ಮುಂಬೈ: ದುರ್ಬಲ ಜಾಗತಿಕ ಪ್ರವೃತ್ತಿಗಳಿಂದ ಪ್ರೇರಿತಗೊಂಡು ಷೇರುಗಳ ಮಾರಾಟ ಹೆಚ್ಚಾದ ಕಾರಣದಿಂದಾಗಿ ಭಾರತೀಯ ಷೇರು ಮಾರುಕಟ್ಟೆಯ ಮಾನದಂಡಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ-50 ಏಪ್ರಿಲ್ 30 ರ ಮಂಗಳವಾರದಂದು ಇಳಿಕೆಯಲ್ಲಿ ಕೊನೆಗೊಂಡವು.
ಮಂಗಳವಾರ ವಹಿವಾಟಿನ ಆರಂಭದಲ್ಲಿ ಮಾರುಕಟ್ಟೆಗಳು ಏರಿಕೆಯೊಂದಿಗೆ ಪ್ರಾರಂಭವಾದವು ಮತ್ತು ವಹಿವಾಟಿನ ಕೊನೆಯ ಗಂಟೆಯವರೆಗೆ ಏರಿಕೆಯಲ್ಲಿಯೇ ವಹಿವಾಟು ನಡೆಸಿದವು. ನಂತರ ಪ್ರಾಫಿಟ್ ಬುಕಿಂಗ್ ಆರಂಭವಾಗಿದ್ದರಿಂದ ಪ್ರಮುಖ ಸೂಚ್ಯಂಕಗಳು ಇಳಿಯಲಾರಂಭಿಸಿದವು.
ಸೆನ್ಸೆಕ್ಸ್ 189 ಪಾಯಿಂಟ್ ಅಥವಾ ಶೇಕಡಾ 0.25 ರಷ್ಟು ಕುಸಿದು 74,482.78 ರಲ್ಲಿ ಕೊನೆಗೊಂಡರೆ, ನಿಫ್ಟಿ-50 39 ಪಾಯಿಂಟ್ ಅಥವಾ ಶೇಕಡಾ 0.17 ರಷ್ಟು ಕುಸಿದು 22,604.85 ರಲ್ಲಿ ಕೊನೆಗೊಂಡಿದೆ. ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್ ಮತ್ತು ಟಿಸಿಎಸ್ ಸೇರಿದಂತೆ ಆಯ್ದ ಬ್ಯಾಂಕಿಂಗ್ ಮತ್ತು ಐಟಿ ಷೇರುಗಳು ಪ್ರಮುಖವಾಗಿ ಇಳಿಕೆಯಾದವು.
ಮಧ್ಯಮ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ತಮ್ಮ ಮೇಲ್ಮುಖ ಮುನ್ನಡೆಯನ್ನು ಮುಂದುವರಿಸಿದವು. ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕವು ಸಾರ್ವಕಾಲಿಕ ಗರಿಷ್ಠ 42,396.21 ಕ್ಕೆ ತಲುಪಿದ್ದು, ಶೇಕಡಾ 0.49 ರಷ್ಟು ಏರಿಕೆ ಕಂಡು 42,121.40 ಕ್ಕೆ ತಲುಪಿದೆ. ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕವು ಶೇಕಡಾ 0.10 ರಷ್ಟು ಏರಿಕೆ ಕಂಡು 47,315.93 ಕ್ಕೆ ತಲುಪಿದೆ.