ರಾಮನಗರ: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಕಂಪನಿ ಟಾಟಾ ಮೋಟಾರ್ಸ್ ತನ್ನ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಿಗೆ ಸುಲಭವಾಗಿ ವೇಗವಾಗಿ ಚಾರ್ಜ್ ಮಾಡುವ ಸೌಲಭ್ಯ ಒದಗಿಸುವ ಸಲುವಾಗಿ ದೇಶಾದ್ಯಂತ 250 ಹೊಸ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಮುಂದಾಗಿದೆ. ಇದಕ್ಕಾಗಿ ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಮತ್ತು ಥಂಡರ್‌ಪ್ಲಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಜೊತೆಗೆ ಸಹಭಾಗಿತ್ವ ಮಾಡಿಕೊಳ್ಳುವುದಾಗಿ ಘೋಷಿಸಿದೆ.
ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಪುಣೆ ಮತ್ತು ಕೊಚ್ಚಿ ಸೇರಿದಂತೆ 50ಕ್ಕೂ ಹೆಚ್ಚು ನಗರಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಆರಂಭಗೊಳ್ಳಲಿದೆ. ಈ ಸ್ಟೇಷನ್‌ಗಳು ಈಗಾಗಲೇ ಅಸ್ತಿತ್ವದಲ್ಲಿರುವ ಟಾಟಾ ಸಂಸ್ಥೆಯ 540 ವಾಣಿಜ್ಯ ವಾಹನ ಚಾರ್ಜಿಂಗ್ ಪಾಯಿಂಟ್‌ಗಳ ನೆಟ್ವರ್ಕ್ಗೆ ಹೊಸ ಸೇರ್ಪಡೆ. ಇ-ಕಾಮರ್ಸ್ ಕಂಪನಿಗಳು, ಪಾರ್ಸಲ್ ಮತ್ತು ಕೊರಿಯರ್ ಸೇವೆ ಒದಗಿಸುವವರು ಮತ್ತು ಇತರ ಹಲವಾರು ಉದ್ಯಮಗಳು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಸಲುವಾಗಿ ಲಾಸ್ಟ್ ಮೈಲ್ ಡೆಲಿವರಿ ಅಂದ್ರೆ ಕೊನೆಯ ಹಂತದ ಉತ್ಪನ್ನ ವಿತರಣೆ ಕಾರ್ಯಕ್ಕೆ ವಾಣಿಜ್ಯ ಇವಿಗಳ ಅಳವಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ವಾಣಿಜ್ಯ ಇವಿಗಳ ಚಲನೆಯ ತಿಳುವಳಿಕೆಯ ಆಧಾರದಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯು ಚಾರ್ಜ್ ಸ್ಟೇಷನ್ ಸ್ಥಾಪಿಸಲು ಸ್ಥಳ ಸೂಚಿಸಲಿದೆ. ಹತ್ತಿರದ ಡೀಲರ್‌ಶಿಪ್‌ಗಳಿಗೆ ಈ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಶಿಫಾರಸು ಮಾಡುತ್ತದೆ.
ಈ ಸಹಯೋಗದ ಕುರಿತು ಮಾತನಾಡಿದ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ವಿಭಾಗದ ಎಸ್‌ಸಿವಿ ಆ್ಯಂಡ್ ಪಿಯು ಉಪಾಧ್ಯಕ್ಷ ಮತ್ತು ಬಿಸಿನೆಸ್ ಹೆಡ್ ವಿನಯ್ ಪಾಠಕ್, "ಎಮಿಷನ್ ಮುಕ್ತ ಸರಕು ಸಾಗಾಣಿಕಾ ವಾಹನ ಸೌಲಭ್ಯವನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ನಮ್ಮ ಗುರಿ. ಪ್ರಮುಖ ರಸ್ತೆಗಳಲ್ಲಿ ಚಾರ್ಜಿಂಗ್ ಮೂಲಸೌಕರ್ಯ ವ್ಯವಸ್ಥೆಗಳನ್ನು ಹೆಚ್ಚಿಸುವ ಹಾಗೇ ಮತ್ತಷ್ಟು ಗ್ರಾಹಕರು ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರೋತ್ಸಾಹಿಸಲಿದ್ದೇವೆ. ನಮ್ಮ ಡೀಲರ್‌ಶಿಪ್‌ಗಳಲ್ಲಿ ವೇಗದ ಚಾರ್ಜರ್‌ಗಳನ್ನು ಸ್ಥಾಪಿಸುವುದರಿಂದ ಗ್ರಾಹಕರಿಗೆ ಚಾರ್ಜಿಂಗ್ ವ್ಯವಸ್ಥೆ ಲಭ್ಯವಾಗುವ ಅನುಕೂಲತೆ ದೊರೆಯಲಿದೆ" ಎಂದು ಹೇಳಿದರು.