ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಅವರಿಗೆ ಇಂದು ಮಧ್ಯಂತರ ಜಾಮೀನು ಸಿಕ್ಕಿದೆ. ಹೈಕೋರ್ಟ್ ಅವರಿಗೆ ಆರು ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆರೋಗ್ಯ ತಪಾಸಣೆಗಾಗಿ ಜಾಮೀನು ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಈ ಆದೇಶ ಹೊರಡಿಸಿದ್ದಾರೆ. ಈ ಬೆನ್ನಲ್ಲೇ ಕೆಲ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದ ನಟಿ ರಚಿತಾ ರಾಮ್ ''ಬುಲ್ ಬುಲ್'' ಚಿತ್ರದ ಮೂಲಕ ಹಿರಿತೆರೆ ಪ್ರವೇಶಿಸಿದರು. ಈ ಸಿನಿಮಾದಲ್ಲಿ ದರ್ಶನ್ ಜೊತೆ ತೆರೆಹಂಚಿಕೊಂಡಿದ್ದರು. ರಚಿತಾ ಅವರು, ದರ್ಶನ್ ಬಗ್ಗೆ ಸಾಕಷ್ಟು ಗೌರವ ಇಟ್ಟುಕೊಂಡಿದ್ದಾರೆ. ತಮ್ಮ ಗುರು ಎಂದೇ ಭಾವಿಸಿದ್ದಾರೆ. ಆದ್ರೆ ಕೊಲೆ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ ಅನ್ನೋ ವಿಷಯ ನಟಿಗೆ ನಂಬಲಾಗಿರಲಿಲ್ಲ. ಇದೀಗ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, ರಚಿತಾ ರಾಮ್ ಈ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ವೆರಿ ಸಿಂಪಲ್ ಪೋಸ್ಟ್ ಶೇರ್ ಮಾಡಿದ್ದಾರೆ. ಅದರಲ್ಲಿ ನಟಿ 'ಕಾಲಾಯ ತಸ್ಮೈ ನಮಃ' ಎಂದು ಖುದ್ದು ಹೇಳಿರುವ ದೃಶ್ಯವಿದೆ. ಹಿನ್ನೆಲೆಯಲ್ಲಿ ದರ್ಶನ್ ಅವರ ಸೂಪರ್ ಹಿಟ್ ಚಿತ್ರ 'ನವಗ್ರಹ'ದ ಫೇಮಸ್ ಮ್ಯೂಸಿಕ್ ಕೇಳಿಬಂದಿದೆ. ಈ ಮೂಲಕ ಡಿಂಪಲ್ ಕ್ವೀನ್ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.