ನವದೆಹಲಿ: 2024ರಲ್ಲಿ ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಆ್ಯಪಲ್ ಐಫೋನ್ಗಳ ಪಾಲು ಶೇ 7ಕ್ಕೆ ಏರಿಕೆಯಾಗಿದೆ. ದೇಶದಲ್ಲಿಯೇ ಐಫೋನ್ಗಳನ್ನು ತಯಾರಿಸಲಾಗುತ್ತಿರುವುದು ಹಾಗೂ ಗ್ರಾಹಕರು ಪ್ರೀಮಿಯಂ ಫೋನ್ಗಳತ್ತ ಹೆಚ್ಚು ಒಲವು ತೋರುತ್ತಿರುವುದರಿಂದ ಐಫೋನ್ಗಳ ಮಾರಾಟ ಹೆಚ್ಚಾಗುತ್ತಿದೆ ಎಂದು ವರದಿಯೊಂದು ಗುರುವಾರ ತೋರಿಸಿದೆ.
ಸೈಬರ್ ಮೀಡಿಯಾ ರಿಸರ್ಚ್ (ಸಿಎಂಆರ್) ಐಎಎನ್ಎಸ್ಗೆ ಹಂಚಿಕೊಂಡ ಮಾಹಿತಿಯ ಪ್ರಕಾರ, ವರ್ಷದಿಂದ ವರ್ಷಕ್ಕೆ ಐಫೋನ್ಗಳ ಮಾರಾಟ ಶೇಕಡಾ 23 ರಷ್ಟು ಹೆಚ್ಚಾಗಿದೆ ಮತ್ತು ಐಪ್ಯಾಡ್ಗಳ ಮಾರಾಟ ಶೇಕಡಾ 44 ರಷ್ಟು ಗಮನಾರ್ಹ ಏರಿಕೆಯಾಗಿದೆ.
ಮಾರಾಟ ಸಂಖ್ಯೆಯಲ್ಲಿ ಮಾರುಕಟ್ಟೆಯಲ್ಲಿ ಶೇ 10ರಷ್ಟು ಪಾಲು ಪಡೆಯುವ ಮೂಲಕ ಆ್ಯಪಲ್ 2024 ರ ಅಕ್ಟೋಬರ್ - ಡಿಸೆಂಬರ್ ತ್ರೈಮಾಸಿಕದಲ್ಲಿ (ಕ್ಯೂ 4) ಮೊದಲ ಬಾರಿಗೆ ಭಾರತದ ಅಗ್ರ 5 ಸ್ಮಾರ್ಟ್ಫೋನ್ಗಳ ಪಟ್ಟಿಗೆ ಪ್ರವೇಶಿಸಿತ್ತು. ಕಳೆದ ವರ್ಷ ಆ್ಯಪಲ್ ಹೊಸ ರಫ್ತು ಮತ್ತು ದೇಶೀಯ ಮಾರಾಟ ದಾಖಲೆಗಳನ್ನು ಮಾಡಿದೆ.
ಕಳೆದ ವರ್ಷದಲ್ಲಿ ಭಾರತದಲ್ಲಿ ಕಂಪನಿಯ ಕಾರ್ಯತಂತ್ರದ ವಿಧಾನವು ಗಮನಾರ್ಹ ಸಾಧನೆಗಳಿಗೆ ಕಾರಣವಾಗಿದೆ ಮತ್ತು ಮಾರುಕಟ್ಟೆ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ. ಭಾರತದಿಂದ ರಫ್ತಾಗಲಿರುವ ಆ್ಯಪಲ್ ಫೋನ್ಗಳ ಸಂಖ್ಯೆ 2024 ರಲ್ಲಿ 11 ಮಿಲಿಯನ್ ದಾಟಲಿದೆ.
ರಿಟೇಲ್ ಮಾರಾಟ ವಿಸ್ತರಣೆ, ಸೂಕ್ತ ಮಾರ್ಕೆಟಿಂಗ್ ತಂತ್ರಗಳು ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ವಿಶಾಲವಾಗಿ ಹರಡುವ ಮೂಲಕ ಭಾರತದಲ್ಲಿ ಆ್ಯಪಲ್ನ ಬೆಳವಣಿಗೆಯು ಮುಂಬರುವ ವರ್ಷದಲ್ಲಿ ಗಮನಾರ್ಹ ವೇಗದೊಂದಿಗೆ ಮುಂದುವರಿಯುವ ನಿರೀಕ್ಷೆಯಿದೆ ಎಂದು ಸೈಬರ್ ಮೀಡಿಯಾ ರಿಸರ್ಚ್ (ಸಿಎಂಆರ್) ನ ಇಂಡಸ್ಟ್ರಿ ರಿಸರ್ಚ್ ಗ್ರೂಪ್ ಉಪಾಧ್ಯಕ್ಷ ಪ್ರಭು ರಾಮ್ ಹೇಳಿದರು.
ಸ್ಟಾರ್ ಲಿಂಕ್ ಇಂಟರ್ನೆಟ್ಗೆ ಕನೆಕ್ಟ್ ಆಗಲಿವೆ ಆ್ಯಪಲ್ ಐಫೋನ್ಗಳು: ಅಮೆರಿಕದಲ್ಲಿ ಇನ್ನು ಮುಂದೆ ಆ್ಯಪಲ್ ಐಫೋನ್ಗಳು ಬಾಹ್ಯಾಕಾಶದಿಂದ ಇಂಟರ್ ನೆಟ್ ಸಂಪರ್ಕ ಒದಗಿಸುವ ಸ್ಪೇಸ್ಎಕ್ಸ್ ಒಡೆತನದ ಸ್ಟಾರ್ ಲಿಂಕ್ನ ಡೈರೆಕ್ಟ್ - ಟು - ಸೆಲ್ ಇಂಟರ್ನೆಟ್ ಕನೆಕ್ಟಿವಿಟಿಯನ್ನು ಬೆಂಬಲಿಸಲಿವೆ ಎಂದು ಯೋಜನೆಯ ಪಾಲುದಾರ ಟಿ - ಮೊಬೈಲ್ ಅನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಕಳೆದ ವರ್ಷ ನವೆಂಬರ್ನಲ್ಲಿ ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ನಿಂದ ಅನುಮೋದನೆ ಪಡೆದ ನಂತರ ಎಲೋನ್ ಮಸ್ಕ್ ಒಡೆತನದ ಸ್ಪೇಸ್ಎಕ್ಸ್ ಮತ್ತು ಜರ್ಮನಿ ಮೂಲದ ಟಿ-ಮೊಬೈಲ್ ಪ್ರಸ್ತುತ ಸ್ಟಾರ್ ಲಿಂಕ್ ಸೆಲ್ ನೆಟ್ ವರ್ಕ್ ಅನ್ನು ಪ್ರಾಯೋಗಿಕ ಆಧಾರದ ಮೇಲೆ ಪರೀಕ್ಷಿಸುತ್ತಿವೆ.
ಇದನ್ನೂ ಓದಿ : ಜಪಾನ್ ಮಾರುಕಟ್ಟೆಗೆ ಕಾಲಿಟ್ಟ 'ಮೇಡ್ ಇನ್ ಇಂಡಿಯಾ' ಜಿಮ್ನಿ 5-ಡೋರ್ SUV - JIMNY 5 DOOR SUV