವೇರ್ ಫೀಟ್ ಜಾಗ ಖರೀದಿಸಿದ್ದರು. ಅಯೋಧ್ಯೆ ರಿಜಿಸ್ಟ್ರಾರ್‌ನ ರಿಜಿಸ್ಟ್ರಾರ್ ಶಾಂತಿ ಭೂಷಣ್ ಚೌಬೆ ಎಎನ್‌ಐಗೆ ಈ ವಿಚಾರವನ್ನು ದೃಢೀಕರಿಸಿದ್ದರು. ಖರೀದಿಯ ಭಾಗವಾಗಿ, ಎರಡು ದಾಖಲೆಗಳನ್ನು ಪ್ರಸ್ತುತಪಡಿಸಲಾಗಿತ್ತು. ಇದು 10,000 ಚದರ ಅಡಿ ಪ್ಲಾಟ್ ಆಗಿದ್ದು, ಇದಕ್ಕಾಗಿ 9 ಕೋಟಿ ರೂಪಾಯಿಯ ವ್ಯವಹಾರ ನಡೆದಿದೆ ಎಂದು ಮಾಹಿತಿ ಕೊಟ್ಟಿದ್ದರು.