ಮುಂಬೈ: ಬಾಲಿವುಡ್ನ ಸೂಪರ್ ಆ್ಯಕ್ಷನ್ ಸ್ಟಾರ್ ಜಾನ್ ಅಬ್ರಹಾಂ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ವೇದಾ'. ಆಗಸ್ಟ್ 15 ರಂದು ಚಿತ್ರಮಂದಿರ ಪ್ರವೇಶಿಸಲಿರುವ 'ವೇದಾ' ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿದೆ. ಚಿತ್ರದಲ್ಲಿ ಜಾನ್ ಅಬ್ರಹಾಂ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಶಾರ್ವರಿ ವಾಘ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟಿ ಆಲಿಯಾ ಭಟ್ ಟ್ರೇಲರ್ಗೆ ಪ್ರತಿಕ್ರಿಯಿಸಿದ್ದು, ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸಿರುವ ತಮನ್ನಾ ಭಾಟಿಯಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಗುಣಗಾನ ಮಾಡಿದ್ದಾರೆ.
ಆಲಿಯಾ ಇನ್ಸ್ಟಾಗ್ರಾಮ್ ಸ್ಟೋರಿ: ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾ ಭಟ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಟ್ರೇಲರ್ ಹಂಚಿಕೊಂಡು, ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸಿರುವ ಶಾರ್ವರಿ ವಾಘ್ ಅವರನ್ನು ಶ್ಲಾಘಿಸಿದ್ದಾರೆ. ಟ್ರೇಲರ್ ಶೇರ್ ಮಾಡಿದ ಅವರು, 'ದಿಸ್ ಗರ್ಲ್ ಈಸ್ ಆನ್ ಫೈಯರ್' ಎಂದು ಬರೆದುಕೊಂಡಿದ್ದಾರೆ.
ತಮನ್ನಾ ಭಾಟಿಯಾ ಪೋಸ್ಟ್: ಇನ್ನೂ ಟ್ರೇಲರ್ ಹಂಚಿಕೊಂಡ ಹಾಲ್ಗೆನ್ನೆ ಚೆಲುವೆ ತಮನ್ನಾ ಭಾಟಿಯಾ, ''ವೇದಾವನ್ನು ಲಘುವಾಗಿ ಪರಿಗಣಿಸಬೇಡಿ. ನನ್ನನ್ನು ನಂಬಿ. ವೇದಾ ಕೇವಲ ಆ್ಯಕ್ಷನ್ ಸಿನಿಮಾ ಅಲ್ಲ. ದೇಶದ ಮೆಚ್ಚಿನ ಸಾಹಸ ನಾಯಕರಲ್ಲಿ ಒಬ್ಬರಾದ ನನ್ನ ಸ್ನೇಹಿತ ಜಾನ್ ಅಬ್ರಹಾಂ ಮತ್ತೊಮ್ಮೆ ಛಾಪು ಮೂಡಿಸಲಿದ್ದಾರೆ. ಈ ಬಾರಿ, ಆ್ಯಕ್ಷನ್ ಮೂಲಕ ವಿಭಿನ್ನ ಕಥೆಯನ್ನು ಹೇಳಲಿದ್ದಾರೆ. ಈ ಜಾನರ್ (ಆ್ಯಕ್ಷನ್) ಅರ್ಥಪೂರ್ಣ ಸಿನಿಮೀಯ ಅನುಭವವನ್ನು ನೀಡಲಿದೆ''.