ಹುಬ್ಬಳ್ಳಿ: ಅವಳಿ ನಗರ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಧಾರವಾಡ ಪ್ರತ್ಯೇಕ ಪಾಲಿಕೆಯಾಗಬೇಕು ಎಂಬ ದಶಕಗಳ ಕನಸು ಈಗ ಈಡೇರಿದಂತಾಗಿದೆ. ರಾಜ್ಯದ ಎರಡನೇ ಅತೀ ದೊಡ್ಡ ಮಹಾನಗರ ಪಾಲಿಕೆ ಈಗ ಪರಸ್ಪರ ಸ್ವತಂತ್ರವಾಗಲಿವೆ. ಇದರಿಂದ ಬೆಂಗಳೂರು ಮಾದರಿ ಬೃಹತ್ ಮಹಾನಗರ ಪಾಲಿಕೆ ಕನಸು ಛಿದ್ರವಾಗಲಿದೆ. ಪ್ರತ್ಯೇಕ ಮಹಾನಗರ ಪಾಲಿಕೆ ಹಲವು ಸಾಧಕ- ಬಾಧಕಗಳನ್ನು ಒಳಗೊಂಡಿದೆ.
ದಶಕಗಳ ಹೋರಾಟಕ್ಕೆ ಸಂದ ಫಲ: ಧಾರವಾಡ ಹೊಸ ಪಾಲಿಕೆ ರಚನೆ 24 ವರ್ಷಗಳಿಂದ ಕೇಳಿ ಬರುತ್ತಿದ್ದ ಪ್ರತ್ಯೇಕ ಪಾಲಿಕೆ ಕೂಗು, ಅನೇಕ ಹೋರಾಟಗಳು, ಲಕ್ಷಾಂತರ ಜನರ ಸಹಿ ಸಂಗ್ರಹದ ಪ್ರತಿಫಲವಾಗಿದೆ.
ಪ್ರತ್ಯೇಕ ಕೂಗಿಗೆ ಪ್ರಮುಖ ಕಾರಣಗಳೇನು?: ಅಭಿವೃದ್ಧಿ ಮತ್ತು ಅನುದಾನದ ದೃಷ್ಟಿಯಿಂದ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಯಾಗಬೇಕು ಎಂಬ ಕೂಗು ದಶಕಗಳಿಂದ ಕೇಳಿಬರುತ್ತಿತ್ತು. ಇದಕ್ಕೆ ಇನ್ನೊಂದು ಪ್ರಮುಖ ಕಾರಣ ಎಂದರೆ ಧಾರವಾಡ ನಾಗರಿಕರಿಗೆ ಆಡಳಿತ ದೂರವಿತ್ತು. ಸ್ಥಳೀಯ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಅಧಿಕಾರಿಗಳೇ ಇರಲಿಲ್ಲ. ಮಂಗಳವಾರ ಮತ್ತು ಶುಕ್ರವಾರ ಮಾತ್ರ ಇಲ್ಲಿ ಅಧಿಕಾರಿಗಳು ಲಭ್ಯ ಇರುತ್ತಿದ್ದರು. ಅದೂ ಕಾಟಾಚಾರಕ್ಕೆ ಎನ್ನುವಂತಿತ್ತು. ಇನ್ನು ಕೇಂದ್ರ - ರಾಜ್ಯ ಸರ್ಕಾರ ನೀಡುವ ಅನುದಾನದಲ್ಲಿ ಎರಡು ಮಹಾನಗರಗಳ ಅಭಿವೃದ್ಧಿಯಾಗಬೇಕಿತ್ತು. ಅನುದಾನ ಸಾಲುತ್ತಿರಲಿಲ್ಲ. 5 ಲಕ್ಷ ಜನಸಂಖ್ಯೆ ಇರುವ ಬೆಳಗಾವಿ ಮಹಾನಗರ ಪಾಲಿಕೆಗೆ 500 ಕೋಟಿ ರೂ. ಬಂದರೆ 9 ಲಕ್ಷ ಜನಸಂಖ್ಯೆ ಇರುವ ಹುಬ್ಬಳ್ಳಿ - ಧಾರವಾಡಕ್ಕೂ 500 ಕೋಟಿ ರೂ. ಬರುತ್ತಿತ್ತು. ಹೀಗಾಗಿ ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ರಚನೆಗೆ ಆಗ್ರಹ ಕೇಳಿ ಬಂದಿತ್ತು.
ಗಡಿ ಗುರುತಿಸಲು ಸಮಸ್ಯೆ: ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ 82 ವಾರ್ಡ್‌ಗಳಲ್ಲಿ ಧಾರವಾಡ ಪ್ರತ್ಯೇಕ ಪಾಲಿಕೆಗೆ 1 ರಿಂದ 26 ವಾರ್ಡ್ ವರೆಗೆ ಅಂದರೆ ನವನಗರ ಸಮೀಪದವರೆಗಿನ (ಧಾರವಾಡ ತಾಲೂಕು ವ್ಯಾಪ್ತಿಯವರೆಗೆ) ವಾರ್ಡ್‌ಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ. 27 ರಿಂದ 82ನೇ ವಾರ್ಡ್‌ಗಳು ಹುಬ್ಬಳ್ಳಿ ಪಾಲಿಕೆ ವ್ಯಾಪ್ತಿಗೆ ಬರಲಿವೆ. ಈ ನಿಟ್ಟಿನಲ್ಲಿ ಗಡಿ ಗುರುತಿಸಬೇಕಾಗಿದೆ. ಇಲ್ಲಿವರೆಗೆ ಒಂದೇ ಮಹಾನಗರ ಪಾಲಿಕೆ ಆಗಿದ್ದರಿಂದ ವಾರ್ಡ್‌ಗಳ ಗಡಿ ಸಮಸ್ಯೆ ಆಗಿರಲಿಲ್ಲ. ಇದೀಗ ಹೊಸ ಪಾಲಿಕೆ ಅಸ್ತಿತ್ವಕ್ಕೆ ಬಂದರೆ ಒಂದೇ ವಾರ್ಡ್ 2 ಪಾಲಿಕೆ ವ್ಯಾಪ್ತಿಗೆ ಬರುವಂತಿದ್ದರೆ ಅದು ಯಾವ ಕಡೆ ಸೇರಬೇಕು ಎಂಬುದನ್ನು ನಿರ್ಧರಿಬೇಕಾಗುತ್ತದೆ. ಸದ್ಯ 12 ವಲಯ ಕಚೇರಿಗಳಿದ್ದು, ಪ್ರತ್ಯೇಕ ಪಾಲಿಕೆ ಅಸ್ತಿತ್ವಕ್ಕೆ ಬಂದರೆ ಧಾರವಾಡ ವ್ಯಾಪ್ತಿಗೆ 4, ಹುಬ್ಬಳ್ಳಿ ವ್ಯಾಪ್ತಿಗೆ 8 ವಲಯ ಕಚೇರಿಗಳು ಬರಲಿವೆ.
ಆಸ್ತಿ ಹಂಚಿಕೆ ದೊಡ್ಡ ಸಮಸ್ಯೆ: ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಆಸ್ತಿಗಳ ಹಂಚಿಕೆಯಾಗಬೇಕು. ದಾಖಲೆಗಳ ಪ್ರಕಾರ ಹುಬ್ಬಳ್ಳಿ - ಧಾರವಾಡ ಮಹಾನಗರ ವ್ಯಾಪ್ತಿ 202 ಚದರ ಕಿ.ಮೀ ಇದ್ದರೂ ವಾಸ್ತವಿಕವಾಗಿ ಸುಮಾರು 450 ಚದರ ಕಿ.ಮೀ ವ್ಯಾಪ್ತಿವರೆಗೆ ಬೆಳೆದಿದೆ. ಇದರಲ್ಲಿ ಯಾರಿಗೆ ಎಷ್ಟು ಪಾಲು ಎಂದು ಹಂಚಿಕೆ ಆಗಬೇಕಾಗುತ್ತದೆ . ಉದ್ಯಮ, ಶಿಕ್ಷಣ ಇನ್ನಿತರ ಆಸ್ತಿ ಹಂಚಿಕೆ ಆಗಬೇಕಾಗುತ್ತದೆ. ಶಿಕ್ಷಣದ ವಿಚಾರಕ್ಕೆ ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಐಐಟಿ, ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿ, ಐಐಐಟಿ ಧಾರವಾಡ ಪಾಲಿಕೆ ವ್ಯಾಪ್ತಿಗೆ ಸೇರಲಿವೆ.
ನವನಗರ ಹುಬ್ಬಳ್ಳಿ ವ್ಯಾಪ್ತಿಯಲ್ಲಿಯೇ ಉಳಿದರೆ ಮಾತ್ರ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಪಾಲಿಕೆಗೆ ಸೇರಲಿದೆ. ಹೈಕೋರ್ಟ್ ಪೀಠ, ಡಿಮಾನ್ಸ್ ಆಸ್ಪತ್ರೆ ಬೇಲೂರು. ಮುಮ್ಮಿಗಟ್ಟಿ, ಲಕಮನಹಳ್ಳಿ ರಾಯಾಪುರ ಕೈಗಾರಿಕಾ ಪ್ರದೇಶಗಳು ಧಾರವಾಡ ಪಾಲಿಕೆ ವ್ಯಾಪ್ತಿಗೆ ಸೇರಲಿವೆ. ಗಾಮನಗಟ್ಟಿ ಯಾವ ಪಾಲಿಕೆಗೆ ಸೇರಬೇಕೆಂದು ನಿರ್ಧಾರವಾಗಬೇಕಾಗಿದೆ. ತಾರಿಹಾಳ, ಗೋಕುಲ, ರಾಯನಾಳ ಕೈಗಾರಿಕೆ ಪ್ರದೇಶ ಹುಬ್ಬಳ್ಳಿ ವ್ಯಾಪ್ತಿಗೆ ಬರಲಿದೆ.
ಪ್ರತ್ಯೇಕ ಕಚೇರಿ ಸ್ಥಾಪನೆ, ಅಧಿಕಾರಿಗಳ ನೇಮಕ: ಪ್ರತ್ಯೇಕ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದರೆ ಧಾರವಾಡಕ್ಕೆ ಪ್ರತ್ಯೇಕ ಮಹಾಪೌರ, ಉಪ ಮಹಾಪೌರ, ಆಯುಕ್ತ, ಜಂಟಿ ಆಯುಕ್ತರ ನೇಮಕ ಜತೆಗೆ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಬೇಕಾಗುತ್ತದೆ. ಮಹಾನಗರ ಪಾಲಿಕೆ ಕಚೇರಿಯ ಕೆಲವೊಂದು ಇಲಾಖೆಗಳು ಧಾರವಾಡದಲ್ಲಿಯೇ ಇವೆಯಾದರೂ, ಮಾನವ ಸಂಪನ್ಮೂಲ ವಿಭಾಗ, ಕಂದಾಯ ಸೇರಿದಂತೆ ಇನ್ನಿತರ ವಿಭಾಗಗಳ ಮುಖ್ಯ ಕಚೇರಿಗಳು ಹುಬ್ಬಳ್ಳಿಯಲ್ಲಿದ್ದು, ಇದೀಗ ಪ್ರತ್ಯೇಕ ಮುಖ್ಯ ಕಚೇರಿಗಳು ಧಾರವಾಡದಲ್ಲೂ ಆರಂಭವಾಗಲಿವೆ.
ಪ್ರತ್ಯೇಕ ನಗರಾಭಿವೃದ್ದಿ ಪ್ರಾಧಿಕಾರ ರಚನೆ?: ನಗರಾಭಿವೃದ್ಧಿ ಪ್ರಾಧಿಕಾರ ಸಹ ಪ್ರತ್ಯೇಕ ಆಗುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಸರ್ಕಾರ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. ಹುಬ್ಬಳ್ಳಿ ಹಾಗೂ ಧಾರವಾಡ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಪ್ರತ್ಯೇಕ ಕಚೇರಿ, ಸಿಬ್ಬಂದಿ ನೇಮಕ ಮಾಡಬೇಕಾಗುತ್ತದೆ.
ತೆರಿಗೆ ಸಂಗ್ರಹದಲ್ಲಿ ಹುಬ್ಬಳ್ಳಿ ಮೇಲುಗೈ: ಪಾಲಿಕೆ ಪ್ರತ್ಯೇಕವಾದರೆ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ, ನೆರವು ಬರಲಿದೆ. ಆಡಳಿತ ಸುಲಭ ಹಾಗೂ ಸರಳವಾಗಲಿದೆ. ಆದರೆ, ಪಾಲಿಕೆಗಳು ಆದಾಯ ದೃಷ್ಟಿಯಿಂದ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಮಹಾನಗರ ಪಾಲಿಕೆ ಸ್ಥಾನ ಪಡೆಯಲು ಕನಿಷ್ಠ 3 ಲಕ್ಷ ಜನಸಂಖ್ಯೆ ಇರಬೇಕು. ಧಾರವಾಡ 3.70 ಲಕ್ಷ ಜನಸಂಖ್ಯೆ ಹೊಂದಿದ್ದರೇ, ಹುಬ್ಬಳ್ಳಿ ಅಂದಾಜು 8.26 ಲಕ್ಷ ಜನಸಂಖ್ಯೆ ಹೊಂದಿದೆ ಎಂದು ಅಂದಾಜಿಸಲಾಗಿದೆ. 2023-24ನೇ ಸಾಲಿನಲ್ಲಿ ಧಾರವಾಡದಲ್ಲಿ 29.29 ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು. ಹುಬ್ಬಳ್ಳಿಯಲ್ಲಿ 88.25 ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು. ಹೀಗಾಗಿ ಆದಾಯ ದೃಷ್ಟಿಯಿಂದ ಎರಡು ಮಹಾನಗರ ಪಾಲಿಕೆಗಳು ಕೆಲವೊಂದು ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಪಾಲಿಕೆ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬರಲು ಏನಾಗಬೇಕು: ಸಚಿವ ಸಂಪುಟ ಒಪ್ಪಿಗೆ ಸೂಚಿಸಿರುವ ಪ್ರತ್ಯೇಕ ಮಹಾನಗರ ಪಾಲಿಕೆಗೆ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕು. ಇದಕ್ಕೆ ಕನಿಷ್ಠ ಒಂದು ತಿಂಗಳು ಸಮಯಬೇಕು. ನಂತರ ಅಂತಿಮ ಆದೇಶ ಹೊರಡಿಸಿದ ಮೇಲೆ ಪಾಲಿಕೆ ರಚನೆಯಾಗಲಿದೆ. ಸದ್ಯಕ್ಕೆ 2027ರ ಮೇ ತಿಂಗಳ ವರೆಗೆ ಪ್ರಸ್ತುತ ಆಯ್ಕೆಯಾದ ಪಾಲಿಕೆ ಸದಸ್ಯರ ಅವಧಿ ಮುಕ್ತಾಯಗೊಳ್ಳಲಿದ್ದು, ನಂತರ ಕ್ಷೇತ್ರಗಳನ್ನು ಪುನರ್‌ವಿಂಗಡಣೆ ಮಾಡಿ ಹೊಸ ಪಾಲಿಕೆ ರಚನೆಯಾಗಬೇಕು. ಆ ಮೇಲೆ ಚುನಾವಣೆ ನಡೆದು ನೂತನ ಪಾಲಿಕೆ ಸದಸ್ಯರು ಆಡಳಿತ ನಡೆಸಬೇಕಾಗುತ್ತದೆ. ಸದ್ಯಕ್ಕೆ ಆಯ್ಕೆಯಾದವರೆಲ್ಲರೂ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಗೆ ಆಯ್ಕೆಯಾಗಿರುತ್ತಾರೆ. ಕಾನೂನಾತ್ಮಕವಾಗಿ ಇದು ಕೊಂಚ ತೊಡಕಾಗಿದೆ. ಒಂದು ವೇಳೆ ಸರ್ಕಾರ ಅಧಿಕೃತವಾಗಿ ಪಾಲಿಕೆಯನ್ನು ವಾರ್ಡ್‌ವಾರು ವಿಭಜಿಸಿದರೆ ಧಾರವಾಡದಲ್ಲಿ ಪ್ರಸ್ತುತ ಆಯ್ಕೆಯಾದ ಪಾಲಿಕೆ ಸದಸ್ಯರಲ್ಲೇ ಮೇಯರ್ ಆರಿಸಿ ಬರಲಿದ್ದಾರೆ.
ಧಾರವಾಡ ಪ್ರತ್ಯೇಕ ಪಾಲಿಕೆ ನಿರ್ಧಾರ ಸ್ವಾಗತಿಸಿದ ಮೇಯರ್: ಧಾರವಾಡ ಪ್ರತ್ಯೇಕ ಪಾಲಿಕೆಯಾಗುತ್ತಿರುವುದನ್ನು ಹು-ಧಾ ಮಹಾನಗರ ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ ಸ್ವಾತಿಸಿದ್ದಾರೆ. ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿ, ಮಹಾನಗರ ಪಾಲಿಕೆ ತೆಗೆದುಕೊಂಡ ಠರಾವಿನಂತೆ ರಾಜ್ಯ ಸರ್ಕಾರ ಧಾರವಾಡ ಪ್ರತ್ಯೇಕ ಪಾಲಿಕೆ ಘೋಷಣೆ ಮಾಡಿರುವುದು ಸ್ವಾಗತ. ಆದಷ್ಟು ಬೇಗ ಅಭಿವೃದ್ದಿ ದೃಷ್ಟಿಯಿಂದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಸ್ವತಂತ್ರ ಪಾಲಿಕೆ ಜಾರಿಗೆ ತರಬೇಕು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಮಾತನಾಡಿ, "ಧಾರವಾಡ ಪ್ರತ್ಯೇಕ ಪಾಲಿಕೆ ಘೋಷಣೆ ನಿರಂತರ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಅಭಿವೃದ್ದಿ ದೃಷ್ಟಿಯಿಂದ ಈ ನಿರ್ಧಾರ ಒಳ್ಳೆಯದು. ಪ್ರತ್ಯೇಕ ಅನುದಾನ ಹಂಚಿಕೆಯಾಗಲಿದೆ. ಇದರಿಂದ ಎರಡು ನಗರಗಳು ಅಭಿವೃದ್ದಿ ಕಾಣಲಿವೆ. ಧಾರವಾಡಕ್ಕೆ ಕೇವಲ 26 ವಾರ್ಡ್‌ಗಳು ಬರುವುದರಿಂದ ಗ್ರಾಮೀಣ ಭಾಗಗಳನ್ನು ಸೇರ್ಪಡೆ ಮಾಡಿದರೆ ಉತ್ತಮ" ಎಂದರು.
ಪಾಲಿಕೆ ಸದಸ್ಯೆ ಪತಿ ಪ್ರಕಾಶ ಬುರಬುರೆ ಹಾಗೂ ಸ್ಥಳೀಯ ನಿವಾಸಿ ದತ್ತಮೂರ್ತಿ ಕುಲಕರ್ಣಿ ಪ್ರತಿಕ್ರಿಯಿಸಿ, "ಪ್ರತ್ಯೇಕ ಪಾಲಿಕೆಯಾಗುವದರಿಂದ ಎರಡು ನಗರಗಳ ಅಭಿವೃದ್ದಿಯಾಗಲಿದೆ. ಕಮಿಷನರ್ ಮತ್ತು ಸಿಬ್ಬಂದಿ ನೇಮಕವಾಗುವುದರಿಂದ ಕೆಲಸ ಕಾರ್ಯಗಳಿಗೆ ವೇಗ ದೊರೆಯಲಿದೆ. ಸರ್ಕಾರದ ಆದಷ್ಟು ಬೇಗ ಮೂಲಭೂತ ಸೌಲಭ್ಯ ಕಲ್ಪಿಸಬೇಕು" ಎಂದು ಹೇಳಿದರು.
ಇದನ್ನೂ ಓದಿ: ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ: ಸಂಪುಟ ಒಪ್ಪಿಗೆ ಹಿನ್ನೆಲೆ ಧಾರವಾಡದಲ್ಲಿ ಸಂಭ್ರಮಾಚರಣೆ