ಮುಂಬೈ (ಮಹಾರಾಷ್ಟ್ರ):ಕಳೆದ ವಾರ ಚಾಕು ಇರಿತಕ್ಕೊಳಗಾಗಿದ್ದ ಬಾಲಿವುಡ್ ನಟ ಸೈಫ್ ಅಲಿ ಖಾನ್ ನಿನ್ನೆ, ಮಂಗಳವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಟೋರಿಕ್ಷಾ ಚಾಲಕ ಭಜನ್ ಸಿಂಗ್ ರಾಣಾ ಅವರು ಬಾಲಿವುಡ್ ಸೂಪರ್ ಸ್ಟಾರ್ ಜೊತೆ ಆಸ್ಪತ್ರೆಯಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ಇಂದು ವೈರಲ್ ಆಗಿವೆ. ಇದು ನಟ ಮನೆಗೆ ತೆರಳುವುದಕ್ಕೂ ಮೊದಲು ಆಸ್ಪತ್ರೆಯಲ್ಲಿ ಪೋಸ್ ಕೊಟ್ಟಿರುವ ಫೋಟೋಗಳಾಗಿವೆ.
ನಟನ ಮನೆ ಬಳಿ ಹಾದು ಹೋಗುತ್ತಿದ್ದ ಆಟೋ... ಜನವರಿ 16, ಗುರುವಾರ ಮುಂಜಾನೆ (ಬುಧವಾರ ತಡರಾತ್ರಿ) ತಾರಾ ದಂಪತಿ ಸೈಫ್ ಕರೀನಾ ಅವರ ನಿವಾಸದಲ್ಲಿ ಕಳ್ಳತನದ ಯತ್ನ ನಡೆದಿತ್ತು. ಮನೆಗೆ ನುಗ್ಗಿದ ವ್ಯಕ್ತಿ ನಟನ ಮೇಲೆ ಹಲವು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಆ ಕೂಡಲೇ ರಿಕ್ಷಾ ಚಾಲಕ ಭಜನ್ ಸಿಂಗ್ ರಾಣಾ ಅವರು ನಟನನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ದರು. ನಟನ ನಿವಾಸ ಇರುವ ಅಪಾರ್ಟ್ಮೆಂಟ್ ಬಳಿ ಹಾದು ಹೋಗುತ್ತಿದ್ದ ಆಟೋವನ್ನು ಕೆಲವರು ತಡೆದು, ಆಸ್ಪತ್ರೆಗೆ ಕರೆದೊಯ್ಯುವಂತೆ ಕೋರಿದ್ದರು.
ಆಟೋ ಚಾಲಕನನ್ನು ಆತ್ಮೀಯನಂತೆ ಕಂಡ ಸೂಪರ್ ಸ್ಟಾರ್: ಮಂಗಳವಾರ ಆಸ್ಪತ್ರೆಯಿಂದ ಮನೆಗೆ ಹೊರಡುವ ಮೊದಲು, ಸೈಫ್ ಅಲಿ ಖಾನ್ ಸ್ವತಃ ರಿಕ್ಷಾ ಚಾಲಕನನ್ನು ಭೇಟಿಯಾದರು. ಅವರನ್ನು ಆಸ್ಪತ್ರೆಗೆ ಕರೆಸಿಕೊಂಡು ಗುಣಮಟ್ಟದ ಸಮಯ ಕಳೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋವೊಂದರಲ್ಲಿ, ಆಟೋ ಚಾಲಕ ಹಾಸ್ಪಿಟಲ್ನ ಬೆಡ್ ಮೇಲೆ ಸೈಫ್ ಪಕ್ಕದಲ್ಲಿ ಕುಳಿತು ಕ್ಯಾಮರಾ ನೋಡಿ ಸ್ಮೈಲ್ ಕೊಟ್ಟಿರೋದನ್ನು ಕಾಣಬಹುದು. ಭಜನ್ ಸಿಂಗ್ ರಾಣಾ ಅವರ ಭುಜದ ಮೇಲೆ ನಟ ಕೈ ಇಟ್ಟು ಆತ್ಮೀಯರಂತೆ ಪೋಸ್ ಕೊಟ್ಟಿದ್ದಾರೆ. ಮತ್ತೊಂದು ಫೋಟೋದಲ್ಲಿ, ಇಬ್ಬರೂ ಅಕ್ಕ ಪಕ್ಕ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.
ಸಹಾಯಹಸ್ತದ ಭರವಸೆ ನೀಡಿದ ನಟ.. ಖಾನ್ ಫ್ಯಾಮಿಲಿ ರಿಕ್ಷಾ ಚಾಲಕನಿಗೆ ಧನ್ಯವಾದ ಅರ್ಪಿಸಿದ್ದಾರೆ. ಸಹಾಯ ಬೇಕಾದಾಗಲೆಲ್ಲಾ ಸಹಾಯ ಕೇಳಲು ಹಿಂಜರಿಯಬೇಡಿ ಎಂದು ತಮ್ಮ ಸಹಾಯಹಸ್ತದ ಭರವಸೆ ನೀಡಿದ್ದಾರೆ. ಸೈಫ್ ಮತ್ತು ಅವರ ತಾಯಿ, ಹಿರಿಯ ನಟಿ ಶರ್ಮಿಳಾ ಠಾಗೋರ್ ಭಜನ್ ಸಿಂಗ್ ರಾಣಾ ಅವರಿಗೆ ಮನತುಂಬಿ ತಮ್ಮ ಕೃತಜ್ಞತೆ ಅರ್ಪಿಸಿದ್ದಾರೆ.