ಬಾಲಿವುಡ್ ನಟಿ ನಿಮ್ರತ್ ಕೌರ್ ಅವರ ಹೆಸರು ಸದ್ಯ ಸಖತ್ ಸುದ್ದಿಯಲ್ಲಿದೆ. ದಾಸ್ವಿ ಚಿತ್ರದ ಸಹ-ನಟ ಅಭಿಷೇಕ್ ಬಚ್ಚನ್ ಜೊತೆಗಿನ ಡೇಟಿಂಗ್ ವದಂತಿಗಳು ಹೊರಹೊಮ್ಮಿದ ನಂತರ, ಅಭಿಷೇಕ್ ಮತ್ತು ಐಶ್ವರ್ಯಾ ದಂಪತಿಯ ವಿಚ್ಛೇದನದ ಸುತ್ತಲಿನ ವದಂತಿಗಳು ಉಲ್ಭಣಗೊಂಡಿವೆ. ಸೋಷಿಯಲ್ ಕಾಮಿಡಿ ಡ್ರಾಮಾದಲ್ಲಿ ತೆರೆ ಹಂಚಿಕೊಂಡಿರುವ ಈ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂಬ ಬಗ್ಗೆ ಊಹಾಪೋಹಗಳು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹರಡಿದ್ದು, ನೆಟ್ಟಿಗರ ಆಸಕ್ತಿ ಕೆರಳಿದೆ.
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ನಡುವಿನ ವೈವಾಹಿಕ ಭಿನ್ನಾಭಿಪ್ರಾಯದಂತಹ ವರದಿಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಈ ವದಂತಿಗಳು ಹೊರಹೊಮ್ಮಿವೆ. ಜನಪ್ರಿಯ ತಾರಾ ಜೋಡಿಯ ವಿಚ್ಛೇದನಕ್ಕೆ ನಟಿ ನಿಮ್ರತ್ ಕೌರ್ ಕಾರಣವಾಗಿರಬಹುದಾ? ಎಂದು ಅನೇಕರು ಊಹಿಸುತ್ತಿದ್ದಾರೆ.
ಸಂದರ್ಶನವೊಂದರಲ್ಲಿ ನಟಿ ನಿಮ್ರತ್ ಕೌರ್, ಪ್ರಬುದ್ಧತೆಯಿಂದ ವದಂತಿಗಳಿಗೆ ಪ್ರತಿಕ್ರಿಯಿಸಿದರು. ತಮ್ಮ ವೈಯಕ್ತಿಕ ಜೀವನದಲ್ಲಿ ಸಾರ್ವಜನಿಕರು ಹೊಂದಿರುವ ಆಸಕ್ತಿಯೊಂದಿಗೆ ವ್ಯವಹರಿಸಲು ಇರುವ ಸವಾಲುಗಳ ಬಗ್ಗೆಯೂ ಮಾತನಾಡಿದರು. "ನಾನು ಏನು ಬೇಕಾದರೂ ಮಾಡಬಲ್ಲೆ ಮತ್ತು ಜನರು ಇನ್ನೂ ಅವರಿಗೆ ಬೇಕಾದುದನ್ನೇ ಹೇಳುತ್ತಾರೆ. ಅಂತಹ ಗಾಸಿಪ್‌ಗಳನ್ನು ನಿಲ್ಲಿಸುವುದಿಲ್ಲ. ನಾನು ನನ್ನ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಬಯಸುತ್ತೇನೆ" ಎಂದು ತಿಳಿಸಿದರು.