ಬೆಂಗಳೂರು: ರಂಗಭೂಮಿ ಕಲಾವಿದರು ಅಭಿನಯಿಸಿದ್ದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತೆರೆಕಂಡ ದಿನವೇ ಕಾನೂನು ಅಡೆತಡೆ ಎದುರಿಸಿತ್ತು. ಈ ಚಿತ್ರ ರಿಲೀಸ್ ಆಗಬಾರದೆಂದು ಮೋಹಕತಾರೆ ರಮ್ಯಾ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ಕ್ವೀನ್ ಇಂದು ಕೋರ್ಟ್ಗೆ ಹಾಜರಾದರು.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ವಿರುದ್ಧ ಕೇಸ್ ಹಾಕಿದ್ದ ಚಂದನವನದ ತಾರೆ ನಗರದ ವಾಣಿಜ್ಯ ಸಂಕೀರ್ಣ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದರು. 2024ರ ಜುಲೈನಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ನಿರ್ಮಾಪಕರ ಮೇಲೆ ಕೇಸ್ ಹಾಕಿದ್ದರು. ಸಿನಿಮಾ ರಿಲೀಸ್ಗೆ ತಡೆಯಾಜ್ಞೆ ಕೋರುವುದರ ಜೊತೆಗೆ ಒಂದು ಕೋಟಿ ರೂ. ಪರಿಹಾರ ನೀಡುವಂತೆ ಪ್ರಕರಣ ದಾಖಲಿಸಿದ್ದರು.
ತಮ್ಮ ಅನುಮತಿ ಪಡೆಯದೇ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದ ಟ್ರೇಲರ್ ಹಾಗೂ ಸಿನಿಮಾದಲ್ಲಿ ತಮ್ಮ ದೃಶ್ಯಗಳ ಬಳಕೆ ಮಾಡಿರುವುದಾಗಿ ಆರೋಪ ಹೊರಿಸಿದ್ದರು. ದೃಶ್ಯಗಳನ್ನು ತೆಗೆದುಹಾಕುವಂತೆ ದಾವೆ ಹೂಡಿದ್ದರು. ಕೇವಲ ಸಿನಿಮಾದ ಪ್ರೋಮೋ ಶೂಟ್ಗಾಗಿ ಅಷ್ಟೇ ಚಿತ್ರೀಕರಿಸಲು ರಮ್ಯಾ ಅನುಮತಿ ಕೊಟ್ಟಿರುವುದಾಗಿ ತಿಳಿಸಿದ್ದರು. ಆದ್ರೆ ಚಿತ್ರತಂಡ ಟ್ರೇಲರ್ ಹಾಗೂ ಸಿನಿಮಾದಲ್ಲಿ ದೃಶ್ಯಗಳನ್ನು ಬಳಸಿಕೊಂಡಿದೆ ಎಂದು ದೂರಿದ್ದರು.
ಲೆಕ್ಚರರ್ ಪಾತ್ರದಲ್ಲಿ ಮೋಹಕತಾರೆ ರಮ್ಯಾ ಕಾಣಿಸಿಕೊಂಡಿದ್ದರು. ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಈ ಚಿತ್ರವನ್ನು ವರುಣ್ ಹಾಗೂ ಪ್ರಜ್ವಲ್ ಬಿ. ಪಿ ನಿರ್ಮಾಣ ಮಾಡಿದ್ದು, ಜುಲೈ 21ರಂದು ತೆರೆಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.