ಸಿನಿಮಾ ಮಂದಿಗೆ ಅಭಿನಯದ ಜೊತೆ ಜೊತೆಗೆ ಹಲವು ಹವ್ಯಾಸಗಳಿರುತ್ತವೆ. ಕೆಲವರಿಗೆ ಪ್ರಾಣಿ ಪಕ್ಷಿಗಳನ್ನು ಕಂಡರೆ ಬಲು ಇಷ್ಟ. ಮತ್ತೆ ಕೆಲವರಿಗೆ ಅಡ್ವೆಂಚರ್ ಟ್ರಿಪ್ ಅಚ್ಚುಮೆಚ್ಚು. ಇದಕ್ಕೊಂದು ಹೊಸ ಉದಾಹರಣೆ ಸಿಕ್ಕಿದೆ. ಸೂಪರ್ ಹಿಟ್ ಕನ್ನಡ ಸಿನಿಮಾ 'ಚಾರ್ಲಿ' ನಟಿ ಸಂಗೀತಾ ಶೃಂಗೇರಿ ಅವರಿಗೂ ನಟನೆಯೊಂದಿಗೆ ಹಲವು ಹವ್ಯಾಸಗಳಿವೆ. '777 ಚಾರ್ಲಿ' ನಂತರ ಸಂಗೀತಾ ಒಂದಾದ ಮೇಲೊಂದರಂತೆ ಸಿನಿಮಾ ಮಾಡ್ತಾರೆ ಎಂದೇ ಬಹುತೇಕ ಅಭಿಮಾನಿಗಳು ಅಂದುಕೊಂಡಿದ್ದರು. ಆದ್ರೆ ಅವರು ಸೀದಾ ಹೋಗಿದ್ದು ದೊಡ್ಮನೆಗೆ! ಅದೇ ಬಿಗ್ ಬಾಸ್ ಮನೆಗೆ.
ಕನ್ನಡದ ಬಿಗ್ ಬಾಸ್ ಸೀಸನ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಈ ರಿಯಾಲಿಟಿ ಶೋ ಸೀಸನ್‌ನಿಂದ ಸೀಸನ್ಗೆ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಹೊರ ಜಗತ್ತಿನಲ್ಲಿ ಒಳ್ಳೆ ಹೆಸರು ಮಾಡಿದವರೂ ಕೂಡಾ ಬಿಗ್ ಬಾಸ್ ಮನೆಯೊಳಗಿನ ವರ್ತನೆಗಳಿಂದ ತಮ್ಮದೇ ಅಭಿಮಾನಿಗಳ ಅಸಮಾಧಾನ ಎದುರಿಸಿದ್ದೂ ಉಂಟು. ಆದರೆ ಅದೆಂಥಾ ಸವಾಲುಗಳು ಎದುರಾದರೂ ತಾವು ತಾವಾಗೇ ಉಳಿದ, ಸಹಜ ಮಾತು, ವರ್ತನೆಯಿಂದ ಅನೇಕರ ಹೃದಯ ಗೆದ್ದ ಸಂಗೀತಾ ಶೃಂಗೇರಿ ಅಭಿಮಾನಿಗಳಿಂದ 'ಸಿಂಹಿಣಿ' ಎಂಬ ಬಿರುದನ್ನೂ ಪಡೆದರು. ಇದೇ ಸಿಂಹಿಣಿ ಇದೀಗ ಹುಲಿಯ ಅಪರೂಪದ ಚಲನವಲನಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಹೌದು, ಇತ್ತೀಚೆಗೆ ಸಂಗೀತಾ ಶೃಂಗೇರಿ ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದರು. ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಅರಣ್ಯ ಎಂಬ ಹೆಗ್ಗಳಿಕೆ ಬಂಡೀಪುರಕ್ಕಿದೆ. ಹೀಗಾಗಿಯೇ ಬಂಡೀಪುರಕ್ಕೆ ಕ್ಯಾಮರಾ ಹಿಡಿದು ಹೋಗಿದ್ದ ಸಂಗೀತಾ, ಹುಲಿಯನ್ನು ತೀರಾ ಹತ್ತಿರದಿಂದ ಕಣ್ತುಂಬಿಕೊಂಡಿದ್ದಾರೆ. ಅವರೇ ಹೇಳಿರುವಂತೆ, ಹತ್‌ಹತ್ರ ಒಂದು ಗಂಟೆ ಹುಲಿಯ ದರ್ಶನ ಮಾಡಿಕೊಂಡು ಮರಳಿದ್ದಾರೆ.