ನವದೆಹಲಿ:ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿಯು ಇಂದು (ಶುಕ್ರವಾರ) ಬಡ್ಡಿದರಗಳ ಕುರಿತು ತನ್ನ ನಿರ್ಧಾರ ಪ್ರಕಟಿಸಿದೆ. ಈ ಬಾರಿಯೂ ಕೇಂದ್ರ ಬ್ಯಾಂಕ್ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಕಾಯ್ದುಕೊಂಡಿದೆ.
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಕಳೆದ ಮೂರು ದಿನಗಳಿಂದ (ಬುಧವಾರದಿಂದ ಶುಕ್ರವಾರದವರೆಗೆ) ನಡೆದ ಎಂಪಿಸಿ ಸಭೆ ಇಂದು ಮುಕ್ತಾಯ ಕಂಡಿದೆ. ಆರು ಸದಸ್ಯರ ಸಮಿತಿಯು ಬಡ್ಡಿದರ, ರೆಪೊ ದರವನ್ನು ನಿಗದಿಪಡಿಸುವ ಕಾರ್ಯವನ್ನು ಮಾಡಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿ ನಡೆಸಿ, ಶೇ. 6.5 ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಘೋಷಿಸಿದರು.
"ವಿತ್ತೀಯ ನೀತಿ ಸಮಿತಿಯು 4:2 ಬಹುಮತದ ಅನ್ವಯ ರೆಪೋ ದರವನ್ನು ಶೇ 6.5 ರಷ್ಟು ಇದ್ದು, ಇದನ್ನು ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಪರಿಣಾಮವಾಗಿ, ಸ್ಥಾಯಿ ಠೇವಣಿ ಸೌಲಭ್ಯ (SDF) ದರವು ಶೇ. 6.25 ಇರುತ್ತದೆ. ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ (MSF) ದರ ಮತ್ತು ಬ್ಯಾಂಕ್ ದರವು ಶೇ 6.75 ಇರಲಿದೆ'' ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.