ಬೆಂಗಳೂರು: ಸಿನಿಮಾ ಅರ್ಧಕ್ಕೆ ಸ್ಥಗಿತಗೊಳಿಸಿದ ನಿರ್ದೇಶಕನನ್ನು ಬೆದರಿಸಲು ಗುಂಡು ಹಾರಿಸಿದ ಆರೋಪದಡಿ ನಟ ತಾಂಡವ್ ರಾಮ್ ಅವರನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 'ಮುಗಿಲ್ ಪೇಟೆ' ಸಿನಿಮಾ ಖ್ಯಾತಿಯ ನಿರ್ದೇಶಕ ಭರತ್ ಎಸ್ ನಾವುಂಡ ಅವರನ್ನು ಬೆದರಿಸಲು ಏರ್ ಫೈರ್ ಮಾಡಿದ್ದ ತಾಂಡವ್ ರಾಮ್ ಅವರನ್ನ ಹತ್ಯೆ ಯತ್ನದ ಆರೋಪದಡಿ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
'ಜೋಡಿಹಕ್ಕಿ', 'ಭೂಮಿಗೆ ಬಂದ ಭಗವಂತ' ಮತ್ತಿತರ ಧಾರವಾಹಿ ಹಾಗೂ 'ಒಂದ್ ಕಥೆ ಹೇಳ್ಲಾ' ಸಿನಿಮಾಗಳಲ್ಲಿ ನಟಿಸಿರುವ ತಾಂಡವ್ ರಾಮ್ ನಟನೆಯಲ್ಲಿ ಸಿನಿಮಾವೊಂದನ್ನು ಭರತ್ ನಾವುಂಡ ನಿರ್ದೇಶಿಸುತ್ತಿದ್ದರು. ಆದರೆ, ಕಾರಣಾಂತರಗಳಿಂದ ಸಿನಿಮಾದ ಕೆಲಸಗಳು ಅರ್ಧಕ್ಕೆ ನಿಂತಿದ್ದವು. ಸಿನಿಮಾ ವಿಚಾರವಾಗಿ ಮಾತನಾಡಲು ಚಂದ್ರಾಲೇಔಟಿನಲ್ಲಿರುವ ಭರತ್ ಅವರ ಕಚೇರಿಗೆ ಸೋಮವಾರ ತಾಂಡವ್ ರಾಮ್ ಬಂದಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಾಗ ಸಿಟ್ಟಿಗೆದ್ದ ತಾಂಡವ್ ರಾಮ್, ತಮ್ಮ ಬಳಿ ಇದ್ದ ಪರವಾನಗಿ ಹೊಂದಿರುವ ಪಿಸ್ತೂಲ್‌ನಿಂದ ಏರ್ ಫೈರ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ನಿರ್ದೇಶಕ ಭರತ್ ನಾವುಂಡ, ''ಮೂರು ವರ್ಷಗಳಿಂದ 'ದೇವನಾಂಪ್ರಿಯ' ಎಂಬ ಹೆಸರಿನ ಸಿನಿಮಾ ನಿರ್ದೇಶಿಸುತ್ತಿದ್ದೆ. ಸಿನಿಮಾದ ಚಿತ್ರಕತೆಯಲ್ಲಿ ತಾಂಡವ್ ರಾಮ್ ಅವರದ್ದೂ ಸಹ ಪಾತ್ರವಿತ್ತು. ಜೂನ್‌ನಲ್ಲಿ ಚಿತ್ರದ ಸೆಕೆಂಡ್ ಶೆಡ್ಯೂಲ್ ಆದ ನಂತರ ತಂತ್ರಜ್ಞರಿಗೆ ಹಣ ಸರಿಯಾಗೆ ಸಂದಾಯವಾಗದಿದ್ದರಿಂದ ಚಿತ್ರೀಕರಣ ಮುಂದುವರೆಯಲಿಲ್ಲ. ಸೋಮವಾರ ಮಾತುಕತೆಗೆ ಕರೆದಾಗ ಅವಾಚ್ಯವಾಗಿ ನಿಂದಿಸಿ, ಅವರ ಕಡೆ ಹುಡುಗನಿಂದ ಕಾರಿನಲ್ಲಿದ್ದ ಪಿಸ್ತೂಲ್ ತರಿಸಿ ಹಣೆಗಿಟ್ಟರು. ನನ್ನ ಜೊತೆಗಿದ್ದ ಎಡಿಟರ್ ಒಬ್ಬರು ಅವರನ್ನು ತಳ್ಳಿದ್ದರಿಂದ ಗುಂಡೇಟಿನಿಂದ ನಾನು ಪಾರಾಗಿದ್ದೇನೆ. ಪೂರ್ವನಿಯೋಜಿತವಾಗಿ ಈ ರೀತಿ ಮಾಡಿದ್ದಾರೆ ಅಂತ ಅನ್ನಿಸಿದ್ದರಿಂದ ನಾನು ಚಲನಚಿತ್ರ ವಾಣಿಜ್ಯ ಮಂಡಳಿಯವರ ಗಮನಕ್ಕೆ ತಂದೆ. ವಾಣಿಜ್ಯ ಮಂಡಳಿಯವರು ದೂರು ಕೊಡಲು ಸೂಚಿಸಿದ್ದರಿಂದ ಪೊಲೀಸರಿಗೆ ದೂರು ನೀಡಿದ್ದೇನೆ'' ಎಂದು ತಿಳಿಸಿದ್ದಾರೆ.