ಮರ ನೆಡುವ ಅಭಿಯಾನದಲ್ಲಿ ನಟ ಅಕ್ಷಯ್ ಕುಮಾರ್ (ANI) ಮುಂಬೈ:ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಇಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ಮತ್ತು ಮೇಕ್ ಅರ್ಥ್ ಗ್ರೀನ್ ಎಗೇನ್ (ಮೆಗಾ) ಫೌಂಡೇಶನ್ ಆಯೋಜಿಸಿದ್ದ ಮರ ನೆಡುವ ಅಭಿಯಾನದಲ್ಲಿ ಭಾಗವಹಿಸಿದ್ದರು. ನಗರದ ಹಸಿರು ಹೊದಿಕೆ ಸುಧಾರಿಸುವ ಪ್ರಯತ್ನದ ಭಾಗವಾಗಿ ಬಿಎಂಸಿ ಮತ್ತು ಆಡಳಿತಾಧಿಕಾರಿ ಭೂಷಣ್ ಗಗ್ರಾನಿ ಅವರ ನೇತೃತ್ವದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡರು.
ನಟ ಅಕ್ಷಯ್ ಕುಮಾರ್ (ETV Bharat) ಬಿಎಂಸಿಯ ಟ್ರೀ ಅಥಾರಿಟಿಯ ಸಹಭಾಗಿತ್ವದಲ್ಲಿ, ಬಾಂದ್ರಾದ ಖೇರ್ವಾಡಿಯಲ್ಲಿ ಪಶ್ಚಿಮ ಮಾರ್ಗದ ಉದ್ದಕ್ಕೂ 200 ಬಹವಾ ಮರಗಳನ್ನು ನೆಡುವ ಗುರಿ ಇದಾಗಿದೆ. ಈ ಅಭಿಯಾನ ನಗರ ಮಾಲಿನ್ಯವನ್ನು ತಗ್ಗಿಸಲು ಮತ್ತು ನಗರದೊಳಗೆ ಪರಿಸರ ಸುಸ್ಥಿರತೆಯನ್ನು ಉತ್ತೇಜಿಸುವ ಕಾರ್ಯತಂತ್ರದ ಭಾಗವಾಗಿದೆ. ಮರ ನೆಡುವ ಈ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಅಕ್ಷಯ್ ಕುಮಾರ್ ತಮ್ಮನ್ನು ಅಗಲಿದ ಪೋಷಕರಾದ ಹರಿ ಓಂ ಭಾಟಿಯಾ ಮತ್ತು ಅರುಣಾ ಭಾಟಿಯಾ ಅವರಿಗೆ ಶ್ರದ್ಧಾಂಜಲಿ ಕೂಡ ಸಲ್ಲಿಸಿದರು.
ಮರಗಳನ್ನು ನೆಡುವುದು ನಮ್ಮ ಭೂಮಿಗೆ ನಾವು ಮರಳಿ ಕೊಡುವ ಒಂದು ಸರಳ ಮಾರ್ಗ. ನನ್ನ ಹೆತ್ತವರ ಗೌರವಾರ್ಥವಾಗಿ ಈ ಅಭಿಯಾನ ನಡೆಯುತ್ತಿರುವುದರಿಂದ ಈ ಕಾರ್ಯಕ್ರಮ ಇನ್ನಷ್ಟು ವಿಶೇಷ ಅನ್ನಿಸುತ್ತಿದೆ. ಇದು ಅವರ ಪ್ರೀತಿ ಮತ್ತು ಕಾಳಜಿಗೆ ಗೌರವದ ಸೂಚಕ. ಭವಿಷ್ಯದ ಪೀಳಿಗೆಗೆ ಪರಿಸರವನ್ನು ಪೋಷಿಸುವ ಮತ್ತು ರಕ್ಷಿಸುವ ಭರವಸೆ ಕೂಡ ಹೌದು ಎಂದು ಹೇಳಿದರು. ಅಭಿಯಾನದಲ್ಲಿ ರಾಜಕೀಯ ನಾಯಕರು ಅಷ್ಟೇ ಅಲ್ಲದೇ ಸಿನಿಮಾ ತಾರೆಯರು ಭಾಗಿಯಾಗಿದ್ದರು.
ಅಕ್ಷಯ್ ಕುಮಾರ್ ಅಷ್ಟೇ ಅಲ್ಲದೇ ಈ ಮರ ನೆಡುವ ಅಭಿಯಾನಕ್ಕೆ ಸಿನಿಮಾ ತಾರೆಯರಾದ ಅನಿಲ್ ಕಪೂರ್, ಶತ್ರುಘ್ನ ಸಿನ್ಹಾ, ಅಭಿಷೇಕ್ ಬಚ್ಚನ್, ಅನುಪಮ್ ಖೇರ್, ಬಪ್ಪಿ ಲಾಹಿರಿ, ಅಜಯ್ ದೇವಗನ್, ಸೋನು ನಿಗಮ್, ಸಂಗ್ರಾಮ್ ಸಿಂಗ್, ರಣವೀರ್ ಶೋರೆ, ರೋಹಿತ್ ಶೆಟ್ಟಿ, ಹೇಮಾ ಮಾಲಿನಿ, ಸೋನಾಕ್ಷಿ ಸಿನ್ಹಾ ಮತ್ತು ಆಯೇಷಾ ಝುಲ್ಕಾ ಅವರಂತಹ ಅನೇಕರಿಂದ ಬೆಂಬಲ ಸಿಕ್ಕಿದೆ. ಪ್ರತಿವರ್ಷ ಇಂತಿಷ್ಟು ಕಿಲೋ ಮೀಟರ್ ಮರ ನೆಡುವ ಅಭಿಯಾನ ನಡೆಸಿಕೊಂಡು ಬರಲಾಗುತ್ತಿದೆ.
ಸಿನಿಮಾ ವಿಷಯಕ್ಕೆ ಬಂದರೆ ಅಕ್ಷಯ್ ಕುಮಾರ್ ಅವರು ಟೈಗರ್ ಶ್ರಾಫ್ ಜೊತೆಯಲ್ಲಿ ಕೊನೆಯ ಬಾರಿಗೆ 'ಬಡೆ ಮಿಯಾನ್ ಚೋಟೆ ಮಿಯಾನ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ 'ಸರ್ಫಿರಾ' ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಕಡಿಮೆ ವೆಚ್ಚದ ಏರ್ಲೈನ್ ಆರಂಭಿಸಿದ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನ ಆಧರಿಸಿದ ಚಿತ್ರವಾಗಿದೆ. ತಮಿಳಿನಲ್ಲಿ 'ಸೂರರೈ ಪೊಟ್ರು' ಹೆಸರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಸೂರ್ಯ ಕಾಣಿಸಿಕೊಂಡಿದ್ದರು. ಹಣ ಗಳಿಕೆಯಲ್ಲಿ ದಾಖಲೆ ನಿರ್ಮಿಸಿತು.
ಮೂಲತಃ ಸೂರ್ಯ ನಿರ್ವಹಿಸಿದ ಗೋಪಿನಾಥ್ ಪಾತ್ರದಲ್ಲಿ ಅಕ್ಷಯ್ ಕಾಣಿಸಿಕೊಳ್ಳಲಿದ್ದಾರೆ. ಅವರೊಂದಿಗೆ ಪರೇಶ್ ರಾವಲ್, ರಾಧಿಕಾ ಮದನ್, ಆರ್. ಶರತ್ ಕುಮಾರ್ ಮತ್ತು ಸೀಮಾ ಬಿಸ್ವಾಸ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ‘ಸರ್ಫಿರಾ’ ಜುಲೈ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗೆ ಈ ಚಿತ್ರ ಟ್ರೇಲರ್ ಸಹ ಬಿಡುಗಡೆಯಾಗಿದೆ. ತಮಿಳಿನಲ್ಲಿ ಸಿನಿಮಾ ಹೇಗಿತ್ತೊ, ಹಿಂದಿಯಲ್ಲಿಯೂ ಯಥಾವತ್ತು ರೀಮೇಕ್ ಮಾಡಿರುವುದು ಟ್ರೇಲರ್ನಿಂದ ತಿಳಿದು ಬರುತ್ತಿದೆ.
ಇದನ್ನೂ ಓದಿ:ಸೋನಾಕ್ಷಿ ಸಿನ್ಹಾ- ಜಹೀರ್ ಇಕ್ಬಾಲ್ ಅದ್ಧೂರಿ ರಿಸೆಪ್ಷನ್: ನವಜೋಡಿಯ ಸಖತ್ ಡ್ಯಾನ್ಸ್ - Sonakshi Sinha Zaheer Iqbal Dance