ಮುಂಬೈ : ಭಾರತೀಯ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಮತ್ತು ನಿಫ್ಟಿ50 ಜುಲೈ 1ರ ಸೋಮವಾರದಂದು ಉತ್ತಮ ಏರಿಕೆಯೊಂದಿಗೆ ಕೊನೆಗೊಂಡವು. ಆಯ್ದ ಹಣಕಾಸು ಮತ್ತು ಐಟಿ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು.
ಸಕಾರಾತ್ಮಕ ಜಾಗತಿಕ ಸೂಚನೆಗಳು ದೇಶೀಯ ಮಾರುಕಟ್ಟೆಯ ಮನಸ್ಥಿತಿಯ ಮೇಲೆ ಪ್ರಭಾವ ಬೀರಿದ್ದರಿಂದ ಸೆನ್ಸೆಕ್ಸ್ 443 ಪಾಯಿಂಟ್ ಅಥವಾ ಶೇಕಡಾ 0.56 ರಷ್ಟು ಏರಿಕೆ ಕಂಡು 79,476.19 ಕ್ಕೆ ಕೊನೆಗೊಂಡರೆ, ನಿಫ್ಟಿ50 131 ಪಾಯಿಂಟ್ ಅಥವಾ ಶೇಕಡಾ 0.55 ರಷ್ಟು ಏರಿಕೆ ಕಂಡು 24,141.95 ರಲ್ಲಿ ಕೊನೆಗೊಂಡಿದೆ.
ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಟಿಸಿಎಸ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಸೆನ್ಸೆಕ್ಸ್ ಸೂಚ್ಯಂಕದ ಲಾಭಕ್ಕೆ ಹೆಚ್ಚಿನ ಕೊಡುಗೆ ನೀಡಿವೆ. ಬಿಎಸ್ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ 46,711.27 ಮತ್ತು 52,981.03 ರ ಹೊಸ ದಾಖಲೆಯ ಗರಿಷ್ಠ ಮಟ್ಟ ತಲುಪಿದ್ದರಿಂದ ಮಧ್ಯಮ ಮತ್ತು ಸಣ್ಣ ಕ್ಯಾಪ್ ವಿಭಾಗಗಳು ಮತ್ತಷ್ಟು ಹೆಚ್ಚಿನ ಖರೀದಿಯನ್ನು ಕಂಡವು. ಅಂತಿಮವಾಗಿ, ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕ ಶೇಕಡಾ 1.11 ರಷ್ಟು ಏರಿಕೆಯಾಗಿ 46,670.66 ಕ್ಕೆ ಕೊನೆಗೊಂಡಿತು ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇಕಡಾ 1.58 ರಷ್ಟು ಏರಿಕೆಯೊಂದಿಗೆ 52,951.73 ರಲ್ಲಿ ಸ್ಥಿರವಾಯಿತು.