ಸದ್ಯ ಕನ್ನಡ ಚಿತ್ರರಂಗದ ಪರಿಸ್ಥಿತಿ ಬದಲಾಗಿದೆ. ಸಿನಿಮಾ ಮಾಡುವುದಕ್ಕಿಂತ ಜನರಿಗೆ ಅದನ್ನು ತಲುಪಿಸುವುದೇ ದೊಡ್ಡ ಸವಾಲಾಗಿದೆ. ಯಾಕೆಂದರೆ, ಇತ್ತೀಚೆಗೆ ಥಿಯೇಟರ್ಗಳತ್ತ ಜನರು ಸುಳಿಯುತ್ತಿಲ್ಲ. ಇವೆಲ್ಲ ಸವಾಲುಗಳ ನಡುವೆಯೂ ಚಿತ್ರವೊಂದು 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಆ ಕೀರ್ತಿಗೆ ಭಾಜನವಾಗಿರುವುದು 'ಬ್ಲಿಂಕ್' ಸಿನಿಮಾ.
ಸ್ಟಾರ್ ಹೀರೋ ಸಿನಿಮಾಗಳ ಅಬ್ಬರದ ನಡುವೆಯೂ ಮಾರ್ಚ್ 8ರಂದು ತೆರೆಗೆ ಬಂದ 'ಬ್ಲಿಂಕ್' ಸಿನಿಮಾಗೀಗ 25 ದಿನಗಳ ಸಂಭ್ರಮ. ಈ ಬಗ್ಗೆ ಚಿತ್ರತಂಡವು ಮಾಧ್ಯಮದವರೊಂದಿಗೆ ಸಂತಸ ಹಂಚಿಕೊಂಡಿದೆ. ನಟ ದೀಕ್ಷಿತ್ ಶೆಟ್ಟಿ ಮಾತನಾಡಿ, ''ಬಹಳಷ್ಟು ಕನಸುಗಳನ್ನು ಇಟ್ಟುಕೊಂಡು ಮಾಡಿದ ಪ್ರಾಜೆಕ್ಟ್ ಇದು. ಮುಖ್ಯವಾಗಿ ಕೋರ್ ಟೀಂ ಥಿಯೇಟರ್ ಹಿನ್ನೆಲೆಯಿಂದ ಬಂದಿರುವಂತಹದ್ದು. ಸಿನಿಮಾ ಮಾಡುವಾಗ ಸಾಕಷ್ಟು ಸಂದೇಹವಿತ್ತು. ಜನ ಈ ರೀತಿಯ ವಿಷಯವನ್ನು ಸ್ವೀಕಾರ ಮಾಡ್ತಾರಾ? ಎಂದು ಅನಿಸಿತ್ತು. ನಾವು ಸಿನಿಮಾ ಮುಗಿಸಿಕೊಂಡ ಬಳಿಕ ಪ್ರೆಸೆಂಟ್ ಮಾಡುತ್ತೀರಾ ಎಂದು ಯಾವ ಡಿಸ್ಟ್ರಿಬ್ಯೂಷನ್ ಕಂಪನಿಗೆ ಕೇಳಿದರೂ, ಅವರದಕ್ಕೆ ಆಗುತ್ತಾ ಇದು ಎಂದು ಹಿಂದೇಟು ಹಾಕಿದರು. ಆದರೆ, ಈಗ ಸಿನಿಮಾ 25 ದಿನಗಳನ್ನು ಪೂರೈಸಿದೆ. ಈ ಚಿತ್ರವನ್ನು ಜನರು ಅಪ್ಪಿ, ಒಪ್ಪಿದ್ದಾರೆ. ಹೀಗಾಗಿ, ಈ ರೀತಿಯ ಹೊಸ ಸಿನಿಮಾಗಳು ಬರುವುದು ಮುಖ್ಯ. 25 ದಿನ ಬ್ಲಿಂಕ್ ಪೂರ್ಣಗೊಳಿಸಿರುವುದು ಖುಷಿ ಆಗಿದೆ. 'ಬ್ಲಿಂಕ್' ನನ್ನ ಪ್ರಕಾರ ಇನ್ನೂ ಹೆಚ್ಚಿನ ಜನಕ್ಕೆ ಸೇರಬೇಕಾದ ಸಿನಿಮಾ. ಮುಂದಿನ ದಿನಗಳಲ್ಲಿ ಯಾವುದೇ ಒಂದು ಸೈನ್ಸ್ ಫಿಕ್ಷನ್ ಸಿನಿಮಾ ಆಗಬೇಕೆಂದರೆ ಅದಕ್ಕೆ ಇದು ಮಾದರಿಯಾಗುತ್ತದೆ'' ಎಂದರು.
ನಟಿ ಚೈತ್ರಾ ಆಚಾರ್ ಮಾತನಾಡಿ, ''ಬ್ಲಿಂಕ್ ನನ್ನ ಪಾಲಿಗೆ ಲಕ್ಕಿ ಸಿನಿಮಾ. ಈ ಚಿತ್ರದ ಶೂಟ್ ಮಾಡುವಾಗಲೇ 'ಸಪ್ತ ಸಾಗರದಾಚೆ ಎಲ್ಲೋ' ತಂಡದಿಂದ ಕರೆ ಬಂತು. ಹೀಗಾಗಿ ಈ ಚಿತ್ರ ತುಂಬಾ ಲಕ್ಕಿ ನನಗೆ. ಕಥೆ ಹೇಳಲು ಬಂದಾಗ ಶ್ರೀನಿಧಿ ಬೆಂಗಳೂರು ಅವರು ತುಂಬಾ ಕ್ಲಾರಿಟಿಯಾಗಿ ಹೇಳಿದರು. ಅವರು ಮಾಡಿದ ಒಂದು ಶಾರ್ಟ್ ಫಿಲ್ಮಂ ತೋರಿಸಿದರು. ಬಳಿಕ ನಾನು ಚಿತ್ರ ಮಾಡಲು ಒಪ್ಪಿಕೊಂಡೆ. ಈ ಸಿನಿಮಾದ ಭಾಗವಾಗಿರುವುದು ಖುಷಿ ಕೊಟ್ಟಿದೆ. ಚಿತ್ರ ಜನರಿಗೂ ತಲುಪಿದೆ. ನಿರ್ಮಾಪಕರು ಸಿನಿಮಾಗೆ ದುಡ್ಡು ಹಾಕಿ ಸುಮ್ಮನಾಗದೇ, ಫೀಲ್ಡ್ಗೆ ಇಳಿದು ಅವರೇ ಡಿಸ್ಟ್ರಿಬ್ಯೂಷನ್ ತೆಗೆದುಕೊಂಡು ಥಿಯೇಟರ್ನವರು ಕೊಡುವ ಶೋ ತೆಗೆದುಕೊಂಡಿದ್ದು, ಅವು ಹೌಸ್ಫುಲ್ ಆದವು. ಇದು ಕಂಟೆಂಟ್ ಗೆದ್ದಿರುವ ಪವರ್ ಎನ್ನಬಹುದು'' ಎಂದರು.
''ಚಲನಚಿತ್ರರಂಗಕ್ಕೆ ನಾನು ಹೊಸಬ. ಬೆರಗು ಕಣ್ಣಿನಿಂದ ನಾನು ಈ ಕಲಾ ಪ್ರಪಂಚವನ್ನು ನೋಡುತ್ತಿದ್ದೇನೆ. ಮೊದಲ ಚಿತ್ರವನ್ನು ನಾವು ಪ್ರಾರಂಭ ಮಾಡಿದಾಗ ನನಗೆ ಇಷ್ಟೊಂದು ನಂಬಿಕೆ ಇರಲಿಲ್ಲ. ಇಷ್ಟು ವಿಸ್ತಾರವಾಗಿ ಪ್ರೇಕ್ಷಕರಿಗೆ ತಲುಪುತ್ತದೆ ಎಂದುಕೊಂಡಿರಲಿಲ್ಲ. 25 ದಿನಗಳನ್ನು ಪೂರೈಸಿ 50 ದಿನದತ್ತ ದಾಪುಗಾಲು ಇಡುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣ ಪ್ರೇಕ್ಷಕರು ಹಾಗೂ ಮಾಧ್ಯಮಗಳು. ಹೊಸಬರ ಕನಸಿಗೆ ಬೆನ್ನುತಟ್ಟಿದ ಪ್ರತಿಯೊಬ್ಬರಿಗೆ ಧನ್ಯವಾದ'' ಎಂದು ನಿರ್ದೇಶಕ ಶ್ರೀನಿಧಿ ಬೆಂಗಳೂರು ಸಂತಸ ಹಂಚಿಕೊಂಡರು.