ನವದೆಹಲಿ:ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ದ್ವೈಮಾಸಿಕ ಹಣಕಾಸು ನೀತಿ ಸಭೆ ಫೆಬ್ರವರಿ 8 ರಂದು ನಡೆಯಲಿದೆ. ರಾಯಿಟರ್ಸ್ ಸಮೀಕ್ಷೆಯ ಪ್ರಕಾರ, ರಿಸರ್ವ್ ಬ್ಯಾಂಕ್ ಕನಿಷ್ಠ ಜುಲೈವರೆಗೆ ಬಡ್ಡಿ ದರಗಳನ್ನು ಬದಲಾಯಿಸುವುದಿಲ್ಲ ಎಂದು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಾರೆ. ಕೆಲ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬಡ್ಡಿದರ ಬದಲಾಗಬಹುದಾದರೂ ಆರ್ಬಿಐ ಬಡ್ಡಿದರಗಳನ್ನು ಇನ್ನೂ ಕೆಲ ಕಾಲ ಯಥಾಸ್ಥಿತಿಯಲ್ಲಿಯೇ ಮುಂದುವರಿಸುವ ಸಾಧ್ಯತೆಯಿದೆ.
ರಿಸರ್ವ್ ಬ್ಯಾಂಕ್ ಅಲ್ಪಾವಧಿ ಸಾಲದ ದರ ಅಥವಾ ರೆಪೊ ದರವು ಸುಮಾರು ಒಂದು ವರ್ಷದಿಂದ ಶೇಕಡಾ 6.5 ರಲ್ಲಿ ಸ್ಥಿರವಾಗಿ ಉಳಿದಿದೆ. ಮುಖ್ಯವಾಗಿ ಜಾಗತಿಕ ಬೆಳವಣಿಗೆಗಳಿಂದ ಪ್ರೇರಿತವಾದ ಹಣದುಬ್ಬರ ನಿಯಂತ್ರಿಸಲು ಬೆಂಚ್ಮಾರ್ಕ್ ಬಡ್ಡಿದರವನ್ನು ಈ ಹಿಂದೆ ಫೆಬ್ರವರಿ 2023 ರಲ್ಲಿ ಶೇಕಡಾ 6.25 ರಿಂದ ಶೇಕಡಾ 6.5 ಕ್ಕೆ ಹೆಚ್ಚಿಸಲಾಗಿತ್ತು.
ಆರ್ಬಿಐ ಗವರ್ನರ್ ನೇತೃತ್ವದ ಹಣಕಾಸು ನೀತಿ ಸಮಿತಿ (ಎಂಪಿಸಿ)ಯು ಫೆಬ್ರವರಿ 6 ರಿಂದ ಮೂರು ದಿನಗಳ ಚರ್ಚೆಯನ್ನು ಪ್ರಾರಂಭಿಸಲಿದೆ. ಗವರ್ನರ್ ಶಕ್ತಿಕಾಂತ್ ದಾಸ್ ಅವರು ಫೆಬ್ರವರಿ 8 ರಂದು ಆರು ಸದಸ್ಯರ ಸಮಿತಿಯ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಜುಲೈ, 2023 ರಲ್ಲಿ ಶೇಕಡಾ 7.44 ರ ಗರಿಷ್ಠ ಮಟ್ಟವನ್ನು ತಲುಪಿ ನಂತರ ಇಳಿಕೆ ಕಂಡಿದೆ. ಆದಾಗ್ಯೂ ಇದು ಇನ್ನೂ ಮೇಲ್ಮಟ್ಟದಲ್ಲಿಯೇ ಇದ್ದು, ಡಿಸೆಂಬರ್ 2023 ರಲ್ಲಿ ಶೇಕಡಾ 5.69 ರಷ್ಟಿತ್ತು. ಬಡ್ಡಿದರಗಳ ಏರಿಳಿತಕ್ಕೆ ಹಣದುಬ್ಬರವೂ ಒಂದು ಮಾನದಂಡವಾಗಿರುತ್ತದೆ.