ಸಿನಿಮಾಗಳ ಜೊತೆ ಜೊತೆಗೆ ಸಾಮಾಜಿಕ ಕೆಲಸಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಕನ್ನಡದ ಜನಪ್ರಿಯ ನಟಿ ಸಂಯುಕ್ತ ಹೊರನಾಡು. ಪ್ರಾಣ ಅನಿಮಲ್ ಫೌಂಡೇಶನ್ ಅಡಿಯಲ್ಲಿ ಪ್ರಾಣಿಗಳ ರಕ್ಷಣೆಗೆ ಆ್ಯಂಬುಲೆನ್ಸ್ ಸೇವೆ ಒದಗಿಸುವ ಮೂಲಕ ಪ್ರಾಣಿಪ್ರಿಯರ ಮೆಚ್ಚುಗೆ ಪಡೆದವರಿವರು. ಸಂಯುಕ್ತಾ ಕೂಡ ಪ್ರಾಣಿ ಪ್ರಿಯೆ. ಶ್ವಾನ, ಮೊಲ ಎಂದರೆ ಸಂಯುಕ್ತಾ ಹೊರನಾಡು ಅವರಿಗೆ ಎಲ್ಲಿಲ್ಲದ ಪ್ರೀತಿ. ಇದೀಗ ಸಂಯುಕ್ತ ತಮ್ಮದೇ ಪ್ರಾಣ ಅನಿಮಲ್ ಫೌಂಡೇಶನ್ ಹಾಗೂ ಟೆಕಿಯಾನ್ ಸಂಸ್ಥೆ ಸಹಯೋಗದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿಯನ್ನು ದತ್ತು ಪಡೆದಿದ್ದಾರೆ.
28 ತಿಂಗಳ ಸಿಂಚನ ಎಂಬ ಹೆಣ್ಣು ಹುಲಿ ಮರಿಯನ್ನು ದತ್ತು ಪಡೆದಿದ್ದಾರೆ. ಇದು ನರದೌರ್ಬಲ್ಯ ಸಮಸ್ಯೆ ಎದುರಿಸುತ್ತಿರುವುದರಿಂದ ಕಾಡಿನಲ್ಲಿ ಸ್ವತಂತ್ರವಾಗಿ ವಾಸಿಸಲು ಕಷ್ಟ ಸಾಧ್ಯವಾಗಿರುವುದರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಂರಕ್ಷಣಾ ಕೇಂದ್ರ ಕಾಳಜಿ ವಹಿಸುತ್ತಿದೆ. ದತ್ತು ಸ್ವೀಕೃತಿಯಲ್ಲಿ ಅದರ ದಿನನಿತ್ಯದ ಆಹಾರ, ನಿರ್ವಹಣೆ ಮತ್ತು ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗುತ್ತದೆ.
ಟೆಕಿಯಾನ್ ಸಂಸ್ಥೆ ಮುಖ್ಯಸ್ಥ ರಾಣಾ ರೊಬಿಲ್ಡ್ ಮಾತನಾಡಿ, ಪ್ರಾಣ ಅನಿಮಲ್ ಫೌಂಡೇಶನ್ ಹಾಗೂ ಬನ್ನೇರುಘಟ್ಟ ಜೈವಿಕ ಉದ್ಯಾನದ ಅಧಿಕಾರಿಗಳಿಗೆ ಧನ್ಯವಾದಗಳು. ಆರೋಗ್ಯ, ಶಿಕ್ಷಣ ಹಾಗೂ ಸಮಾನತೆ ಮತ್ತು ಸುಸ್ಥಿರತೆ ಸಿಎಸ್ಆರ್ ಮೂಲ ಉದ್ದೇಶ ಎಂದು ತಿಳಿಸಿದರು.
ನಟಿ ಸಂಯುಕ್ತ ಹೊರನಾಡು ಮಾತನಾಡಿ, ಟೆಕಿಯಾನ್ ಜೊತೆ ಕೈ ಜೋಡಿಸಿರುವುದು ಖುಷಿ ಕೊಟ್ಟಿದೆ. ತೊಂದರೆಗೆ ಒಳಗಾದ ಪ್ರಾಣಿಗಳನ್ನು ದತ್ತು ಪಡೆದಿರುವುದಕ್ಕೆ ಟೆಕಿಯಾನ್ಗೆ ಧನ್ಯವಾದಗಳು ಎಂದು ತಿಳಿಸಿದರು.