ಮುಂಬೈ(ಮಹಾರಾಷ್ಟ್ರ): ತಮ್ಮದೇ ರಿವಾಲ್ವಾರ್ನಿಂದ ಆಕಸ್ಮಿಕವಾಗಿ ಗುಂಡು ಹಾರಿ ಬಾಲಿವುಡ್ ನಟ ಗೋವಿಂದ ಅವರು ಮಂಗಳವಾರ ಬೆಳಗ್ಗೆ ಗಾಯಗೊಂಡಿದ್ದರು. ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಬಿಡುಗಡೆಯಾಗಿ ಮಾಧ್ಯಮಗಳೆದುರು ಕಾಣಿಸಿಕೊಂಡರು. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಪಕ್ಷದಲ್ಲಿ ಗೋವಿಂದ ಗುರುತಿಸಿಕೊಂಡಿದ್ದಾರೆ.
60ರ ಹರೆಯದ ಗೋವಿಂದ ಅವರನ್ನು ಅವರ ಕುಟುಂಬ ಸದಸ್ಯರು ಗಾಲಿಕುರ್ಚಿಯಲ್ಲಿ ಆಸ್ಪತ್ರೆಯಿಂದ ಹೊರಗೆ ಕರೆತಂದರು. ಎಡಗಾಲಿಗೆ ಬ್ಯಾಂಡೇಜ್ ಹಾಕಿರುವುದು ವಿಡಿಯೋಗಳಲ್ಲಿ ಕಂಡುಬಂದಿದೆ. ಪತ್ನಿ ಸುನಿತಾ ಅಹುಜಾ ಮತ್ತು ಮಗಳು ಟೀನಾ ಅಹುಜಾ ಅವರೊಂದಿಗೆ ಆಗಮಿಸಿದ ನಟ, ಮಾಧ್ಯಮದವರು ಮತ್ತು ಅಭಿಮಾನಿಗಳನ್ನು ಕಂಡು ಕೈ ಮುಗಿದರು.
"ನನ್ನನ್ನು ಪ್ರೀತಿಸುವ ಮಾಧ್ಯಮ ಸದಸ್ಯರು, ಅಧಿಕಾರಿಗಳು ಮತ್ತು ನನ್ನ ಅಭಿಮಾನಿಗಳಿಗೆ ನನ್ನ ಧನ್ಯವಾದಗಳು. ಅವರ ಹಾರೈಕೆಗಳು ನನ್ನನ್ನು ಸುರಕ್ಷಿತವಾಗಿರಿಸಿವೆ. ಅವರೆಲ್ಲರಿಗೂ ಧನ್ಯವಾದ ಹೇಳಲು ಇಚ್ಛಿಸುತ್ತೇನೆ" ಎಂದು ಗೋವಿಂದ ತಿಳಿಸಿದರು.
ಡಿಸ್ಚಾರ್ಜ್ಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸುನೀತಾ ಅಹುಜಾ, ''ಗೋವಿಂದ ಅವರಿಗೆ ಕನಿಷ್ಠ ಆರು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಅವರು ಇಂದು ಡಿಸ್ಚಾರ್ಜ್ ಆಗಲಿದ್ದಾರೆ. ನಾನವರನ್ನು ಇಲ್ಲಿಗೆ ಕರೆತರುತ್ತೇನೆ. ಆದ್ರೆ ಅವರಿಗೆ ನಿಲ್ಲಲು ಕಷ್ಟವಾಗುತ್ತಿದೆ. ಚೇತರಿಸಿಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಡ್ಯಾನ್ಸ್ ಮಾಡಲಿದ್ದಾರೆ. ಎಲ್ಲರೂ ಅವರಿಗಾಗಿ ಪ್ರಾರ್ಥಿಸಿದ್ದಾರೆ. ಜೊತೆಗೆ ನಮ್ಮ ಮೇಲೆ ಮಾತಾ ರಾಣಿಯ ಆಶೀರ್ವಾದವಿದೆ" ಎಂದು ತಿಳಿಸಿದ್ದರು.
"ಮನೆಯಲ್ಲಿ, ಆರು ವಾರಗಳ ಕಾಲ ಬೆಡ್ ರೆಸ್ಟ್‌ನಲ್ಲಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಅವರು ಸೋಂಕಿಗೆ ಒಳಗಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ನಾವು ಹೆಚ್ಚಿನ ಜನರನ್ನು ಅವರ ಬಳಿಗೆ ಅನುಮತಿಸುವುದಿಲ್ಲ. ಅವರು ವಿಶ್ರಾಂತಿ ಪಡೆಯಬೇಕಿದೆ" ಎಂದಿದ್ದರು.