ಕೋಟ್ಯಂತರ ಅಭಿಮಾನಿಗಳ ಮನಗಳಲ್ಲಿ ಜಾಗ ಪಡೆದಿರೋ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಅಕ್ಟೋಬರ್ 29, 2021ರ ಆ ದಿನ ಶಿವರಾಜ್ ಕುಮಾರ್ ಅವರ ಭಜರಂಗಿ 2 ಚಿತ್ರ ಬಿಡುಗಡೆ ಆಗಿ ಪ್ರದರ್ಶನಗೊಳ್ಳುತ್ತಿದೆ. ಇನ್ನೇನು ಭಜರಂಗಿ 2 ಚಿತ್ರ ಮುಗಿಯಬೇಕು ಎನ್ನುವಷ್ಟರಲ್ಲಿ ಪುನೀತ್ ರಾಜ್‍ಕುಮಾರ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು ಎನ್ನುವ ಆಘಾತಕಾರಿ ಸುದ್ದಿ ಹೊರ ಬಿದ್ದಿತ್ತು.
ಸದಾ ಸರಳತೆಯಿಂದ ಇರುತ್ತಿದ್ದ ರಾಜಕುಮಾರ ಅಗಲಿ ಇವತ್ತಿಗೆ 3 ವರ್ಷ. ಈ ನೋವಿನ ಸಂದರ್ಭದಲ್ಲಿ ಪುನೀತ್ ರಾಜ್‍ಕುಮಾರ್ ಆತ್ಮೀಯರಲ್ಲಿ ಒಬ್ಬರಾಗಿದ್ದ ಆ ದಿನಗಳು ನಟ ಚೇತನ್ ಅಪ್ಪು ಬಗ್ಗೆ ಈಟಿವಿ ಭಾರತ ಜೊತೆ ಎಕ್ಸ್ಕ್ಲ್ಯೂಸಿವ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಟ ಚೇತನ್ ಹೇಳುವಂತೆ, "ನಾನು ಸಿನಿಮಾರಂಗಕ್ಕೆ ಬಂದಿದ್ದು 2007ರಲ್ಲಿ. ಆಗ ತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಶುರು ಮಾಡಿದ್ದೆ. ನನಗೂ ಅಪ್ಪು ಸರ್ಗೂ ಒಳ್ಳೆ ಸ್ನೇಹ ಹಾಗೂ ಬಾಂಧವ್ಯ ಇತ್ತು ಎನ್ನುವುದು ಅದೆಷ್ಟೋ ಜನಕ್ಕೆ ಗೊತ್ತಿರಕ್ಕಿಲ್ಲ. ನನ್ನ ಹಾಗೂ ಅಪ್ಪು ಸರ್ ನಡುವೆ ಸ್ನೇಹ ಬೆಳೆಯಲು ಕಾರಣ ಸದಾಶಿವನಗರದ ಜಿಮ್. ಒಂದೇ ಜಿಮ್ನಲ್ಲಿ 10 ವರ್ಷದಿಂದ ವರ್ಕ್ ಔಟ್ ಮಾಡ್ತಾ ಇದ್ವಿ. ಆ ಹತ್ತು ವರ್ಷಗಳಲ್ಲಿ ವಾರಕ್ಕೊಮ್ಮೆ ಮೂರರಿಂದ ನಾಲ್ಕು ಸಲ ಭೇಟಿಯಾಗಿ ಮಾತನಾಡುತ್ತಿದ್ದೆವು. ಅಪ್ಪು ಸರ್ನಲ್ಲಿ ನಾನು ನೋಡಿದ್ದು ಅವರ ರೆವಲ್ಯೂಷನ್ ಯೋಚನೆಗಳು." ಎಂದು ವಿವರಿಸಿದರು.
ಮತ್ತಷ್ಟು ಹತ್ತಿರವಾದದ್ದು 2009ರಲ್ಲಿ:"ಅಪ್ಪು ಸರ್ಗೆ ನಾನು ಮತ್ತಷ್ಟು ಹತ್ತಿರ ಆಗಿದ್ದು 2009ರಲ್ಲಿ ನಡೆದ ಚಿತ್ರರಂಗದ ಅಮೃತ ಮಹೋತ್ಸವದ ಸಂದರ್ಭ. ಆಗ ತಾನೇ ನನ್ನ ಬಿರುಗಾಳಿ ಸಿನಿಮಾ ರಿಲೀಸ್ ಆಗಿತ್ತು. ನಾನು ಕರ್ನಾಟಕಕ್ಕೆ ಬಂದು ಮೂರು ವರ್ಷ ಆಗಿತ್ತು. ಜೊತೆಗೆ ಕನ್ನಡ ಚಿತ್ರರಂಗದ ಬಗ್ಗೆ ಅಷ್ಟೊಂದು ಗೊತ್ತಿರಲಿಲ್ಲ. ಚಿತ್ರರಂಗದ 75ನೇ ವರ್ಷದ ಕಾರ್ಯಕ್ರಮದಲ್ಲಿ ನಾನು ಟೀಮ್ ಜೊತೆ ವೇದಿಕೆ ಮೇಲೆ ಡ್ಯಾನ್ಸ್ ಮಾಡೋದಿಕ್ಕೆ ರೆಡಿಯಾಗಿ ಕೂತಿದ್ದೆ. ಅದಕ್ಕೂ ಮುಂಚೆ ಅಪ್ಪು ಸರ್ ಡ್ಯಾನ್ಸ್ ಇತ್ತು. ಆಗ ಸ್ಟೇಜ್ ಸೈಡ್ನಲ್ಲಿ ನನ್ನ ಡ್ಯಾನ್ಸರ್ ತಂಡ ನೋಡಿ ಸೀದಾ ಬಂದು ಅವರ ಮೊಬೈಲ್ ನನಗೆ ಇಟ್ಟುಕೊಳ್ಳುವುದಕ್ಕೆ ಹೇಳಿದ್ರು. ಆಗ ನನಗೆ ಒಂಥರಾ ಖುಷಿ, ಜೊತೆಗೆ ಅಪ್ಪು ಸರ್ ಮೊಬೈಲ್ನ್ನು ಕೇರ್ಫುಲ್ ಆಗಿ ಇಟ್ಟುಕೊಳ್ಳಬೇಕು. ಅಲ್ಲಿಂದ ಅಪ್ಪು ಸರ್ ನನ್ನ ಮಧ್ಯೆ ಗೆಳತನ ಮತ್ತಷ್ಟು ಜಾಸ್ತಿ ಆಯಿತು." ಎಂದು ಹೇಳಿದರು.
ನಾನು ನಿಮ್ಮ ಜತೆ ಇರ್ತೇನಿ ಅಂತಾ ಹೇಳಿದ್ದರು:"ಅಲ್ಲಿಂದ ಜಿಮ್ನಲ್ಲಿ ನಾನು ಹಾಗೂ ಅಪ್ಪು ಸರ್ ಹಲವು ವಿಚಾರಗಳ ಬಗ್ಗೆ ಮಾತನಾಡೋದಿಕ್ಕೆ ಶುರು ಮಾಡಿದ್ವಿ. 2012ರಲ್ಲಿ ನಾನು ಎಂಡೋಸಲ್ಫಾನ್ ಹೋರಾಟ ಶುರು ಮಾಡಿದ್ದೆ. ಕರಾವಳಿ ಹಾಗು ದಕ್ಷಿಣ ಕನ್ನಡ ಭಾಗದಲ್ಲಿ ಕೀಟನಾಶಕದಿಂದ ಸಾಕಷ್ಟು ಮಕ್ಕಳು ಕಾಯಿಲೆಗೆ ತುತ್ತಾಗುವ ಬಗ್ಗೆ ಮಾಡಿದ ವಿಡಿಯೋವನ್ನು ಅಪ್ಪು ಸರ್ ಮನೆಗೆ ಹೋಗಿ ತೋರಿಸಿ ವಿವರಿಸಿದೆ. ಆಗ ಅವರು ಮಕ್ಕಳಿಗೆ ಒಳ್ಳೆಯದಾಗುತ್ತದೆ ಎಂದು ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಹೇಳಿದ್ದರು. ಇದು ನನಗೆ ಇನ್ನಷ್ಟು ಬಲ ನೀಡಿತ್ತು." ಎಂದರು.
"ಅವರ ಈ ಮಾತಿನಿಂದ ನನ್ನ ಅವರ ನಡುವಿನ ಸ್ನೇಹ ಇನ್ನೂ ಹತ್ತಿರ ಆಗಿತ್ತು. ಪುನೀತ್ ರಾಜ್‍ಕುಮಾರ್ ಹೆಚ್ಚು ಓದದೇ ಇದ್ದರೂ ಅವರ ಕನಸುಗಳು, ಆಲೋಚನೆಗಳು ಕೇಳಿ ಸ್ವತಃ ನಾನೇ ಮನ ಸೋತಿದ್ದೆ. ಪುನೀತ್ ರಾಜ್‍ಕುಮಾರ್ ಸಂದರ್ಶನದಲ್ಲಿ ಹೇಳಿಕೊಂಡಿರುವ ಹಾಗೇ ಹತ್ತನೇ ಕ್ಲಾಸ್ ತನಕ ಓದಿದ್ದಾರೆ. ಆದರೆ, ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಿಂದ ಅವರಿಗೆ ಶಿಕ್ಷಣದ ಬಗೆಗೆ ಜಾಗೃತಿ ಮೂಡಿಸಬೇಕು ಅನಿಸಿತ್ತು. ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ ಬಹಳ ಪ್ರಮುಖವಾದುದು ಅಂತಾ ಅನಿಸಿತ್ತು.