ಕೋಲ್ಕತ್ತಾ (ಪಶ್ಚಿಮ ಬಂಗಾಳ):ಕೆಲ ವರ್ಷಗಳಿಂದ ದೇಶದ ಆರ್ಥಿಕತೆಯ ವೇಗ ಸ್ಥಿರ ಮತ್ತು ಬಲವಾಗಿದ್ದರೂ, ರೆಪೋ ದರ, ಬಡ್ಡಿ ದರ ಕಡಿತಗೊಳ್ಳುವ ಸಾಧ್ಯತೆ ಇಲ್ಲ. ಜೂನ್ 5 ರಿಂದ ಜೂನ್ 7ರ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್‌ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ. ಬ್ಯಾಂಕ್ಗಳ ಬಡ್ಡಿ ದರ ಸೇರಿದಂತೆ ಯಾವುದೇ ಹಣಕಾಸಿನ ನಿರ್ಧಾರಗಳನ್ನು ವಿಶ್ವ ಕೇಂದ್ರೀಯ ಬ್ಯಾಂಕ್ನ ಸೂಚನೆ ಮತ್ತು ಅದು ಕೈಗೊಳ್ಳುವ ಕ್ರಮಗಳನ್ನು ಆಧರಿಸಿ ನಿರ್ಧಾರ ಮಾಡಲಿದೆ ಎಂದು ತಿಳಿದುಬಂದಿದೆ.
ಕಳೆದ ಕೆಲವು ತಿಂಗಳುಗಳಲ್ಲಿ ಹಣದುಬ್ಬರದಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ. ಆಹಾರ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡರೂ, ಗ್ರಾಹಕ ದರ ಸೂಚ್ಯಂಕ (ಸಿಪಿಐ) ಹಣದುಬ್ಬರವು ಶೇಕಡಾ 4.83 ರಲ್ಲಿ ಸ್ಥಿರವಾಗಿದೆ. ಇದೇ ವೇಳೆ CPI ಬ್ಯಾಸ್ಕೆಟ್ನ ಎಕ್ಸ್ ವೆಜಿಟೆಬಲ್ ದರವು 3.22 ಪ್ರತಿಶತಕ್ಕೆ ಇಳಿದಿದೆ. ಫೆಬ್ರವರಿಯಲ್ಲಿ ಇದು ಶೇಕಡಾ 3.77 ರಷ್ಟಿತ್ತು. ಕೋರ್ ಸಿಪಿಐ ದರ ಕೂಡ ಸ್ವಲ್ಪಮಟ್ಟಿಗೆ ಇಳಿಕೆ ಕಂಡಿದ್ದು, 3.2 ಪ್ರತಿಶತದಷ್ಟಿದೆ. ಫೆಬ್ರವರಿಯಲ್ಲಿ ಇದು ಶೇಕಡಾ 3.34 ರಷ್ಟಿತ್ತು.
ಪ್ರಸ್ತುತ ಬೆಳವಣಿಗೆಗಳ ಆಧಾರದಲ್ಲಿ ಕೋರ್ ಸಿಪಿಐ ದರ 2025 ರ ಹಣಕಾಸು ವರ್ಷದ ಮೊದಲಾರ್ಧದ ವೇಳೆಗೆ ಸುಮಾರು ಶೇಕಡಾ 3.4ಕ್ಕೆ ಇಳಿಯುವ ನಿರೀಕ್ಷೆಯಿದೆ. ಆರ್ಬಿಐನ ನಿರ್ಧಾರಗಳು ದರ ಸೂಚ್ಯಂಕದ ಮೇಲೆ ನಿಂತಿವೆಯಾದರೂ, ಇಳಿಯುತ್ತಿರುವ ಹಣದುಬ್ಬರದಿಂದ ನಿಟ್ಟುಸಿರು ಬಿಡುವಂತಾಗಿದೆ ಎಂದು ಕ್ವಾಂಟಮ್ ಎಎಂಸಿಯ ಹಿರಿಯ ವ್ಯವಸ್ಥಾಪಕ ಪಂಕಜ್ ಪಾಠಕ್ ಹೇಳಿದ್ದಾರೆ.