ನವದೆಹಲಿ: 2022ರ ಸೆಪ್ಟೆಂಬರ್ 30ರಂದು ತೆರೆಕಂಡು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟನೆಯ ಚಿತ್ರ 'ಕಾಂತಾರ' 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ 'ಅತ್ಯುತ್ತಮ ಮನರಂಜನಾ ಸಿನಿಮಾ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
2022ನೇ ಸಾಲಿನಲ್ಲಿ ತೆರೆಕಂಡು ಜನಮನ ತಲುಪಿದ ಸಿನಿಮಾಗಳನ್ನು ಕೇಂದ್ರ ಸರ್ಕಾರ ಗೌರವಿಸುತ್ತಿದೆ. ಕನ್ನಡದ 3 ಚಿತ್ರಗಳು 6 ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿವೆ. ಆ ಸಾಲಿನಲ್ಲಿ ನಿರೀಕ್ಷೆ ಮೀರಿ ಅಭೂತಪೂರ್ವ ಯಶ ಕಂಡಿರುವ 'ಕಾಂತಾರ' ಅತ್ಯುತ್ತಮ ಮನರಂಜನಾ ಸಿನಿಮಾವಾಗಿ ಹೊರಹೊಮ್ಮಿದೆ.
ಸಿನಿಮಾದ ಕಂಟೆಂಟ್ ಗಟ್ಟಿಯಾಗಿದ್ದರೆ, ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಂದೇ ಬರುತ್ತಾರೆ ಅನ್ನೋ ಮಾತನ್ನು 'ಕಾಂತಾರ' ನಿಜ ಮಾಡಿತ್ತು. ದೈವಾರಾಧನೆ ಸುತ್ತ ಸಿನಿಮಾದ ಕಥೆ ಹೆಣೆಯಲಾಗಿತ್ತು. ಕಂಬಳ, ದೈವಕೋಲ ಸೇರಿದಂತೆ ಕರಾವಳಿ ಸಂಸ್ಕೃತಿಯನ್ನು ಚಿತ್ರದಲ್ಲಿ ಎತ್ತಿ ಹಿಡಿಯಲಾಗಿತ್ತು. ಸಿನಿಮಾದ ಯಶಸ್ಸಿಗೆ ಇದೇ ಪ್ರಮುಖ ಕಾರಣ ಅಂತಾರೆ ವೀಕ್ಷಕರು.
ಕಾಂತಾರ ಎಂಬ ಅದ್ಭುತ ಕಥೆಯ ಯಶಸ್ಸು ನಟ ರಿಷಬ್ ಶೆಟ್ಟಿ ಅವರಿಗೆ ಡಿವೈನ್ ಸ್ಟಾರ್ ಎಂಬ ಹೆಸರು ತಂದುಕೊಟ್ಟಿತು. ಶೆಟ್ರು ಇಡೀ ಭಾರತೀಯ ಚಿತ್ರರಂಗದಾದ್ಯಂತ ಜನಪ್ರಿಯರಾದರು. ತಮ್ಮ ಬೇಡಿಕೆಯನ್ನು ಸಾಕಷ್ಟು ಹೆಚ್ಚಿಸಿಕೊಂಡರು. ಕಥೆ ಎಷ್ಟರ ಮಟ್ಟಿಗೆ ಜನಮನ ತಲುಪಿತೆಂದರೆ, ಚಿತ್ರದ ಮತ್ತೊಂದು ಭಾಗ ನಿರ್ಮಾಣಗೊಳ್ಳುತ್ತಿದೆ. ಮೊದಲ ಭಾಗ ಮಾಡುವಾಗ ಸಿನಿಮಾಗೆ ಮತ್ತೊಂದು ಭಾಗ ತರುವ ಉದ್ದೇಶವನ್ನು ತಂಡ ಹೊಂದಿರಲಿಲ್ಲ. ಆದ್ರೆ ಸಿನಿಮಾದ ಯಶಸ್ಸು ತಂಡಕ್ಕೆ ಸ್ಫೂರ್ತಿ ನೀಡಿ, ಕಾಂತಾರ ಪ್ರೀಕ್ವೆಲ್ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿದೆ. ಈ ಚಿತ್ರದ ಮೇಲೆ ಇಡೀ ಭಾರತೀಯ ಚಿತ್ರರಂಗ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ.
ಕೆಜಿಎಫ್ ಮೂಲಕ ಜನಪ್ರಿಯವಾದ ಹೊಂಬಾಳೆ ಫಿಲ್ಮ್ಸ್ ಕಾಂತಾರದಿಂದ ತನ್ನ ಹೆಸರನ್ನು ಮತ್ತಷ್ಟು ಹೆಚ್ಚಿಸಿಕೊಂಡಿತು. ಭಾರತೀಯ ಚಿತ್ರರಂಗದಲ್ಲೇ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮಿದೆ. ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಸೇರಿದಂತೆ ಹಲವರು ಪ್ರಮುಖ ಪಾತ್ರ ನಿರ್ವಹಿಸಿ ಗಮನ ಸೆಳೆದಿದ್ದರು.