ಬೆಂಗಳೂರು: ತಂದೆ ಇರುವವರೆಗೂ ಅವರ ಬೆಲೆ ಗೊತ್ತಾಗೋಲ್ಲ. ಅವರು ಇಲ್ಲಾ ಅಂದಾಗ ಅವರ ಶಕ್ತಿಯೇನು ಅನ್ನೋದು ತಿಳಿಯುತ್ತದೆ ಎಂದು ಅಭಿಷೇಕ್ ಅಂಬರೀಶ್ ಹೇಳಿದರು. 'ಅಪ್ಪಾ ಐ ಲವ್ ಯು' ಸಿನಿಮಾದ ಆಡಿಯೋ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಮ್ಮಅಪ್ಪನ ಬಗ್ಗೆ ಮಾತಾಡಬೇಕು ಎಂದರೆ ಗಂಟೆಗಟ್ಟಲೆ ಮಾತನಾಡಬೇಕಾಗುತ್ತದೆ. ನನ್ನನ್ನು ಯಾಕೆ ಪ್ರೇಮಣ್ಣ ಕಾರ್ಯಕ್ರಮಕ್ಕೆ ಕರೀತಾರೆ ಎನಿಸಿತ್ತು. ಆದರೆ ಟೈಟಲ್ ನೋಡಿ ಇದೇ ಕಾರಣಕ್ಕೆ ಕರೆದಿರಬಹುದು ಎಂದುಕೊಂಡೆ. ಪ್ರತಿಯೊಬ್ಬರಿಗೂ ಅಪ್ಪನ ಜೊತೆಗೆ ಒಂದು ವಿಶೇಷ ಮೆಮೊರಿ ಇದ್ದೇ ಇರುತ್ತದೆ ಎಂದರು.
ಇನ್ನು ಸಿನಿಮಾ ಕುರಿತು ಮಾತನಾಡಿ, ಕವಿರಾಜ್ ಸರ್ ತುಂಬಾ ಚೆನ್ನಾಗಿ ಹಾಡು ಬರೆದಿದ್ದಾರೆ. ತಬಲ ನಾಣಿ ಸರ್ ಒಂದೊಳ್ಳೆ ಮೆಸೇಜ್, ಕಂಟೆಂಟ್ ಇಟ್ಕೊಂಡು ಸಮಾಜಕ್ಕೆ ಏನಾದರೂ ಕೊಡಬೇಕು ಎಂದು ಬಂದಿದ್ದೀರಿ, ಒಳ್ಳೆಯದಾಗಲಿ ಎಂದು ಹೇಳಿದರು.
ಅಪ್ಪಾ ಐ ಲವ್ ಯು ಎಂಬ ಹಾಡು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಅಪ್ಪ ಮಗಳ ಬಾಂಧವ್ಯ ಗೀತೆ. ಇದೀಗ ಈ ಹಾಡಿನ ಪದವೇ ಸಿನಿಮಾ ಶೀರ್ಷಿಕೆಯಾಗಿದೆ. ನೆನಪಿರಲಿ ಪ್ರೇಮ್ ಹಾಗೂ ಟಗರು ಪುಟ್ಟಿ ಖ್ಯಾತಿಯ ಮಾನ್ವಿತ್ ಕಾಮತ್ ಇದೇ ಮೊದಲ ಬಾರಿಗೆ ಜೋಡಿಯಾಗಿ ಅಪ್ಪಾ ಐ ಲವ್ ಯು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ಮುಗಿಸಿ ಪ್ರೇಕ್ಷಕರ ಮುಂದೆ ಬರಲು ಸಿನಿಮಾ ರೆಡಿಯಾಗಿದೆ. ಇದರ ಭಾಗವಾಗಿ ಮೊದಲ ಹಾಡು ಅನಾವರಣವಾಗಿದೆ.
ಚಿತ್ರರಂಗದಲ್ಲಿ 22 ವರ್ಷ ಪೂರೈಸಿದ ಪ್ರೇಮ್:ನೆನಪಿರಲಿ ಪ್ರೇಮ್ ಮಾತನಾಡಿ, ಸಿನಿಮಾದಲ್ಲಿ 22 ವರ್ಷ ಪೂರೈಸಿದ್ದೇನೆ. ಇದು ಸಾಧ್ಯವಾಗಿದ್ದು ನನ್ನ ತಂದೆಯಿಂದ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಹೀರೋ ಆಗಬೇಕು ಅಂತಾ ಕನಸು ಕಟ್ಟಿಕೊಂಡಾಗ ಗಾಂಧಿನಗರದಲ್ಲಿ ಫೋಟೋ ಇಟ್ಟುಕೊಂಡು ತಿರುಗಾಡುತ್ತಿದ್ದೆ. ಮದುವೆ ಆಗಿತ್ತು. ಆಗ ತಾನೇ ಮಗಳು ಹುಟ್ಟಿದ್ದಳು. ಕಷ್ಟದಲ್ಲಿದ್ದೆ. ಕೆಲಸ ಮಾಡು ಅಂತಾ ಎಲ್ಲರೂ ಹೇಳುವವರು. ಆಗ ನಮ್ಮ ತಂದೆ ಬಳಿ ಕೆಲಸಕ್ಕೆ ಹೋಗುತ್ತೇನೆ ಎಂದೆ. ನನ್ನ ತಂದೆ ಹೇಳಿದ ಒಂದು ಮಾತಿನಿಂದ ನಾನು ಸ್ಟಾರ್ ಆಗಿ ಇಲ್ಲಿ ನಿಂತಿದ್ದೇನೆ. ತಬಲನಾಣಿ ಅವರು ಸಿನಿಮಾರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಥರ್ವ ಆರ್ಯ ಮೊದಲ ಸಿನಿಮಾದಲ್ಲಿ ಅದ್ಭುತ ಕಂಟೆಂಟ್ ತೆಗೆದುಕೊಂಡು ಬಂದಿದ್ದಾರೆ. ನಮಗೆಲ್ಲರಿಗೂ ಅವಕಾಶ ಕೊಟ್ಟಿದ್ದಾರೆ ಎಂದು ಹೇಳಿದರು.