ಸಿನಿಮಾಗಳು ಸೂಪರ್ ಹಿಟ್ ಆಗಿ, ಉತ್ತಮ ಗಳಿಕೆ ಮಾಡಿದಾಗ ಚಿತ್ರ ನಿರ್ಮಾಪಕರು ನಟ ಹಾಗೂ ನಿರ್ದೇಶಕರಿಗೆ ಐಷಾರಾಮಿ ಕಾರು ಸೇರಿದಂತೆ ಇತರೆ ಉಡುಗೊರೆ ನೀಡುವುದು ಚಿತ್ರರಂಗದಲ್ಲಿ ಸಾಮಾನ್ಯ. ಆದರೆ, 'ಅಜಾಗ್ರತ' ನಿರ್ದೇಶಕರು ಚಿತ್ರ ಬಿಡುಗಡೆಗೆ ಮುನ್ನವೇ ತಮ್ಮ ಸಿನಿಮಾದ ನಿರ್ದೇಶಕರಿಗೆ ಅರ್ಧ ಕೋಟಿ ಬೆಲೆಯ ಕಾರು ನೀಡಿ ಸದ್ದು ಮಾಡಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಅಜಾಗ್ರತ' ಸಿನಿಮಾ ನಿರ್ದೇಶಕ ಎಂ ಶಶಿಧರ್ಗೆ ಐಷಾರಾಮಿ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಸದ್ಯ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿದ್ದು, ಚಿತ್ರದ ರಫ್ ಕಾಪಿ ಹೊರ ಬಂದಿದೆ. ಈ ಚಿತ್ರದ ರಫ್ ಕಾಪಿ ನೋಡಿದ ನಿರ್ಮಾಪಕರಾಗಿರುವ ನಟಿ ರಾಧಿಕಾ ಸಹೋದರ ರವಿರಾಜ್ ಬಹಳ ಮೆಚ್ಚಿಕೊಂಡಿದ್ದಾರೆ. ಈ ಖುಷಿಯನ್ನು ಅದ್ಧೂರಿ ಉಡುಗೊರೆ ಮೂಲಕ ವ್ಯಕ್ತಪಡಿಸಿದ್ದು, ನಿರ್ದೇಶಕರ ಕೆಲಸವನ್ನು ಪ್ರಶಂಸಿದ್ದಾರೆ.
ನಿರ್ದೇಶಕರ ಕೆಲಸಕ್ಕೆ ಮೆಚ್ಚುಗೆ: ಚಿತ್ರ ಆರಂಭಕ್ಕೆ ಮುನ್ನ ನಿರ್ದೇಶಕರು ಕಥೆ ಹೇಳಿದ ರೀತಿಯಲ್ಲೇ ನಿರ್ಮಾಣ ಕೂಡ ನಡೆದಿದ್ದು, ಉತ್ತಮವಾಗಿ ಮೂಡಿ ಬಂದಿದೆ. ಚಿತ್ರ ನೋಡಿ ನನಗೆ ತುಂಬಾ ಖುಷಿಯಾಗಿದೆ. ಚಿತ್ರವನ್ನು ಉತ್ತಮವಾಗಿ ನಿರ್ದೇಶಿಸಿರುವ ನಿರ್ದೇಶಕರಿಗೆ ಉಡುಗೊರೆ ನೀಡುವ ಮನಸ್ಸಾಯಿತು. ಹಾಗಾಗಿ ಫಾರ್ಚ್ಯೂನರ್ ಕಾರನ್ನು ಉಡುಗೊರೆಯಾಗಿ ನೀಡುತ್ತೀದ್ದೇನೆ ಎಂದು ನಿರ್ಮಾಪಕ ರವಿರಾಜ್ ಹೇಳಿದರು. ಈ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿರುವುದು ವಿಶೇಷ.