ಪ್ರಯಾಗರಾಜ್/ ಕೋಟಾ: ಬಾಂಬೆ ಐಐಟಿಯಿಂದ ಏರೋಸ್ಪೇಸ್ ಎಂಜಿನಿಯರಿಂಗ್ನಲ್ಲಿ ಬಿಟೆಕ್ ಮಾಡಿ ನಂತರ ಸನ್ಯಾಸಿಯಾಗಿರುವ ಅಭಯ್ ಸಿಂಗ್ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಸನ್ಯಾಸಿ ಆಗಿ ಕಾಣಿಸಿಕೊಂಡ ನಂತರ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದಾರೆ.
ಪ್ರಯಾಗರಾಜ್ ನಲ್ಲಿ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತಮಗೆ ಫೋಟೊಗ್ರಫಿ ಕಲೆಯ ಬಗ್ಗೆ ಒಲವಿರುವ ಬಗ್ಗೆ 2014ರಲ್ಲಿ 'ದಿ ಲಾಸ್ಟ್ ಪೇಜ್ ಆಫ್ ನೋಟ್ ಬುಕ್' ಹೆಸರಿನಲ್ಲಿ ಒಂದು ಪ್ರೊಜೆಕ್ಟ್ ಮಾಡಿರುವ ಬಗ್ಗೆ ಹೇಳಿಕೊಂಡಿದ್ದಾರೆ. ತಾವು ಕೆಲ ದಿನಗಳ ಕಾಲ ಕೋಟಾದಲ್ಲಿದ್ದಾಗ ಅಲ್ಲಿನ ವಿದ್ಯಾರ್ಥಿಗಳು, ಕೋಚಿಂಗ್ ಸೆಂಟರುಗಳು ಪ್ರಾಧ್ಯಾಪಕರುಗಳೊಂದಿಗೆ ಮಾತನಾಡಿದ್ದಾಗಿ ಹೇಳಿದ್ದಾರೆ. ಇದೆಲ್ಲವನ್ನು ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
4 ರಿಂದ 5 ದಿನಗಳ ಕಾಲ ಕೋಟಾದಲ್ಲಿದ್ದಾಗ ಅವರು ಅಲ್ಲಿ ಹಲವಾರು ಛಾಯಾಚಿತ್ರಗಳನ್ನು ಸೆರೆಹಿಡಿದಿದ್ದರು. ಇವರು ತಮ್ಮ ಫೇಸ್ ಬುಕ್ ವಾಲ್ ಪೇಪರ್ ಗೆ ಕೋಟಾದ ಕೋಚಿಂಗ್ ಕೇಂದ್ರವೊಂದರ ಚಿತ್ರವನ್ನು ಹಾಕಿದ್ದಾರೆ. 27 ನವೆಂಬರ್ 2014ರಲ್ಲಿಯೂ ಇವರು ಕೋಟಾದ ಕೋಚಿಂಗ್ ಸೆಂಟರ್ ಬಗ್ಗೆ ಒಂದು ಪೋಸ್ಟ್ ಮಾಡಿದ್ದರು. ನವೆಂಬರ್ 27ರಂದು ಬಾಂಬೆ ಐಐಟಿಯ ವಿಕ್ಟರ್ ಮೆನೆಜಿಸ್ ಕನ್ವೆನ್ಷನ್ ಸೆಂಟರ್ನಲ್ಲಿ ಆ್ಯನ್ ಇನ್ ಸೈಡ್ ಲುಕ್ ಇಂಟು ದಿ ವೈವ್ಸ್ ಆಫ್ ಸ್ಟೂಡೆಂಟ್ಸ್ ಅಟ್ ಕೋಟಾ ಹೆಸರಿನ ಎಕ್ಜಿಬಿಶನ್ ನಡೆಯಲಿರುವ ಬಗ್ಗೆ ಅವರು ಬರೆದಿದ್ದರು.
ನೋಟ್ ಬುಕ್ನ ಮುಖಪುಟದಲ್ಲಿ ಜೀವನ ಕಥೆ: 'ನಾನು ಕೋಟಾ ಬಗ್ಗೆ ಸಾಕ್ಷ್ಯಚಿತ್ರ ಛಾಯಾಗ್ರಹಣ ಯೋಜನೆಯನ್ನು ಮಾಡಿದ್ದೇನೆ. ನೋಟ್ ಬುಕ್ ನ ಮುಖಪುಟದಲ್ಲಿ, ಮುಖ್ಯ ಜೀವನ ಕಥೆಯನ್ನು ಬರೆಯಲಾಗಿದೆ. ಅದರ ಕೊನೆಯ ಪುಟದಲ್ಲಿ ನಾವು ಮುಖ್ಯವೆಂದು ಭಾವಿಸುವದನ್ನು ಬರೆಯಲಾಗಿದೆ. ಇದರಲ್ಲಿ, ಯಾರದೋ ಫೋನ್ ಸಂಖ್ಯೆ ಅಥವಾ ಇನ್ನಾವುದನ್ನಾದರೂ ಕೊನೆಯ ಪುಟದಲ್ಲಿ ಬರೆಯಲಾಗುತ್ತದೆ. ಕೋಟಾದಲ್ಲಿ ಓದುತ್ತಿರುವ ಮಕ್ಕಳ ಹೃದಯದಲ್ಲಿ ಏನಿದೆ ಎಂದು ಕಂಡುಹಿಡಿಯಲು ನಾನು ಪ್ರಯತ್ನಿಸಿದೆ. ಎಂಜಿನಿಯರಿಂಗ್ ಮಾಡಲು ಅಲ್ಲಿಗೆ ಹೋಗುವಂತೆ ಅವರ ಪೋಷಕರು ಅವರನ್ನು ಬಲವಂತಪಡಿಸಿದ್ದಾರೆಯೇ ಎಂಬುದರ ಬಗ್ಗೆ ನಾನು ತಿಳಿಯಲು ಬಯಸಿದೆ' ಎಂದು ಅಭಯ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದರು.
ಇವರು ಮೂಲತಃ ಹರಿಯಾಣದ ಝಜ್ಜರ್ ನಿವಾಸಿ: ಮೂಲತಃ ಹರಿಯಾಣದ ಝಜ್ಜರ್ ನಿವಾಸಿಯಾದ ಅಭಯ್ ಸಿಂಗ್ ಐಐಟಿ ಬಾಂಬೆಯಲ್ಲಿ ಓದುತ್ತಿರುವಾಗ ಈ ಯೋಜನೆಗಾಗಿ ಕೋಟಾಕ್ಕೆ ಬಂದರು. 2014ರ ಆಗಸ್ಟ್ 19ರಂದು ಅಭಯ್ ಸಿಂಗ್ ತನ್ನ ಫೇಸ್ ಬುಕ್ ವಾಲ್ ನಲ್ಲಿ ವಾರಾಂತ್ಯದಲ್ಲಿ ಕೋಟಾಕ್ಕೆ ಬರಲಿದ್ದೇನೆ ಎಂದು ಬರೆದಿದ್ದರು. ಇದರ ನಂತರ, ಅವರಿಗೆ ಬೇಕಾದ ಸಹಾಯ ಮಾಡುವುದಾಗಿ ಕೋಟಾದ ಕೆಲ ಜನ ಕಾಮೆಂಟ್ ಮಾಡಿದ್ದಾರೆ.
ಅಭಯ್ ಸಿಂಗ್ ಅವರು ಸೆಪ್ಟೆಂಬರ್ 14, 2014 ರಂದು ತಮ್ಮ ಫೇಸ್ ಬುಕ್ ಪುಟದಲ್ಲಿ 'ಎ ಸಮರಾಯ್ಜ್ ಫೋಟೋ ಪ್ರಾಜೆಕ್ಟ್' ಎಂಬ ಶೀರ್ಷಿಕೆಯ ಕೋಟಾದಲ್ಲಿನ ತಮ್ಮ ಯೋಜನೆಯ ಸಾರಾಂಶವನ್ನು ಹಂಚಿಕೊಂಡಿದ್ದಾರೆ. ಇದು 3 ಈಡಿಯಟ್ಸ್ ಚಿತ್ರದ 'ಗಿವ್ ಮಿ ಸಮ್ ಸನ್ ಶೈನ್' ಹಾಡನ್ನು ಹೊಂದಿದೆ. ಆದರೆ, ಈ ವಿಡಿಯೋವನ್ನು ಈಗ ಯೂಟ್ಯೂಬ್ನಿಂದ ತೆಗೆದುಹಾಕಲಾಗಿದೆ. ಇದರೊಂದಿಗೆ, ಸೆಪ್ಟೆಂಬರ್ 28 ರಂದು, ರೈಲಿನಲ್ಲಿ ಪ್ರಯಾಣಿಸುವಾಗ ಇಬ್ಬರು ವ್ಯಕ್ತಿಗಳು ಮೊಬೈಲ್ ಬಳಸುತ್ತಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ, ಅದರಲ್ಲಿ 'ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದು ಮೊಬೈಲ್' ಎಂದು ಶೀರ್ಷಿಕೆ ಬರೆಯಲಾಗಿದೆ. ಅವರು ಸೆಪ್ಟೆಂಬರ್ 30 ರಂದು ಕೋಟಾ ಕೋಚಿಂಗ್ ನ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಇದಕ್ಕೆ ಅವರು 'ಕೋಟಾದಲ್ಲಿ ದಿನದ ಪ್ರಾರಂಭ' ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.
ಅಭಯ್ ಸಿಂಗ್ ತಂದೆ ಹೇಳಿದ್ದಿಷ್ಟು: ಅಭಯ್ ಸಿಂಗ್ ಅವರ ತಂದೆ, ವಕೀಲ ಕರಣ್ ಸಿಂಗ್ ಈಟಿವಿ ಭಾರತ್ ಜೊತೆ ಮಾತನಾಡಿ, ಅಭಯ್ ಸಿಂಗ್ ಮೊದಲಿನಿಂದಲೂ ಅಧ್ಯಯನದಲ್ಲಿ ಬಹಳ ಮುಂದಿದ್ದ. ಆತ ದೆಹಲಿಯಲ್ಲಿ ಜೆಇಇ ಕೋಚಿಂಗ್ ಪಡೆದಿದ್ದ. ನಂತರ ಆತ 731 ನೇ ರ್ಯಾಂಕ್ ಪಡೆದುಕೊಂಡಿದ್ದ. ದೆಹಲಿ ಐಐಟಿಗೆ ಸೇರಿಕೊಳ್ಳು ಎಂದು ನಾವೆಲ್ಲ ಹೇಳಿದ್ದರೂ ಆತ ಬಾಂಬೆ ಐಐಟಿಗೆ ಸೇರಿಕೊಂಡಿದ್ದ ಎಂದು ಹೇಳಿದರು. ಅಲೆದಾಡುವ ಶಾಸ್ತ್ರವಚನಗಳ ಕುರಿತು ನನ್ನ ಬಳಿ ಒಂದು ಪುಸ್ತಕವಿತ್ತು, ಅದನ್ನೂ ಅವನು ಓದಿದ್ದನು. ಆತ ಕೆನಡಾದಲ್ಲಿ 36 ಲಕ್ಷ ರೂ.ಗಳ ಸಂಬಳದ ಉದ್ಯೋಗದಲ್ಲಿದ್ದ. ಆದರೆ ಆಧ್ಯಾತ್ಮದ ಒಲವಿನಿಂದ ನೌಕರಿ ತೊರೆದು ಭಾರತಕ್ಕೆ ಬಂದಿದ್ದಾನೆ ಎಂದು ಅವರು ತಿಳಿಸಿದರು.
ಸನ್ಯಾಸಿ ಆಗುವ ಬಗ್ಗೆ ಅಭಯ್ ಯಾರಿಗೂ ಹೇಳಿರಲಿಲ್ಲ: ಚಳಿಗಾಲದಲ್ಲಿ ಉತ್ತರ ಭಾರತದ ಶಿಮ್ಲಾ, ಮಸ್ಸೂರಿಗೆ ಆತ ಭೇಟಿ ನೀಡುತ್ತಿದ್ದ ಎಂದು ಅವರು ಹೇಳಿದರು. ಸನ್ಯಾಸಿ ಆಗುವ ತನ್ನ ನಿರ್ಧಾರದ ಬಗ್ಗೆ ಆತ ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲ. ಆತ ಕೆಲ ದಿನಗಳವರೆಗೆ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದ. ಆದರೆ ನಂತರ ಎಲ್ಲರನ್ನೂ ದೂರ ಮಾಡಿದ. ಕೆಲ ದಿನಗಳ ಹಿಂದೆ ಆತ ಹರಿದ್ವಾರದಲ್ಲಿದ್ದಾನೆ ಎಂದು ನನಗೆ ತಿಳಿಯಿತು. ಆದರೆ ಆತ ಸನ್ಯಾಸಿ ಜೀವನ ತೊರೆದು ವಾಪಸ್ ಬರಲಿ ಎಂಬುದು ನನ್ನ ಆಸೆಯಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ : ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ: ಛತ್ತೀಸ್ಗಢದಲ್ಲಿ ಆರೋಪಿ ವಶಕ್ಕೆ! - SAIF CASE SUSPECT DETAINED