ಚೆನ್ನೈ (ತಮಿಳುನಾಡು):ಅನಾರೋಗ್ಯದ ಹಿನ್ನೆಲೆ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ತಮಿಳು ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರು ಇಂದು (ಶುಕ್ರವಾರ) ಬೆಳಗ್ಗೆ ಡಿಸ್ಚಾರ್ಜ್ ಆಗಿದ್ದಾರೆ.
ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರಿಂದ ಸೆಪ್ಟೆಂಬರ್ 30 ರಂದು ಚೆನ್ನೈ ಅಪೋಲೋ ಆಸ್ಪತ್ರೆಗೆ ತಲೈವಾ ದಾಖಲಾಗಿದ್ದರು. ಆಗ ಹೊಟ್ಟೆನೋವಿನ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು. ಬಳಿಕ ಹೃದ್ರೋಗ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ವರದಿಯಾಗಿತ್ತು. ಹಾಗೇ ಅಕ್ಟೋಬರ್ 1 ರಂದು ಚೆನ್ನೈ ಅಪೋಲೋ ಆಸ್ಪತ್ರೆಯಿಂದ ರಜನಿಕಾಂತ್ ಅವರ ಸ್ಥಿತಿಗತಿ ಕುರಿತು ವರದಿ ನೀಡಲಾಗಿತ್ತು.
ಆಸ್ಪತ್ರೆಯ ಆಡಳಿತ ಮಂಡಳಿಯ ಹೇಳಿಕೆಯಲ್ಲಿ, "ರಜನಿಕಾಂತ್ ಅವರನ್ನು ಸೆಪ್ಟೆಂಬರ್ 30 ರಂದು ಚೆನ್ನೈನ ಗ್ರೀಮ್ಸ್ ರಸ್ತೆಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಹೃದಯದಿಂದ (ಅಯೋರ್ಟಾ) ಹೊರಡುವ ರಕ್ತನಾಳದಲ್ಲಿ ಊತವಿದೆ. ರಜನಿಕಾಂತ್ ಅವರು ಚಿಕಿತ್ಸೆ ಪಡೆದಿರುವ ಬಗ್ಗೆ ನಾವು ಹಿತೈಷಿಗಳಿಗೆ ತಿಳಿಸಲು ಬಯಸುತ್ತೇವೆ. ಅವರು ಇನ್ನೆರಡು ದಿನಗಳಲ್ಲಿ ಮನೆಗೆ ಮರಳುತ್ತಾರೆ" ಎಂದು ತಿಳಿಸಿತ್ತು.
ಇನ್ನು ರಜನಿಕಾಂತ್ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್, ಮಕ್ಕಳ್ನೀಧಿ ಮೈಯಂ ಅಧ್ಯಕ್ಷ ಕಮಲ್ ಹಾಸನ್ ಮತ್ತು ತಮಿಳಗ ವೆಟ್ರಿ ಕಳಗಂ ಅಧ್ಯಕ್ಷ ನಟ ದಳಪತಿ ವಿಜಯ್ ಅವರು ಹಾರೈಸಿದ್ದರು.