'ಚಂದ್ರಮುಖಿ ಪ್ರಾಣಸಖಿ' ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದು ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ನಟಿ ಭಾವನಾ ರಾಮಣ್ಣ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿದವರು. ಸದ್ಯ ಸಿನಿಮಾ ಜೊತೆಗೆ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ. ಭಾವನಾ ಅತ್ಯುತ್ತಮ ನೃತ್ಯಗಾರ್ತಿಯೂ ಹೌದು. ಕನ್ನಡದ ಜನಪ್ರಿಯ ಕಾದಂಬರಿಕಾರ ತ.ರಾ.ಸುಬ್ಬರಾಯರ ಹಂಸಗೀತೆ ಕಾದಂಬರಿಯನ್ನು ಜಿ.ವಿ.ಅಯ್ಯರ್ ಚಲನಚಿತ್ರವಾಗಿಸಿದ್ದರು. ಇದೀಗ ಇದೇ ಹಂಸಗೀತೆಯನ್ನು ಭಾವನಾ ನೃತ್ಯ ರೂಪಕವಾಗಿ ತರುತ್ತಿದ್ದಾರೆ. ಒಂದೂವರೆ ಗಂಟೆಗಳ ಕಾಲ ನಡೆಸಿಕೊಡುವ ಏಕವ್ಯಕ್ತಿ ಪ್ರದರ್ಶನದ ಈ ನೃತ್ಯ ಕಾವ್ಯದಲ್ಲಿ ಹಾಡು, ನೃತ್ಯ ಹಾಗೂ ಸಂಭಾಷಣೆಗಳೆಲ್ಲವೂ ಇರುತ್ತವೆ.
ತಾವು ಚಿತ್ರರಂಗಕ್ಕೆ ಬರಲು ಕಾರಣರಾದವರನ್ನು ನೆನೆದು ಭಾವುಕರಾಗಿ ಮಾತು ಆರಂಭಿಸಿದ ಭಾವನಾ, "ಈ ಹಿಂದೆ ತಮ್ಮ ಹೋಮ್ ಟೌನ್ ಬ್ಯಾನರ್ನಲ್ಲಿ 'ನಿರುತ್ತರ' ಚಿತ್ರ ನಿರ್ಮಿಸಿದ್ದನ್ನು ನೆನಪಿಸಿಕೊಂಡರು. ಮುಂದೆಯೂ ಕೂಡ ಚಿತ್ರ ನಿರ್ಮಿಸುವ ಆಸೆ ಇದೆ. ಹೂವು ಫೌಂಡೇಶನ್ ಮೂಲಕ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ" ಎಂದರು.
"ತ.ರಾ.ಸು ಅವರ ಹಂಸಗೀತೆಯ ಬಗ್ಗೆ ಇವತ್ತಿನ ಪೀಳಿಗೆಗೆ ತಿಳಿಸಿಕೊಡಬೇಕು. ಹಾಗಾಗಿ ಈ ಪ್ರಯತ್ನ ಮಾಡುತ್ತಿದ್ದೇನೆ. ಜನವರಿ 30ರ ಸಂಜೆ 6.30ಕ್ಕೆ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಕಾರ್ಯಕ್ರಮ ನಡೆಯಲಿದೆ. ವೀಣಾ ಮೂರ್ತಿ ನೃತ್ಯ ನಿರ್ದೇಶನದಲ್ಲಿ ನೃತ್ಯಕಾವ್ಯ ಮೂಡಿ ಬರಲಿದೆ. ಇದು ಮೊದಲ ಪ್ರಯತ್ನ. ಮುಂದೆ ಬೇರೆ ಬೇರೆ ಕಡೆಗಳಲ್ಲೂ ನೃತ್ಯ ಕಾವ್ಯ ಮಾಡುವ ಯೋಜನೆಯಿದೆ" ಎಂದು ತಿಳಿಸಿದರು.