ಹೈದರಾಬಾದ್: ಸಂಧ್ಯಾ ಥಿಯೇಟರ್ನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಇಂದು ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಇಂದು ಬೆಳಗ್ಗೆ ಸುಮಾರು 10.30ರ ಸುಮಾರಿಗೆ ಜುಬಿಲಿ ಹಿಲ್ಸ್ ರಸ್ತೆಯಲ್ಲಿರುವ ತಮ್ಮ ನಿವಾಸದಿಂದ ಹೊರಟ ಅಲ್ಲು ಅರ್ಜುನ್, ತಂದೆ ನಿರ್ಮಾಪಕ ಅಲ್ಲು ಅರವಿಂದ್ ಅವರೊಂದಿಗೆ ಚಿಕ್ಕಡಪಲ್ಲಿ ಠಾಣೆಗೆ ಹಾಜರಾದರು.
ಚಿಕ್ಕಡಪಲ್ಲಿ ಪಿಎಸ್‌ನಲ್ಲಿ ಅಲ್ಲು ಅರ್ಜುನ್‌ನ ವಿಚಾರಣೆ ಮುಂದುವರೆದಿದೆ.ಸಂಧ್ಯಾ ಥಿಯೇಟರ್ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಪ್ರಶ್ನಿಸುತ್ತಿದ್ದಾರೆ. ಕೇಂದ್ರ ವಲಯ ಡಿಸಿಪಿ ಆಕಾಂಕ್ಷ್ ಯಾದವ್ ಅವರು ಅಲ್ಲು ಅರ್ಜುನ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಎಸಿಪಿ ರಮೇಶ್ ಮತ್ತು ಇನ್ಸ್ ಪೆಕ್ಟರ್ ರಾಜುನಾಯ್ಕ್ ಸಮ್ಮುಖದಲ್ಲಿ ಅಲ್ಲು ಅರ್ಜುನ್ ಇನ್ವೆಸ್ಟಿಗೇಷನ್ ನಡೆದಿದೆ. ಸುಮಾರು ಎರಡುಗಂಟೆಗಳಿಂದ ತನಿಖಾ ಅಧಿಕಾರಿಗಳು ನಟನನ್ನು ಪ್ರಕರಣದ ಸಂಬಂಧ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.
ವಿಚಾರಣೆ ಹಿನ್ನೆಲೆ ಭಾರಿ ಬಿಗಿ ಬಂದೋಬಸ್ತ್:ಅಲ್ಲು ಅರ್ಜುನ್ ತಮ್ಮ ವಕೀಲರೊಂದಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಅಲ್ಲು ಅರ್ಜುನ್ ವಿಚಾರಣೆ ಹಿನ್ನೆಲೆಯಲ್ಲಿ ಚಿಕ್ಕಡಪಲ್ಲಿ ಪಿಎಸ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ;ಡಿ.4ರಂದು ಪುಷ್ಪ 2: ದಿ ರೈಸ್ ಪ್ರೀಮಿಯರ್ ಶೋ ಸಮಯದಲ್ಲಿ ಕಾಲ್ತುಳಿತದಿಂದ 35 ವರ್ಷದ ಮಹಿಳೆ ರೇವತಿ ಸಾವನ್ನಪ್ಪಿದ್ದರೆ, ಅವರ 8 ವರ್ಷದ ಮಗ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಂತರ ಭಾರತೀಯ ದಂಡ ಸಂಹಿತೆಯ ಹಲವಾರು ನಿಬಂಧನೆಗಳ ಅಡಿ ಅಲ್ಲು ಅರ್ಜುನ್, ಅವರ ಭದ್ರತಾ ತಂಡ ಮತ್ತು ಥಿಯೇಟರ್ ನಿರ್ವಹಣೆಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೇ ಮೃತ ಮಹಿಳೆಯ ಕುಟುಂಬ ನಿರ್ಲಕ್ಷ್ಯ ಮತ್ತು ಅಸಮರ್ಪಕ ನಿರ್ವಹಣೆ ಎಂದು ಆರೋಪಿಸಿ ದೂರು ದಾಖಲಿಸಿತ್ತು.
ಹಾಗಾಗಿ ಅಲ್ಲು ಅರ್ಜುನ್ ಅವರು ವಿಚಾರಣೆಗೆ ಹಾಜರಾವಗುವಂತೆ ಸೋಮವಾರ ಚಿಕ್ಕಡಪಲ್ಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಆರಂಭದಲ್ಲಿ ಡಿ. 13ರಂದು ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಅಲ್ಲು ಅರ್ಜುನ್ ಅವರಿಗೆ ತೆಲಂಗಾಣ ಹೈಕೋರ್ಟ್ ನಾಲ್ಕು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಡಿ.14 ರಂದು ಅಲ್ಲು ಅರ್ಜುನ್ ಜೈಲಿನಿಂದ ಬಿಡುಗಡೆಗೊಂಡಿದ್ದರು.
ಇದನ್ನೂ ಓದಿ:ಸಂಧ್ಯಾ ಥಿಯೇಟರ್ ಪ್ರಕರಣ: ತನಿಖೆಯ ಸಂಪೂರ್ಣ ಮಾಹಿತಿ ನೀಡಿದ ಹೈದರಾಬಾದ್ ಪೊಲೀಸ್