ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 11ನೇ ಆವೃತ್ತಿ ನಡೆಯುತ್ತಿದೆ. ಇದೀಗ ಕಾರ್ಯಕ್ರಮವು ಮೂರನೇ ವಾರಕ್ಕೆ ಕಾಲಿಟ್ಟಿದೆ. ಈ ನಡುವೆ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕ, ನಟ ಕಿಚ್ಚ ಸುದೀಪ್ ದೊಡ್ಡದೊಂದು ಘೋಷಣೆ ಮಾಡಿದ್ದಾರೆ.
ಕಿಚ್ಚ ಸುದೀಪ್ ಬಿಗ್ ಬಾಸ್ಗೆ ವಿದಾಯ ಹೇಳಲು ಮುಂದಾಗಿದ್ದಾರೆ. 11ನೇ ಸೀಸನ್ ಆರಂಭಕ್ಕೂ ಮುನ್ನವೇ ಈ ಬಗ್ಗೆ ಹಲವು ಚರ್ಚೆ, ಸುದ್ದಿಗಳು ಹರಿದಾಡಿದ್ದವು. ಈ ಬಾರಿ ಸುದೀಪ್ ನಿರೂಪಣೆ ಮಾಡುತ್ತಿಲ್ಲ. ಬೇರೊಬ್ಬರು ಈ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಮತ್ತೊಮ್ಮೆ ನಿರೂಪಣೆಯನ್ನು ಸುದೀಪ್ ಅವರೇ ಮಾಡುತ್ತಿದ್ದರು. ಆದರೀಗ ಬಿಗ್ ಬಾಸ್ ನಿರೂಪಣೆಯಿಂದ ದೂರ ಸರಿಯುವುದಾಗಿ ಸುದೀಪ್ ಘೋಷಿಸಿದ್ದಾರೆ.
ಇದನ್ನೂ ಓದಿ:ದರ್ಶನ್ ಭೇಟಿಗಾಗಿ ಟೆಡ್ಡಿಬೇರ್ ಧರಿಸಿ ಬಳ್ಳಾರಿ ಜೈಲಿಗೆ ಬಂದ ಶಿವಮೊಗ್ಗದ ಅಭಿಮಾನಿ
''ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಕ್ಕೆ ನಿಮಗೆಲ್ಲ ಧನ್ಯವಾದಗಳು. ಟಿಆರ್ಪಿ ನೋಡಿದರೆ ನನ್ನ ಬಗ್ಗೆ ಮತ್ತು ಈ ಶೋ ಬಗ್ಗೆ ನೀವು ತೋರಿದ ಪ್ರೀತಿ ಏನೆಂಬುದು ತಿಳಿಯುತ್ತೆ. ಈ 11 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಬಹಳ ಅದ್ಭುತವಾಗಿತ್ತು. ಈಗ ನಾನು ಬೇರೆ ಕಡೆಗೆ ಗಮನಹರಿಸುವ ಸಮಯ ಬಂದಿದೆ'' ಎಂದಿದ್ದಾರೆ.
ಇದು ಬಿಗ್ ಬಾಸ್ ಕನ್ನಡಕ್ಕೆ ನಿರೂಪಕನಾಗಿ ನನ್ನ ಕೊನೆಯ ಸೀಸನ್ ಆಗಿರುತ್ತದೆ. ನನ್ನ ನಿರ್ಧಾರವನ್ನು ಕಲರ್ಸ್ನವರು ಹಾಗೂ ಇಷ್ಟು ವರ್ಷಗಳಿಂದ ಬಿಗ್ ಬಾಸ್ ನೋಡಿದ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ನಂಬಿದ್ದೇನೆ. ಈ ಸೀಸನ್ ಅತ್ಯುತ್ತಮ ಆಗುವಂತೆ ಮಾಡೋಣ. ನಾನು ಕೂಡ ನಿಮ್ಮೆಲ್ಲರನ್ನು ರಂಜಿಸುತ್ತೇನೆ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:'ಫಸ್ಟ್ ಬಾಲ್ನಲ್ಲಿ ಸಿಕ್ಸರ್ ಹೊಡೆದವರು ನಾವು': ಅ.16ಕ್ಕೆ 'ಮಾಫಿಯಾ' ನಿಮ್ಮ ಮುಂದೆ