ಬಾಲಿವುಡ್‌ನಲ್ಲಿ ಭದ್ರ ಸ್ಥಾನ ಪಡೆದಿರುವ ಅನೇಕ ನಾಯಕಿಯರು ದಕ್ಷಿಣ ಪ್ರೇಕ್ಷಕರಿಗೂ ಪರಿಚಿತರು. ಆ ಪಟ್ಟಿಯಲ್ಲಿ ಸೋನಾಲಿ ಬೇಂದ್ರೆ (49) ಕೂಡ ಒಬ್ಬರು. ಹಲವು ಭಾಷೆಗಳಲ್ಲಿ ನಟಿಸಿ ಹೆಸರು ಸಂಪಾದಿಸಿದ್ದಾರೆ. ನಟಿಯ ವೆಬ್ ಸೀರಿಸ್ 'ದಿ ಬ್ರೋಕನ್ ನ್ಯೂಸ್'ನ ಎರಡನೇ ಸೀಸನ್ ಮೇ 3ರಂದು ಬರಲಿದೆ. ಈ ಹಿನ್ನೆಲೆ ಸಂದರ್ಶನದಲ್ಲಿ ಭಾಗಿಯಾಗಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ವೃತ್ತಿಜೀವನ, ಪಾತ್ರಗಳ ಆಯ್ಕೆ ಮತ್ತು ತಾವು ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ.
"ನಾನು ತರಬೇತಿ ಪಡೆದ ನೃತ್ಯಗಾರ್ತಿಯಲ್ಲ. ಸಿನಿಮಾಗಳಿಗೆ ಎಂಟ್ರಿ ಕೊಟ್ಟಾಗ ನನ್ನ ನೃತ್ಯದ ಬಗ್ಗೆ ಸಾಕಷ್ಟು ಟೀಕೆಗಳು ಎದುರಾದವು. ಅನೇಕ ನೃತ್ಯ ನಿರ್ದೇಶಕರು ನನ್ನನ್ನು ಗದರಿಸುತ್ತಿದ್ದರು. ಆಗ ನನಗೆ ಡ್ಯಾನ್ಸ್ ಮಾಡಲು ಸಾಧ್ಯವಾಗದಿದ್ದರೆ, ನಾನು ನಟಿಯಾಗುವುದಿಲ್ಲ ಎಂದು ಭಾವಿಸಿದೆ. ನಂತರ ಎಷ್ಟೇ ಸಮಯ ಸಿಕ್ಕರೂ ಡ್ಯಾನ್ಸ್ ಅಭ್ಯಾಸ ಮಾಡಲು ಶುರು ಮಾಡಿದೆ. ತರಬೇತಿ ಪಡೆಯುತ್ತಿದ್ದೆ. ಆದರೆ ಐದು ಚಿತ್ರಗಳ ನಂತರ ನನಗೆ 'ಹಮ್ಮ ಹಮ್ಮ' ಹಾಡು ಸಿಕ್ಕಿತು ಎಂದು ತಿಳಿಸಿದರು.
ಇಂಡಸ್ಟ್ರಿಯಲ್ಲಿ ಮುಂದುವರಿಯಲು ಧೈರ್ಯ ಸಿಕ್ಕಿತು: "ಪ್ರಭುದೇವ ಸಹೋದರ ರಾಜು ಜೊತೆ ಡ್ಯಾನ್ಸ್ ಮಾಡುವಾಗ ಅವರ ತಂದೆ ಸುಂದರ್ ಮಾಸ್ಟರ್ ಕೂಡ ಸೆಟ್‌ನಲ್ಲಿದ್ದರು. ಮಣಿರತ್ನಂ ಸರ್ ಯಾವಾಗಲೂ ಲಾಂಗ್ ಶಾಟ್‌ಗಳನ್ನು ತೆಗೆಯುತ್ತಿದ್ದರು. ಹಾಗಾಗಿ ಇಡೀ ಹಾಡನ್ನು ಒಂದೇ ಶಾಟ್‌ನಲ್ಲಿ ಪೂರ್ಣಗೊಳಿಸಿದ್ದೇವೆ. ಆಗ ಸುಂದರ್ ಮಾಸ್ಟರ್ ನನ್ನ ಡ್ಯಾನ್ಸ್ ಇಷ್ಟಪಟ್ಟು 100 ರೂ. ಕೊಟ್ಟಿದ್ದರು. ಇದು ನನಗೆ ಇಂಡಸ್ಟ್ರಿಯಲ್ಲಿ ಮುಂದುವರಿಯಲು ಧೈರ್ಯ ಕೊಟ್ಟಿತು'' ಎಂದು ತಿಳಿಸಿದರು.
ಪ್ರಸ್ತುತ ನನ್ನ ವಯಸ್ಸಿಗೆ ತಕ್ಕಂತ ಪಾತ್ರಗಳು ಸಿಗುತ್ತಿವೆ ಎಂದು ನಾನು ಭಾವಿಸುತ್ತೇನೆ. ಚಿತ್ರರಂಗದಲ್ಲಿ ಮಹಿಳಾ ಕಲಾವಿದರು ಅವಕಾಶಗಳಿಗಾಗಿ ಹೋರಾಡಬೇಕಾಗಿದೆ. ಆದರೀಗ ಬದಲಾವಣೆಗಳು ಕಂಡುಬರುತ್ತಿವೆ. ಬದಲಾವಣೆಗಳನ್ನು ನೋಡಿ ಸಂತೋಷವಾಗಿದೆ ಎಂದು ತಿಳಿಸಿದರು.