ಕರ್ನಾಟಕ

karnataka

ETV Bharat / business

ಸತತ 8ನೇ ಬಾರಿಗೆ ಬಜೆಟ್​ ಮಂಡಸಲಿರುವ ವಿತ್ತ ಸಚಿವೆ ಸೀತಾರಾಮನ್: ಆಯವ್ಯಯ ಕುರಿತ ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ! - UNION BUDGET 2025

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಸವಾಲುಗಳೇನು?, ಬಜೆಟ್​ ಮಂಡನೆಯನ್ನು ಫೆಬ್ರವರಿ 1ಕ್ಕೆ ನಿಗದಿ ಪಡಿಸಿದ್ದು ಯಾವಾಗ? ಎಂಬುದು ಸೇರಿದಂತೆ ಕೆಲವು ಆಸ್ತಿಕರ ಮಾಹಿತಿ ಇಲ್ಲಿದೆ.

union budget
ಕೇಂದ್ರ ಬಜೆಟ್ (ETV Bharat)

By ETV Bharat Karnataka Team

Published : Jan 31, 2025, 9:33 PM IST

ನವದೆಹಲಿ:ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಎಂಟನೇ ಬಾರಿಗೆ ಕೇಂದ್ರ ಬಜೆಟ್ ನಾಳೆ(ಶನಿವಾರ) ಮಂಡಿಸಲಿದ್ದಾರೆ. ಮಂದಗತಿ ಆರ್ಥಿಕ ಬೆಳವಣಿಗೆ, ಅಮೆರಿಕ​ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಸೇರಿದಂತೆ ಪ್ರಮುಖ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಬಜೆಟ್​ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆ ಸ್ಲ್ಯಾಬ್​ಗಳಲ್ಲಿ ಪ್ರಮುಖ ಬದಲಾವಣೆ ತರಲು ಸಜ್ಜಾಗಿದ್ದಾರೆ ಎಂಬ ವರದಿಗಳು ಹರಿದಾಡುತ್ತಿರುವುದರಿಂದ ಎಲ್ಲರ ಕಣ್ಣುಗಳು ಆದಾಯ ತೆರಿಗೆ ಸ್ಲ್ಯಾಬ್​ಗಳ ಮೇಲೆ ನೆಟ್ಟಿವೆ. ಸರಕು ಮತ್ತು ಸೇವೆಗಳ ಬಳಕೆಯನ್ನು ಹೆಚ್ಚಿಸಲು ಮತ್ತು ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರವು ವಾರ್ಷಿಕ 10 ಲಕ್ಷ ರೂ.ವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ವಿಧಿಸಬಾರದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಬಜೆಟ್ ಅಧಿವೇಶನದ ಮೊದಲ ದಿನವಾದ ಶುಕ್ರವಾರ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರು ಸಿದ್ಧಪಡಿಸಿದ ಆರ್ಥಿಕ ಸಮೀಕ್ಷೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಿದರು. 2026ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯನ್ನು ಶೇ.6.3 ಮತ್ತು ಶೇ.6.8ರ ನಡುವೆ ಇರಬಹುದೆಂದು ಆರ್ಥಿಕ ಸಮೀಕ್ಷೆ ಅಂದಾಜಿಸಿದೆ.

ಬಜೆಟ್ 2025ರ ಭಾಷಣವನ್ನು ಯಾವಾಗ ಮತ್ತು ಎಲ್ಲಿ ಲೈವ್ ವೀಕ್ಷಿಸಬಹುದು?: ಕೇಂದ್ರ ಬಜೆಟ್ 2025 ಅನ್ನು ಫೆಬ್ರವರಿ 1 ರಂದು ಬೆಳಗ್ಗೆ 11 ಗಂಟೆಗೆ ಮಂಡಿಸಲಾಗುತ್ತದೆ. ನೀವು ಅಧಿಕೃತ ಕೇಂದ್ರ ಬಜೆಟ್ ವೆಬ್​ಸೈಟ್​ ಮತ್ತು ಸಂಸದ್ ಟಿವಿಯಲ್ಲಿ ಲೈವ್ ಸ್ಟ್ರೀಮ್ ವೀಕ್ಷಿಸಬಹುದು. ಜೊತೆಗೆ ಈಟಿವಿ ಭಾರತ್ ಕೂಡ ಬಜೆಟ್ ಭಾಷಣವನ್ನು ಲೈವ್ ಸ್ಟ್ರೀಮ್ ಮಾಡುತ್ತಿದ್ದು, ಇದರೊಂದಿಗೆ ಹಣಕಾಸು ಸಚಿವೆ ತಮ್ಮ ಭಾಷಣದಲ್ಲಿ ಮಾಡುವ ಪ್ರಮುಖ ಘೋಷಣೆಗಳನ್ನು ಲೈವ್ ಪೇಜ್​ನಲ್ಲಿ ನೀಡಲಿದೆ.

ಬಜೆಟ್​ಗಿರುವ ಸವಾಲುಗಳೇನು?:ಕೇಂದ್ರ ಬಜೆಟ್ 2025-26 ಜಾಗತಿಕ ಅನಿಶ್ಚಿತತೆ ನಡುವೆ ಬರುತ್ತದೆ, ಇದು ಭಾರತೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತದೆ. 2025ರ ಹಣಕಾಸು ವರ್ಷದಲ್ಲಿ ಶೇ.6.3-6.8ರ ಜಿಡಿಪಿ ಬೆಳವಣಿಗೆಯು, 2019ರಲ್ಲಿ ವಿಶ್ವವನ್ನು ಕಾಡಿದ ಕೋವಿಡ್ ಸಾಂಕ್ರಾಮಿಕ ರೋಗದ ನಂತರದ ಅತ್ಯಂತ ಕಡಿಮೆ ಬೆಳವಣಿಗೆಯಾಗಿದೆ. ಭೌಗೋಳಿಕ ರಾಜಕೀಯ ಅನಿಶ್ಚಿತ ಪರಿಸ್ಥಿತಿಯ ಹೊರತಾಗಿ ಆರ್ಥಿಕತೆ ಕುಸಿತ, ಬಳಕೆಯಲ್ಲಿ ಮಿತಗೊಳಿಸುವಿಕೆ ಮತ್ತು ಖಾಸಗಿ ಹೂಡಿಕೆಯ ಸ್ಥಗಿತ ಬಜೆಟ್​ಗಿರುವ ಪ್ರಮುಖ ಸವಾಲುಗಳಾಗಿವೆ. ಹಣಕಾಸು ಸಚಿವೆ ಮತ್ತು ಅವರ ತಂಡದ ಮುಂದಿರುವ ಪ್ರಮುಖ ಸವಾಲೆಂದರೆ ಫಿಸಿಕಲ್ ಪ್ರುಡೆನ್ಸ್ (ಹಣಕಾಸಿನ ವಿವೇಚನೆ)ಯಲ್ಲಿ ರಾಜಿ ಮಾಡಿಕೊಳ್ಳದೆ ಬೆಳವಣಿಗೆಯನ್ನು ವೃದ್ಧಿಸುವುದು.

2025-26ರ ಬಜೆಟ್ ತಂಡ: ಕಂದಾಯ ಕಾರ್ಯದರ್ಶಿ ತುಹಿನ್ ಪಾಂಡೆ, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್, ವೆಚ್ಚ ಕಾರ್ಯದರ್ಶಿ ಮನೋಜ್ ಗೋವಿಲ್, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ಅರುಣೀಶ್ ಚಾವ್ಲಾ, ಹಣಕಾಸು ಸೇವೆಗಳ ಕಾರ್ಯದರ್ಶಿ ಎಂ.ನಾಗರಾಜು ಮತ್ತು ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್ ಅವರು ಬಜೆಟ್ ರೂಪಿಸುವಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಹಕಾರ ನೀಡಿದ ತಂಡದಲ್ಲಿದ್ದಾರೆ.

ದಾಖಲೆ ನಿರ್ಮಿಸಲು ನಿರ್ಮಲಾ ಸಜ್ಜು: ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 2024 ರ ಮಧ್ಯಂತರ ಬಜೆಟ್ ಸೇರಿದಂತೆ ಒಟ್ಟು ಏಳು ಬಜೆಟ್​ಗಳನ್ನು ಮಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಸತತ ಎಂಟು ವರ್ಷಗಳ ಕಾಲ ಕೇಂದ್ರ ಬಜೆಟ್ ಅನ್ನು ಮಂಡಿಸುವುದರ ಮೂಲಕ ದಾಖಲೆ ಬರೆಯಲು ಅವರು ಸಜ್ಜಾಗಿದ್ದಾರೆ. ನರೇಂದ್ರ ಮೋದಿಯವರ ಎರಡನೇ ಅವಧಿ ಸರ್ಕಾರ ಅಂದರೆ 2019 ರಲ್ಲಿ ನಿರ್ಮಲಾ ಸೀತಾರಾಮನ್ ಅವರು ದೇಶದ ಮೊದಲ ಪೂರ್ಣಾವಧಿಯ ಮಹಿಳಾ ಹಣಕಾಸು ಸಚಿವೆಯಾದರು. 2024ರಲ್ಲಿ ಮೂರನೇ ಅವಧಿಗೆ ಅಧಿಕಾರಕ್ಕೆ ಮೋದಿ ಸರ್ಕಾರದಲ್ಲಿ ಅವರು ಹಣಕಾಸು ಖಾತೆಯನ್ನು ಉಳಿಸಿಕೊಂಡರು. ಸತತ 8ನೇ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರು, ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ವಿವಿಧ ಅವಧಿಗಳಲ್ಲಿ ಮಂಡಿಸಿದ 10 ಬಜೆಟ್​ಗಳ ದಾಖಲೆಗಳನ್ನು ಸರಿಗಟ್ಟಲು ಹತ್ತಿರದಲ್ಲಿದ್ದಾರೆ.

ದೇಸಾಯಿ ಅವರು 1959 ರಿಂದ 1964 ರವರೆಗಿನ ಅವಧಿಯಲ್ಲಿ 6 ಬಜೆಟ್‌ಗಳನ್ನು ಮತ್ತು 1967 ಮತ್ತು 1969 ರ ನಡುವೆ 4 ಬಜೆಟ್‌ಗಳನ್ನು ಮಂಡಿಸಿದ್ದರು. ಪಿ. ಚಿದಂಬರಂ ಮತ್ತು ಪ್ರಣಬ್ ಮುಖರ್ಜಿ, ಬೇರೆ ಬೇರೆ ಪ್ರಧಾನ ಮಂತ್ರಿಗಳ ಅಡಿ ಕ್ರಮವಾಗಿ 9 ಮತ್ತು 8 ಬಜೆಟ್‌ಗಳನ್ನು ಮಂಡಿಸಿದ್ದರು.

ಬ್ರೀಫ್ ಕೇಸ್ ನಿಂದ ಬಾಹಿ-ಖಾತಾ, ಬಾಹಿ-ಖಾತಾದಿಂದ ಕಾಗದರಹಿತದವರೆಗೆ: 2019 ರಲ್ಲಿ, ಸೀತಾರಾಮನ್ ಅವರು ಬಜೆಟ್ ಮಂಡಿಸುವ ವಿಧಾನದಲ್ಲಿ ಮಹತ್ವದ ಬದಲಾವಣೆ ಮಾಡಿದರು. ಸಾಂಪ್ರದಾಯಿಕ ಚರ್ಮದ ಬ್ರೀಫ್ ಕೇಸ್ ಬದಲಿಗೆ, ಅವರು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಕೆಂಪು ಬಟ್ಟೆಯಿಂದ ಸುತ್ತಿದ ಲೆಡ್ಜರ್ 'ಬಾಹಿ-ಖಾತಾ' ಅನ್ನು ಬಳಸಿದ್ದರು. ಅಂದಿನಿಂದ, ಬಜೆಟ್ ಅನ್ನು ಕಾಗದರಹಿತ ರೂಪದಲ್ಲಿ ವಿತರಿಸಲಾಗಿದೆ, ಇದು ಕಳೆದ ಮೂರು ವರ್ಷಗಳಿಂದ ಮುಂದುವರೆದಿದೆ.

ಅತೀ ದೀರ್ಘ ಮತ್ತು ಕಡಿಮೆ ಅವಧಿ ಬಜೆಟ್ ಭಾಷಣಗಳು: ಸೀತಾರಾಮನ್ ಅವರು ಸುದೀರ್ಘ ಬಜೆಟ್ ಭಾಷಣ ಮಾಡದ ದಾಖಲೆಯನ್ನೂ ಹೊಂದಿದ್ದಾರೆ. 2020 ರಲ್ಲಿ, ಅವರು ತಮ್ಮ ಭಾಷಣ ಮೊಟಕುಗೊಳಿಸುವ ಮೊದಲು ಎರಡು ಗಂಟೆ 40 ನಿಮಿಷಗಳ ಕಾಲ ಮಾತನಾಡಿದ್ದರು. 1977 ರಲ್ಲಿ ಹಿರೂಭಾಯಿ ಮುಲ್ಜಿಭಾಯಿ ಪಟೇಲ್ ಅವರು ಅತಿ ಕಡಿಮೆ ಅವಧಿ ಬಜೆಟ್ ಭಾಷಣವನ್ನು ಮಾಡಿದ್ದರು. ಅವರ ಭಾಷಣ ಕೇವಲ 800 ಪದಗಳಷ್ಟಿತ್ತು.

ಬಜೆಟ್ ದಿನಾಂಕವನ್ನು ಫೆಬ್ರವರಿ 1ಕ್ಕೆ ಬದಲಾಯಿಸಿದ್ದು ಯಾವಾಗ?:ಬಜೆಟ್ ಅನ್ನು ಮೂಲತಃ ಫೆಬ್ರವರಿ ತಿಂಗಳ ಕೊನೆಯ ದಿನದಂದು ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. ಇದು ವಸಾಹತುಶಾಹಿ ಯುಗದ ಹಿಂದಿನ ಸಂಪ್ರದಾಯವಾಗಿದೆ.ಈ ಸಮಯ ಲಂಡನ್ ಮತ್ತು ಭಾರತದಲ್ಲಿ ಏಕಕಾಲಿಕವಾಗಿ ಬಜೆಟ್​ ಘೋಷಣೆ ತಿಳಿಯಲು ಅವಕಾಶ ಮಾಡಿಕೊಟ್ಟಿತ್ತು. ಏಕೆಂದರೆ ಭಾರತದ ಸಮಯ ಇಂಗ್ಲೆಂಡ್​ನ ಸಮಯಕ್ಕಿಂತ 4 ಗಂಟೆ 30 ನಿಮಿಷ ಮುಂದಿದೆ.

1999ರ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು ಬಜೆಟ್​ ಮಂಡನೆಯನ್ನು 11 ಗಂಟೆಗೆ ನಿಗದಿ ಪಡಿಸಿದರು. ಪ್ರಸ್ತುತಿ ದಿನಾಂಕ ಅಂದರೆ ಫೆಬ್ರವರಿ 1 ರಂದು ಬಜೆಟ್​ ಮಂಡನೆಯನ್ನು 2017 ರಲ್ಲಿ ನಿಗದಿ ಪಡಿಸಿ ಬದಲಾಯಿಸಲಾಯಿತು.

ಇದನ್ನೂ ಓದಿ:ಆರ್ಥಿಕ ಸಮೀಕ್ಷೆ ಮಂಡಿಸಿದ ನಿರ್ಮಲಾ ಸೀತರಾಮನ್​: ಶೇ.6.3 - 6.8ರಷ್ಟು ಜಿಡಿಪಿ ಬೆಳವಣಿಗೆ ಅಂದಾಜು

ಇದನ್ನೂ ಓದಿ:ವಿಶ್ವದ ಮೂರನೇ ಶಕ್ತಿಯಾಗಲು ರಫ್ತು ಹೆಚ್ಚಿಸಬೇಕೆಂದು ಸಲಹೆ: ಇಲ್ಲಿವೆ ಆರ್ಥಿಕ ಸಮೀಕ್ಷೆಯ ಪ್ರಮುಖಾಂಶಗಳ ವಿವರ

ABOUT THE AUTHOR

...view details