1980ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು ಜನಪ್ರಿಯ ನಟ, ನಿರ್ದೇಶಕ, ನಿರ್ಮಾಪಕನಾಗಿ ಸತತ 40ಕ್ಕೂ ಹೆಚ್ಚು ವರ್ಷಗಳ ಕಾಲದಿಂದ ಚಂದನವನದಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ನವರಸ ನಾಯಕ ಜಗ್ಗೇಶ್ ಅವರೀಗ ಸಿನಿಮಾ ಇಂಡಸ್ಟ್ರಿಗೆ ಮತ್ತಷ್ಟು ಸೇವೆ ಸಲ್ಲಿಸಬೇಕೆಂಬ ಹಂಬಲದಿಂದ ಚಲನಚಿತ್ರ ನಿರ್ಮಾಣ ಸಂಸ್ಥೆ 'ಜಗ್ಗೇಶ್ ಸ್ಟುಡಿಯೋಸ್' ಸ್ಥಾಪಿಸಿದ್ದಾರೆ. ಈ ಮೂಲಕ 40 ವರ್ಷಗಳ ಹಿಂದಿನ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ವಿಶೇಷ ಅಂದ್ರೆ, ಮಗ ಯತಿರಾಜ್ ನಟಿಸಿರುವ 'ಯಲಾಕುನ್ನಿ' ಸಿನಿಮಾದ ಅಷ್ಟೂ ಕೆಲಸಗಳು ಇದೇ ಸ್ಟುಡಿಯೋದಲ್ಲಿ ಅಚ್ಚುಕಟ್ಟಾಗಿ ನಡೆದಿವೆ. ಅಲ್ಲದೇ, ಒಂದು ಹಿಂದಿ ಸಿನಿಮಾ ಹಾಗೂ ಮಲಯಾಳಂ ಸಿನಿಮಾದ ಕೆಲಸವೂ ನಡೆದಿದೆ. ದುಡ್ಡಿಗಾಗಿ ಈ ಸ್ಟುಡಿಯೋ ನಿರ್ಮಾಣ ಮಾಡಲಿಲ್ಲ. ಇಂಡಸ್ಟ್ರಿಗೆ, ಎಲ್ಲಾ ಸಿನಿಮಾಗಳಿಗೂ ಕೈಗೆಟುಕುವ ದರದಲ್ಲಿ ಈ ಸ್ಟುಡಿಯೋ ಮೂಲಕ ಸೇವೆ ಸಿಗಲಿ ಅನ್ನೋದು ಜಗ್ಗೇಶ್ ಅಭಿಪ್ರಾಯ.
ಜಗ್ಗೇಶ್ ಸ್ಟುಡಿಯೋಸ್ ಬಗ್ಗೆ ಜಗ್ಗೇಶ್ ಮನದಾಳ: ''1980ರಲ್ಲಿ ಚಿತ್ರರಂಗ ಪ್ರವೇಶಿಸಿದೆ. ಸ್ಟುಡಿಯೋ ಕಟ್ಟೋ ಕನಸು ಇಂದು ನಿನ್ನೆಯದಲ್ಲ. ಸರಿ ಸುಮಾರು 40 ವರ್ಷಗಳ ಹಿಂದಿನ ಕನಸು. ಸಹೋದರ ಕೋಮಲ್ ಅವರ ಯಲಾಕುನ್ನಿ ಕಂಪ್ಲೀಟ್ ಕೆಲಸ ಇಲ್ಲೇ ನಡೆದಿದೆ. ನನ್ನ ಧರ್ಮಪತ್ನಿ ಕೊಟ್ಟ ಸಲಹೆಯಂತೆ ಜಗ್ಗೇಶ್ ಸ್ಟುಡಿಯೋಸ್ ಎಂದು ಹೆಸರಿಟ್ಟಿದ್ದೇವೆ. ಚಿಕ್ಕ ಮಗ ಯತಿರಾಜನ ಕನಸಿನ ಪ್ರಾಜೆಕ್ಟ್ ಈ ಸ್ಟುಡಿಯೋ''ಎಂದು ಹೇಳಿದರು.
"ಗಾಂಧಿನಗರದಲ್ಲಿ ಒಂದು ಸ್ಟುಡಿಯೋದಲ್ಲಿ ಎನ್.ಎಸ್.ರಾವ್ ಅವ್ರು ಡಬ್ಬಿಂಗ್ ಮಾಡುತ್ತಿದ್ದನ್ನು ನೋಡಿ ಇಂಪ್ರೆಸ್ ಆಗಿದ್ದೆ. ಆ ಸ್ಟುಡಿಯೋಗೆ ಆ ಸಮಯದಲ್ಲಿ 8.9 ಲಕ್ಷ ರೂ. ಖರ್ಚಾಗಿತ್ತು ಅನ್ನೋದೇ ಗ್ರೇಟ್" ಎಂದು ತಿಳಿಸಿದರು.
"ನನ್ನ ಸಿನಿಬದುಕಿನ ವರ್ಣರಂಜಿತ ಪಯಣಕ್ಕೆ 'ಚಾಮುಂಡೇಶ್ವರಿ ಸ್ಟುಡಿಯೋ' ದೊಡ್ಡ ಪಾತ್ರ ವಹಿಸಿದೆ. ಬಂಡ ನನ್ನ ಗಂಡ ಮೂಲಕ ಹೀರೋ ಆದೆ. ಆ ಸಮಯ ಶಂಕರನಾಗ್ ಅವರ ಸಂಕೇತ್ ಸ್ಟುಡಿಯೋಗೆ ಹೋದಾಗ ಆಗುತ್ತಿದ್ದ ಫೀಲ್ ಸಖತ್. ಶಂಕರ್ನಾಗ್ ಕೂಡಾ ಹಾಗೇ ಇದ್ದದ್ದು. ಅವರೊಬ್ಬ ವಿಷನರಿ ಮ್ಯಾನ್. ಸ್ಕ್ರೀನ್ ಮೇಲೆ ನಮ್ಮ ಪಾತ್ರ ನೋಡಿ ಡಬ್ ಮಾಡ್ತಾ ಇದ್ದ ದಿನಗಳು ನಿಧಾನವಾಗಿ ಕಮ್ಮಿ ಆಗ್ತಾ ಆಗ್ತಾ ಚಿಕ್ಕ ಚಿಕ್ಕ ಸ್ಕ್ರೀನ್ ನೋಡಿ ಡಬ್ ಮಾಡೋ ಕಾಲ ಬಂತು. ಇದರಿಂದ ನನಗೆ ಬೇಸರ ತಂದಿತ್ತು" ಎಂದು ಹೇಳಿದರು.
ಇದನ್ನೂ ಓದಿ:ಮುಕ್ತಾಯ ಹಂತದಲ್ಲಿ ಆರ್.ಚಂದ್ರು ಕನಸಿನ 'ಫಾದರ್': ತಂದೆ-ಮಗನ ಬಾಂಧವ್ಯ ಸಾರಲಿದ್ದಾರೆ ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರಾಜ್
"ಬಹುತೇಕ ಸಂಗೀತ ನಿರ್ದೇಶಕರು ತಮ್ಮ ತಮ್ಮ ಮನೆಗಳಲ್ಲಿ ಸ್ಟುಡಿಯೋ ಮಾಡಿಕೊಂಡು ಕೆಲಸಗಳನ್ನು ಮಾಡುತ್ತಿರುತ್ತಾರೆ. ವಿಶಾಲ ಸ್ಥಳ ಇರೋದು ಕಡಿಮೆ. ನನ್ನ ಡ್ರೀಮ್ ಬೇರೆಯೇ ಇತ್ತು. ಸ್ಟುಡಿಯೋ ವಿಶಾಲವಾಗಿ ಇರಬೇಕೆಂಬುದು ನನ್ನ ಆಸೆಯಾಗಿತ್ತು. ಕಲಾವಿದರಿಗೆ ಫೀಲ್ ಗುಡ್ ಅನುಭವ ಇದ್ರೆ ಒಳ್ಳೆಯದೆಂದು ನನಗನಿಸುತ್ತದೆ. ಚಿತ್ರೀಕರಣ ಮುಗಿದ ನಂತರ ಫೂಟೇಜ್ ತಂದು ಇಲ್ಲಿ ಕೊಟ್ಟರೆ CG ಒಂದು ಬಿಟ್ಟು ಮಿಕ್ಕ ಎಲ್ಲಾ ಕೆಲಸಗಳು ಇಲ್ಲಿ ನಡೆಯುತ್ತದೆ. ಈಗಾಗಲೇ ಒಂದು ಮಲಯಾಳಂ - ಒಂದು ಹಿಂದಿ ಚಿತ್ರದ ಕೆಲಸ ಇಲ್ಲಿ ನಡೆದಿದೆ. ಅವರೆಲ್ಲ ಫುಲ್ ಹ್ಯಾಪಿ. ಚಿಕ್ಕ ಬಜೆಟ್ - ದೊಡ್ಡ ಬಜೆಟ್ ಸಿನಿಮಾ ಎಂದು ಡಿವೈಡ್ ಮಾಡದೇ ಎಲ್ಲವೂ ಒಂದೇ ಎಂದು ಫೀಲ್ ಮಾಡಬೇಕು. ನನ್ನ ಸ್ಟುಡಿಯೋದಲ್ಲಿ ಇರುವ ಎಲ್ಲಾ ಇಕ್ವಿಪ್ಮೆಂಟ್ಸ್ ಲೇಟೆಸ್ಟ್ ಹಾಗೇ ಯುಎಸ್ನಿಂದ ತರಿಸಿದ್ದು. ಬೇರೆ ಸ್ಟುಡಿಯೋದವರು ಕೊಡೋ ಕ್ವಾಲಿಟಿಗಿಂತ ಒಳ್ಳೆ ಔಟ್ ಪುಟ್ ಕೊಡಲಿದ್ದೇವೆ. ಬೆಲೆ ಕೂಡಾ ಕಡಿಮೆಯೇ. ಈಗಾಗಲೇ ನಮ್ಮಲ್ಲಿ ನಾಲ್ಕೈದು ಫಿಲ್ಮ್ಸ್ ಇವೆ. ಕೆಲಸಗಳು ನಡೆಯುತ್ತಿವೆ. ನನ್ನ ಉದ್ಯಮದವರಿಗೆ ನನ್ನ ಸೇವೆ ತಲುಪಬೇಕು" ಎಂದು ತಿಳಿಸಿದರು.
ಇದನ್ನೂ ಓದಿ:ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ 'ಕೆರೆಬೇಟೆ', 'ವೆಂಕ್ಯಾ' ಪ್ರದರ್ಶನ
"ನನಗೆ ಹಾಡು ಹೇಳೋ ಆಸಕ್ತಿ ಹೆಚ್ಚು. ರಾಘವೇಂದ್ರ ಸ್ವಾಮಿಗಳ ಹಾಡುಗಳನ್ನು, ಲಾವಣಿ ಶೈಲಿಯ, ಆಡು ಭಾಷೆಯ ಹಾಡುಗಳ ಬಗ್ಗೆ ಆಸಕ್ತಿ ಇದೆ. ರಾಯರು ನನ್ನಿಂದ ಶುರು ಮಾಡಿಸ್ತಾರೆ. ಅಣ್ಣಾವ್ರ ಬಾನಿಗೊಂದು ಎಲ್ಲೆ ಎಲ್ಲಿದೆ, ವೇದಾಂತಿ ಹೇಳಿದನು, ಎಂದೆಂದೂ ನಿನ್ನನು ಮರೆತು, ಹಾಡುಗಳನ್ನು ನಾನೇ ಹಾಡಿ ಸಂಭ್ರಮ ಪಟ್ಟಿದ್ದೇನೆ" ಎಂದು ಜಗ್ಗೇಶ್ ಮನದಾಳ ಹಂಚಿಕೊಂಡರು.