ಕರ್ನಾಟಕ

karnataka

ETV Bharat / business

ಕೇಂದ್ರ ಬಜೆಟ್: ಜಿಡಿಪಿಗೆ ಶೇ 1ರಷ್ಟು ಕೊಡುಗೆ ನೀಡುವ ಮಹಾಕುಂಭಮೇಳದ ಪ್ರಸ್ತಾಪವೇ ಇಲ್ಲ! - UNION BUDGET

ಕೇಂದ್ರ ಬಜೆಟ್ -2025 ರ ಬಗ್ಗೆ ಒಂದು ಅವಲೋಕನ ಇಲ್ಲಿದೆ.

ಮಹಾಕುಂಭಮೇಳ
ಮಹಾಕುಂಭಮೇಳ (ians)

By ETV Bharat Karnataka Team

Published : Feb 2, 2025, 7:44 PM IST

ಫೆಬ್ರವರಿ 1, 2025 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 8ನೇ ಬಾರಿಗೆ ದೇಶದ ವಾರ್ಷಿಕ ಬಜೆಟ್ ಅನ್ನು ಮಂಡಿಸಿದರು. ಇದಕ್ಕೂ ಒಂದು ದಿನದ ಹಿಂದೆ ಅವರು ಭಾರತದ ಆರ್ಥಿಕ ಸಮೀಕ್ಷಾ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿದ್ದರು. ನೆರೆಯ ದೇಶ ಚೀನಾಗೆ ಪೈಪೋಟಿ ನೀಡಲು ಭಾರತವನ್ನು ಉತ್ಪಾದನಾ ಶಕ್ತಿಯಾಗಿ ಬೆಳೆಸುವಲ್ಲಿ ಎದುರಾಗಬಹುದಾದ ಸವಾಲುಗಳೇನು ಎಂಬುದರ ಮೇಲೆ ಈ ಸಮೀಕ್ಷೆ ಹೆಚ್ಚು ಕೇಂದ್ರೀಕೃತವಾಗಿತ್ತು. ದೇಶದಲ್ಲಿನ ಬಳಕೆ ಮತ್ತು ಉದ್ಯೋಗಗಳನ್ನು ಹೆಚ್ಚಿಸಲು ಸರ್ಕಾರದ ನೀತಿಗಳನ್ನು ಅವರು ಅನಾವರಣಗೊಳಿಸಿದ್ದು ಇದಕ್ಕೆ ಸಾಕ್ಷಿ.

ಮನಮೋಹನ್ ಸಿಂಗ್, ಪಿ.ಚಿದಂಬರಂ ಮತ್ತು ಇನ್ನೂ ಹಲವಾರು ಪ್ರಖ್ಯಾತ ಹಣಕಾಸು ಸಚಿವರುಗಳಿಗೆ ಪ್ರಸ್ತುತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಹೋಲಿಕೆ ಮಾಡುವುದಾದರೆ, ಸದ್ಯ ಭಾರತದಲ್ಲಿ ನಡೆಯುತ್ತಿರುವ ಮೆಗಾ ಧಾರ್ಮಿಕ ಮೇಳ ಮಹಾಕುಂಭಮೇಳವು ಸೃಷ್ಟಿಸಬಹುದಾದ ಆದಾಯದ ಅವಕಾಶಗಳ ಬಗ್ಗೆ ಅವರು ಮಾತನಾಡದಿರುವುದು ಒಂದು ಅಂಶವಾಗಿದೆ.

144 ವರ್ಷಗಳಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಕುಂಭಮೇಳದಿಂದ ದೇಶಕ್ಕೆ ಬರುವ ಸಂಪತ್ತಿನ ಹೆಚ್ಚಳದಿಂದ ಕಂಡು ಬರಬಹುದಾದ ಬೆಳವಣಿಗೆಯ ದರದ ಬಗ್ಗೆ ನಿರ್ಮಲಾ ಮಾತನಾಡಲಿಲ್ಲ. ಮೂಲತಃ ಅಲಹಾಬಾದ್ ಎಂದು ಕರೆಯಲಾಗುತ್ತಿದ್ದ ಪ್ರಯಾಗ್ ರಾಜ್​​ನಲ್ಲಿ ಸಂಗಮದ ಶೀತಲ ನೀರಿನಲ್ಲಿ ಈಗಾಗಲೇ 20 ಕೋಟಿ ಜನ ಪವಿತ್ರ ಸ್ನಾನ ಮಾಡಿದ್ದಾರೆ. ಅಷ್ಟೇ ಅಲ್ಲ, ಪ್ರಯಾಗ್ ರಾಜ್ ಕುಂಭಮೇಳಕ್ಕೆ ಸಾಂಪ್ರದಾಯಿಕ ಸ್ನಾನಕ್ಕಾಗಿ ಆಗಮಿಸುತ್ತಿರುವ ಕೋಟ್ಯಂತರ ಭಕ್ತರ ಸಂಖ್ಯೆ ಯುಎಸ್ ಮತ್ತು ಕೆನಡಾದ ಒಟ್ಟು ಜನಸಂಖ್ಯೆಗಿಂತ ಹೆಚ್ಚಾಗಿದ್ದು, ಇವರು ಧಾರ್ಮಿಕ ಮೇಳದಲ್ಲಿ ಭಾಗವಹಿಸುವ ಮೂಲಕ 2.5 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಾರೆ ಮತ್ತು ಈ ಪ್ರಕ್ರಿಯೆಯಲ್ಲಿ ಅವರು ದೇಶದ ಜಿಡಿಪಿಗೆ ಶೇಕಡಾ 1 ರಷ್ಟು ಕೊಡುಗೆ ನೀಡಿರಬಹುದು.

ನಮ್ಮ ಜಿಡಿಪಿಯ ಸ್ವರೂಪವನ್ನೇ ಬದಲಾಯಿಸಿದ ಇಂಥ ಪ್ರಮುಖ ಘಟನೆಯೊಂದು ನಮ್ಮ ಹಣಕಾಸು ಸಚಿವರ ಗಮನಕ್ಕೆ ಬಾರದಿರುವುದು ವಿಚಿತ್ರ. ಇಂಥ ಸಂದರ್ಭಗಳಲ್ಲಿಯೇ ಇಲ್ಲಿಯೇ ಪ್ರಧಾನಿ ಮೋದಿಯವರ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್' ಘೋಷಣೆಯು ನಿಜವಾದ ಅರ್ಥ ಪಡೆದುಕೊಳ್ಳುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಪ್ರತಿವರ್ಷ ಇಂಥ ನಾಲ್ಕು ಕಾರ್ಯಕ್ರಮಗಳನ್ನು ಆಯೋಜಿಸಿ ಅದರಿಂದ ಪ್ರತಿವರ್ಷ ಸುಮಾರು 3-4 ಪ್ರತಿಶತದಷ್ಟು ಜಿಡಿಪಿ ಹೆಚ್ಚಿಸಿಕೊಂಡು, ಅದೇ ಸಮಯದಲ್ಲಿ ಬೃಹತ್ ಪ್ರಮಾಣದ ಉದ್ಯೋಗಗಳನ್ನು ಯಾಕೆ ಸೃಷ್ಟಿಸಬಾರದು? ಈ ರೀತಿಯಾಗಿ ನಾವು ಕೃತಕ ಬುದ್ಧಿಮತ್ತೆಯ ಈ ಸಂಖ್ಯೆಗಳ ಆಟದಲ್ಲಿ ಚೀನಾ ಮತ್ತು ಪಾಶ್ಚಿಮಾತ್ಯ ದೇಶಗಳನ್ನು ಸೋಲಿಸಬಹುದಿತ್ತು.

ಅದೇನೇ ಇದ್ದರೂ ಹಣಕಾಸು ಸಚಿವರ ಬಜೆಟ್ ಮಧ್ಯಮ ವರ್ಗವನ್ನು ಸಂತೋಷಪಡಿಸಲು ಸಾಕಷ್ಟು ಘೋಷಣೆಗಳನ್ನು ಮಾಡಿದೆ. ವೈಯಕ್ತಿಕ ಆದಾಯ ತೆರಿಗೆಯ ಸ್ಲ್ಯಾಬ್ ಅನ್ನು ಬದಲಾಯಿಸಬೇಕೆಂಬುದು ದೊಡ್ಡ ನಿರೀಕ್ಷೆಯಾಗಿತ್ತು. ಈಗ ತೆರಿಗೆ ಪಾವತಿದಾರರು 12 ಲಕ್ಷ ರೂ.ಗಳವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಇತರ ಸ್ಲ್ಯಾಬ್ ಗಳನ್ನು ಸಹ ಸುವ್ಯವಸ್ಥಿತಗೊಳಿಸಲಾಗಿದೆ. ಈ ಒಂದು ಕ್ರಮದಿಂದ ಸರ್ಕಾರವು ಸುಮಾರು 1.20 ಲಕ್ಷ ಕೋಟಿ ರೂ.ಗಳಷ್ಟು ತೆರಿಗೆ ಆದಾಯವನ್ನು ಬಿಟ್ಟುಕೊಟ್ಟಿದ್ದರೂ, ಇದು ದೇಶದಲ್ಲಿ ಬಳಕೆಯನ್ನು ಉತ್ತೇಜಿಸಲಿದೆ.

ಫೆಬ್ರವರಿ 5 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇನ್ನೂ ಗೊಂದಲದಲ್ಲಿರುವ ದೆಹಲಿಯ ಮತದಾರರು ಬಿಜೆಪಿಗೆ ಮತ ಚಲಾಯಿಸುತ್ತಾರೆ ಎಂಬುದು ಕೇಂದ್ರ ಸರ್ಕಾರದ ನಿರೀಕ್ಷೆಯಾಗಿದೆ. ಅನೇಕ ರೀತಿಯಲ್ಲಿ ನೋಡುವುದಾದರೆ- ಬಜೆಟ್​ನ ಸಮಯ ಮತ್ತು ಆದಾಯ ತೆರಿಗೆ ಪಾವತಿದಾರರಿಗೆ ಈ ಪರಿಹಾರದ ಘೋಷಣೆ ಮಾಡಲು ಇದಕ್ಕಿಂತ ಉತ್ತಮ ಸಮಯ ಮತ್ತಾವುದೂ ಇರಲಿಲ್ಲ ಅನಿಸುತ್ತದೆ. ವಿವಿಧ ರೀತಿಯ ನಗದು ವರ್ಗಾವಣೆಯಂತಹ ಉಚಿತ ಕೊಡುಗೆಗಳಿಂದ ದೆಹಲಿಯ ಮತದಾರರು ಪ್ರಲೋಭನೆಗೊಳಗಾಗಿದ್ದರೂ, ಸೀತಾರಾಮನ್ ಅವರ ಈ ಬಜೆಟ್​ ಬಿಜೆಪಿಗೆ ಬಲ ತರಬಹುದು ಎಂಬುದು ಬಿಜೆಪಿ ಬೆಂಬಲಿಗರ ಆಶಾಭಾವನೆಯಾಗಿದೆ.

ಉದ್ಯೋಗ ಸೃಷ್ಟಿಯ ಕತೆಯ ಏನು?: ಉದ್ಯೋಗಗಳ ಮೇಲೆ ಕೃತಕ ಬುದ್ಧಿಮತ್ತೆ ಪರಿಣಾಮ ಬೀರಬಹುದಾದ ಹಾನಿಕಾರಕ ಅಂಶಗಳ ಬಗ್ಗೆ ಆರ್ಥಿಕ ಸಮೀಕ್ಷೆಯಲ್ಲಿ ಪ್ರಸ್ತಾಪಿಸಲಾಗಿದೆ. ಅದರಂತೆ ಬಜೆಟ್​ನಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಲು ಮತ್ತು ಭವಿಷ್ಯದ ಕಾರ್ಮಿಕ ಪಡೆಯನ್ನು ಸಜ್ಜುಗೊಳಿಸಲು ಉದ್ಯೋಗ ಕೌಶಲ್ಯ ತರಬೇತಿ ಮತ್ತು ಇತರ ಕೆಲ ಉಪಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ಉದ್ಯೋಗಾಕಾಂಕ್ಷಿಗಳ ಕೌಶಲ್ಯಗಳು ಉತ್ತಮಗೊಳ್ಳುತ್ತಿವೆ ಎಂಬ ಅಂಶವನ್ನು ಸಮೀಕ್ಷೆಗಳಲ್ಲಿ ಬಲವಾಗಿ ಪ್ರತಿಪಾದಿಸಲಾಗಿದ್ದರೂ ನಾವು ಈ ವಿಚಾರವನ್ನು ಕೊಂಚ ಜಾಗರೂಕತೆಯಿಂದ ನೋಡಬೇಕಾಗುತ್ತದೆ.

ರೈತ ಸಮುದಾಯದ ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು ಬಜೆಟ್​ನಲ್ಲಿ ಪ್ರಯತ್ನಿಸಲಾಗಿದೆ. ರೈತರು ತಮ್ಮ ಸಾಂಪ್ರದಾಯಿಕ ವೃತ್ತಿಯನ್ನು ತ್ಯಜಿಸುತ್ತಿದ್ದಾರೆ ಮತ್ತು ಭೂಮಿಯನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಮಾತುಗಳ ಹಿನ್ನೆಲೆಯಲ್ಲಿ ಬಜೆಟ್​ ಈ ಬಗ್ಗೆ ಪ್ರಸ್ತಾಪಿಸಿದೆ.

ಬಿಹಾರಕ್ಕೆ ವಿಶೇಷ ಗಮನ ನೀಡಿರುವುದಕ್ಕೆ ರಾಜಕೀಯ ಕಾರಣವೂ ಇರುವುದು ಸ್ಪಷ್ಟ. ಬಿಹಾರದಲ್ಲಿ ಹೊಸ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪಿಸುವುದಾಗಿ ಘೋಷಿಸಲಾಗಿದೆ. ಅಲ್ಲದೆ ಮಖಾನಾ ಸರಕು ಉತ್ಪಾದಕರ ಲಾಭ ಹೆಚ್ಚಿಸಲು ಕೇಂದ್ರ ಸರ್ಕಾರವು ಮಖಾನಾ ಮಂಡಳಿಯನ್ನು ರಚಿಸುವುದಾಗಿ ಹೇಳಿದೆ.

ಮಖಾನಾದ ಜನಪ್ರಿಯತೆ ವೇಗವಾಗಿ ಹೆಚ್ಚುತ್ತಿದ್ದು, ಸುಮಾರು ಐದು ಲಕ್ಷ ಕುಟುಂಬಗಳು ಇದರ ಕೃಷಿ ಮತ್ತು ಸಂಸ್ಕರಣೆಯಲ್ಲಿ ತೊಡಗಿಸಿಕೊಂಡಿವೆ. ಬಿಹಾರಕ್ಕೆ ಒಂದಿಷ್ಟು ಹೆಚ್ಚು ಕೊಡುಗೆಗಳನ್ನು ನೀಡಿರುವ ಮಧ್ಯೆ, ಕೆಲ ರಾಜ್ಯಗಳನ್ನು ನಿರ್ಲಕ್ಷಿಸಲಾಗಿದೆ. ಆಂಧ್ರಪ್ರದೇಶವನ್ನು ಏಕೆ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರದ ಎರಡು ಸ್ತಂಭಗಳಲ್ಲಿ ಒಂದು ಆಂಧ್ರಪ್ರದೇಶವಾಗಿದ್ದು, ಅಲ್ಲಿನ ಆಡಳಿತ ಪಕ್ಷ ಟಿಡಿಪಿ ಎನ್​ಡಿಎ ಭಾಗವಾಗಿದೆ.

ಉದ್ಯೋಗವನ್ನು ಹೆಚ್ಚಿಸಲು ಈ ಸರ್ಕಾರವು ಕೆಲ ಸಣ್ಣ ಭರವಸೆಗಳನ್ನು ನೀಡಿದೆ. ಆದರೆ ಕೆಲವು ಸರ್ಕಾರಿ ಅಧಿಕಾರಿಗಳು ಇದನ್ನು ಗೊತ್ತುಗುರಿ ಇಲ್ಲದ ಬಜೆಟ್ ಎಂದು ಕರೆದಿದ್ದಾರೆ. ಜಾಗತಿಕ ಬಿಕ್ಕಟ್ಟು ಸೃಷ್ಟಿಯಾಗುತ್ತಿರುವ ಮಧ್ಯೆ ನಾವು ಬಳಸಿಕೊಳ್ಳಬಹುದಾದಂಥ ಅವಕಾಶಗಳ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ ಎಂದು ಅವರು ಅಭಿಪ್ರಾಯ ಪಡುತ್ತಾರೆ. ಆರ್ಥಿಕ ಸಮೀಕ್ಷೆ ನಮಗೆ ಎಚ್ಚರಿಕೆ ನೀಡಿದ್ದರೂ, ಬಜೆಟ್ ಆ ಎಚ್ಚರಿಕೆಗೆ ಅನುಗುಣವಾಗಿ ನಡೆಯಲು ವಿಫಲವಾಗಿದೆ. ಸರ್ಕಾರವು ಉದ್ಯೋಗ ಮತ್ತು ಬಳಕೆಯನ್ನು ಸೃಷ್ಟಿಸಲು ತನ್ನದೇ ಆದ ಪ್ರಯತ್ನಗಳಿಗಿಂತ ಮಹಾ ಕುಂಭದ ಆಶೀರ್ವಾದವನ್ನೇ ಹೆಚ್ಚಾಗಿ ಅವಲಂಬಿಸಿದೆ ಎಂಬುದು ಮಾತ್ರ ಸ್ಪಷ್ಟ.

ಲೇಖನ: ಸಂಜಯ ಕಪೂರ್

(ಡಿಸ್ ಕ್ಲೇಮರ್: ಈ ಲೇಖನದಲ್ಲಿ ವ್ಯಕ್ತಪಡಿಸಲಾದ ಅಭಿಪ್ರಾಯಗಳು ಲೇಖಕರ ಅಭಿಪ್ರಾಯಗಳಾಗಿವೆ. ಇಲ್ಲಿ ವ್ಯಕ್ತಪಡಿಸಲಾದ ಸಂಗತಿಗಳು ಮತ್ತು ಅಭಿಪ್ರಾಯಗಳು ಈಟಿವಿ ಭಾರತದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ.)

ಇದನ್ನೂ ಓದಿ : ಕೇಂದ್ರ ಬಜೆಟ್​​- 2025 : ಯಾವ ವಸ್ತುಗಳು ಅಗ್ಗ, ಯಾವುದೆಲ್ಲಾ ದುಬಾರಿ? - CHEAPER AND COSTLY IN BUDGET

For All Latest Updates

ABOUT THE AUTHOR

...view details