ಹೈದರಾಬಾದ್: ಭಾರತೀಯ ಚಿತ್ರರಂಗದ ಜನಪ್ರಿಯ ತಾರಾದಂಪತಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಸುಖ ಸಂಸಾರ ಮುಂದುವರಿಸಿದ್ದರೂ ಕೂಡಾ ಸೋಷಿಯಲ್ ಮೀಡಿಯಾದಲ್ಲಿ 'ಕುಟುಂಬದಲ್ಲಿ ಬಿರುಕು' ವದಂತಿ ಮುಂದುವರಿದಿದೆ. ಬಚ್ಚನ್ ಕುಟುಂಬದ ಬಗೆಗಿನ ಊಹಾಪೋಹಗಳಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಗೊಂದಲಕ್ಕೊಳಗಾಗಿದ್ದಾರೆ. ವಂದಂತಿಗಳನ್ನು ನಂಬಬೇಕೋ ಬಿಡಬೇಕೋ ಎನ್ನುವ ಗೊಂದಲದಲ್ಲಿ ನೆಟಿಜನ್ಗಳಿದ್ದಾರೆ. ಆದರೆ ತಾರಾ ದಂಪತಿ ಮಾತ್ರ ಯಾವುದಕ್ಕೂ ಕಿವಿಗೊಡದೇ ಮೌನ ಮುಂದುವರಿಸಿದ್ದಾರೆ.
ಇತ್ತೀಚೆಗೆ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೋಡಿಯ ಹೈ-ಪ್ರೊಫೈಲ್ ವಿವಾಹ ಸಮಾರಂಭದಲ್ಲಿ ಅಮಿತಾಭ್ ಬಚ್ಚನ್, ಪತ್ನಿ ಜಯಾ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್ ಮತ್ತು ಪುತ್ರಿ ಶ್ವೇತಾ ಬಚ್ಚನ್ ಒಟ್ಟಿಗೆ ಆಗಮಿಸಿ ಪಾಪರಾಜಿಗಳ ಕ್ಯಾಮರಾಗಳಿಗೆ ಪೋಸ್ ನೀಡಿದ್ದರು. ಮತ್ತೊಂದೆಡೆ ಐಶ್ವರ್ಯಾ ರೈ ಬಚ್ಚನ್ ಮತ್ತು ಪುತ್ರಿ ಆರಾಧ್ಯ ಪ್ರತ್ಯೇಕವಾಗಿ ಕಾರ್ಯಕ್ರಮ ಪ್ರವೇಶಿಸಿದರು. ಇದು ಕುಟುಂಬದೊಳಗಿನ ಬಿರುಕು ವದಂತಿಗೆ ತುಪ್ಪ ಸುರಿದಂತಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾದವು.
ಮರುದಿನ ಆರತಕ್ಷತೆ ಕಾರ್ಯಕ್ರಮದಲ್ಲೂ ಇದೇ ಪರಿಸ್ಥಿತಿ. ಮತ್ತೊಮ್ಮೆ ಬಚ್ಚನ್ ಕುಟುಂಬ ಐಶ್ವರ್ಯಾ ಮತ್ತು ಆರಾಧ್ಯ ಇಲ್ಲದೇ ಒಟ್ಟಿಗೆ ಕಾಣಿಸಿಕೊಂಡು, ಕ್ಯಾಮರಾಗಳಿಗೆ ಪೋಸ್ ನೀಡಿತು. ಅವರ ಪ್ರತ್ಯೇಕ ನೋಟ ವದಂತಿ ಹೆಚ್ಚಳಕ್ಕೆ ಕಾರಣವಾಯ್ತು. ಆದರೆ ಕೆಲ ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಐಶ್ವರ್ಯಾ ಅವರ ಸಂತೋಷಕರ ಕ್ಷಣ ಮತ್ತು ಬಚ್ಚನ್ ಕುಟುಂಬದೊಂದಿಗಿನ ಆತ್ಮೀಯ ಕ್ಷಣಗಳೂ ಕೂಡಾ ಇಂಟರ್ನೆಟ್ನಲ್ಲಿ ಲಭ್ಯವಿದೆ.
ಸಂತೋಷದ ಸಮಯ ನೆನಪಿಸುವ ಸುಂದರ ಫೋಟೋಗಳು:ಬಚ್ಚನ್ ಕುಟುಂಬ ಮತ್ತು ಐಶ್ವರ್ಯಾ ರೈ ಅವರ ಅಭಿಮಾನಿಗಳು ಕಂಪ್ಲೀಟ್ ಫ್ಯಾಮಿಲಿ ಮತ್ತೆ ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಳ್ಳಬೇಕೆಂಬ ಕಾತರದಲ್ಲಿದ್ದಾರೆ. ಈ ಹೊತ್ತಿನಲ್ಲಿ ಸಂತೋಷಕರ ಸಮಯವನ್ನು ನೆನಪಿಸುವ ಕೆಲ ಸುಂದರ ಫೋಟೋಗಳನ್ನು ನಿಮ್ಮ ಮಂದಿಡುತ್ತಿದ್ದೇವೆ. ಇತ್ತೀಚಿನ ಘಟನೆಗಳು ಜನರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದರೂ, ಹಿಂದಿನ ಕ್ಷಣಗಳ ಸೌಂದರ್ಯವನ್ನು ಪ್ರಶಂಸಿಸುವುದು ಕೂಡಾ ಅತ್ಯಗತ್ಯ. ಬಚ್ಚನ್ ಕುಟುಂಬದೊಂದಿಗೆ ಐಶ್ವರ್ಯಾ ಕಳೆದ ಕೆಲ ಕ್ಷಣಗಳನ್ನು ನೋಡೋಣ ಬನ್ನಿ.