ಅಜಿತ್ ಕುಮಾರ್ ಅವರ ಬಹುನಿರೀಕ್ಷಿತ ಚಿತ್ರ 'ವಿದಾಮುಯಾರ್ಚಿ' ಇಂದು ತೆರೆಗಪ್ಪಳಿಸಿತು. ಮಾಗಿಜ್ ತಿರುಮೇನಿ ನಿರ್ದೇಶನದ ಈ ಚಿತ್ರದ ಬಹುತೇಕ ಚಿತ್ರೀಕರಣ ಸಾಗರೋತ್ತರ ಪ್ರದೇಶ ಅಜೆರ್ಬೈಜಾನ್‌ನಲ್ಲಿ ನಡೆದಿದೆ. ಲೈಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ಸುಬಾಸ್ಕರನ್ ಅಲ್ಲಿರಾಜ ಅವರು 200 ಕೋಟಿ ರೂ.ಗಳಿಗೂ ಹೆಚ್ಚು ಬಜೆಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.
'ವಿದಾಮುಯಾರ್ಚಿ' ಮಿಶ್ರ ವಿಮರ್ಶೆಗಳನ್ನು ಗಳಿಸಿದೆ. ಅದಾಗ್ಯೂ, ಬಾಕ್ಸ್ ಆಫೀಸ್‌ನಲ್ಲಿ ಭರವಸೆಯ ಆರಂಭವನ್ನು ಪಡೆಯುವ ಸಾಧ್ಯತೆ ಇದೆ.
ಆರಂಭದಲ್ಲಿ ಸಂಕ್ರಾಂತಿ ಸಂದರ್ಭ ಬಿಡುಗಡೆಯಾಗಲು ನಿಗದಿಯಾಗಿದ್ದ 'ವಿದಾಮುಯಾರ್ಚಿ'ಯ ಚಿತ್ರತಂಡ ಕೆಲ ಕಾರಣಗಳಿಂದ ತನ್ನ ಬಿಡುಗಡೆಯನ್ನು ಮುಂದೂಡಿತು. ಡಿಸೆಂಬರ್ 31ರಂದು, ಲೈಕಾ ಪ್ರೊಡಕ್ಷನ್ಸ್ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಿರುವುದಾಗಿ ತಿಳಿಸಿತ್ತು. "ಅನಿವಾರ್ಯ ಸಂದರ್ಭಗಳಿಂದಾಗಿ, ನಮ್ಮ ಚಿತ್ರ 'ವಿದಾಮುಯಾರ್ಚಿ' ಪೊಂಗಲ್ ದಿನದಂದು ಬಿಡುಗಡೆ ಆಗುತ್ತಿಲ್ಲ" ಎಂಬ ಪೋಸ್ಟ್ ಹಂಚಿಕೊಂಡಿತ್ತು. ಈ ಹೇಳಿಕೆಯು ಹಲವು ಊಹಾಪೋಹಗಳಿಗೆ ಕಾರಣವಾಯ್ತು. 1997ರ ಆ್ಯಕ್ಷನ್ ಚಿತ್ರ 'ಬ್ರೇಕ್‌ಡೌನ್' (ಕರ್ಟ್ ರಸೆಲ್ ನಟಿಸಿದ ಚಿತ್ರ) ರೀಮೇಕ್ ಹಕ್ಕುಗಳಿಗಾಗಿ ತಯಾರಕರು ಗಣನೀಯ ಮೊತ್ತವನ್ನು ಪಾವತಿಸಬೇಕಾಗಿರುವುದರಿಂದ ಈ ಮುಂದೂಡಿಕೆಗೆ ಕಾರಣ ಆಗಿರಬಹುದು ಎಂದು ಊಹಿಸಿದ್ದರು. ಅದಾಗ್ಯೂ, ಚಿತ್ರ ತಯಾರಕರು ಈ ವಿಷಯದ ಬಗ್ಗೆ ಮೌನ ವಹಿಸಿದ್ದಾರೆ.
ವಿದಾಮುಯಾರ್ಚಿ ಬಾಕ್ಸ್ ಆಫೀಸ್ ಕಲೆಕ್ಷನ್ - ಆರಂಭಿಕ ಅಂದಾಜು: ಬಿಡುಗಡೆ ವಿಳಂಬದ ಹೊರತಾಗಿಯೂ ತನ್ನ ಮೊದಲ ದಿನದಂದು ಉತ್ತಮ ಕಲೆಕ್ಷನ್ ಮಾಡುವ ನಿರೀಕ್ಷೆಯಲ್ಲಿದೆ ಚಿತ್ರತಂಡ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಈ ಚಿತ್ರ ಈಗಾಗಲೇ ಭಾರತದಲ್ಲಿ ಪ್ರೀ-ಸೇಲ್ಸ್ ಮೂಲಕ 19.28 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿದೆ. ಇಂಡಸ್ಟ್ರಿ ವಿಶ್ಲೇಷಕರ ಪ್ರಕಾರ, ಮೊದಲ ದಿನದ ದೇಶೀಯ ಗಳಿಕೆ 21 ಕೋಟಿ ರೂಪಾಯಿಗಳಾಗುವ ನಿರೀಕ್ಷೆ ಇದೆ. ತಮಿಳುನಾಡಿನೊಂದರಿಂದಲೇ 16.5 ಕೋಟಿ ರೂ. ಬಂದಿದೆ. ವಿದೇಶಿ ಮಾರುಕಟ್ಟೆಯಲ್ಲಿ, ಸಿನಿಮಾದ ಪ್ರೀ ಸೇಲ್ಸ್ 29.12 ಕೋಟಿ ರೂಪಾಯಿ ದಾಟಿದೆ. ಆರಂಭಿಕ ಟ್ರೆಂಡ್ಸ್ ಗಮನಿಸಿದ್ರೆ, ವಿದಾಮುಯಾರ್ಚಿ ಸಿನಿಮಾವು ವಿಶ್ವದಾದ್ಯಂತ 50 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್ ಮಾಡುವ ಅಜಿತ್ ಕುಮಾರ್ ಅವರ ಮೊದಲ ಚಿತ್ರವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:ಅಮೀರ್ ಖಾನ್ ಪುತ್ರ ಜುನೈದ್ 'ಲವ್ಯಾಪ‘ ಈವೆಂಟ್ನಲ್ಲಿ ಶಾರುಖ್, ಸಲ್ಮಾನ್: ಖಾನ್ಸ್ ವಿಡಿಯೋ ಇಲ್ಲಿದೆ
150 ನಿಮಿಷಗಳ ರನ್ ಟೈಮ್ ಹೊಂದಿರುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಅಜಿತ್ ಕುಮಾರ್ ಜೊತೆಗೆ ಈ ಚಿತ್ರದಲ್ಲಿ ತ್ರಿಶಾ, ರೆಜಿನಾ ಕ್ಯಾಸಂದ್ರ ಮತ್ತು ಅರ್ಜುನ್ ಸರ್ಜಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದು, ಓಂ ಪ್ರಕಾಶ್ ಕ್ಯಾಮರಾ ಕೈಚಳಕವಿದೆ.
ಇದನ್ನೂ ಓದಿ:ಪ್ರಶಾಂತ್ ನೀಲ್ ಸಿನಿಮಾದಲ್ಲಿ ಮಲಯಾಳಂ ನಟ ಟೊವಿನೋ ಥಾಮಸ್: ಮಂಗಳೂರಿನಲ್ಲಿ ಶೂಟಿಂಗ್