ನವದೆಹಲಿ: 7,000 ವರ್ಷಗಳ ಇತಿಹಾಸ ಹೊಂದಿರುವ ಯುಎಇ ಉತ್ತರ ತುದಿಯಲ್ಲಿರುವ ರಾಸ್ ಅಲ್ ಖೈಮಾ (ಆರ್ಎಕೆ) ಎಮಿರೇಟ್ ಇತ್ತೀಚಿನ ದಿನಗಳಲ್ಲಿ ಭಾರತೀಯರ ಅಚ್ಚುಮೆಚ್ಚಿನ ಪ್ರವಾಸಿ ತಾಣವಾಗಿ ಹೊರಹೊಮ್ಮುತ್ತಿದೆ. ದುಬೈ, ಶಾರ್ಜಾ ಮತ್ತು ಅಬುಧಾಬಿಗಳನ್ನು ಮೀರಿಸಿ ಇದು ಜನಪ್ರಿಯವಾಗುತ್ತಿದೆ. 2023ರಲ್ಲಿ ರಾಸ್ ಅಲ್ ಖೈಮಾಗೆ ಭೇಟಿ ನೀಡಿದ ಭಾರತೀಯ ಪ್ರವಾಸಿಗರ ಸಂಖ್ಯೆ ಶೇಕಡಾ 22ರಷ್ಟು ಹೆಚ್ಚಾಗಿ 1,40,000 ಕ್ಕೆ ತಲುಪಿದೆ.
ಆರ್ಎಕೆ ಎಮಿರೇಟ್ಗೆ ಕಳೆದ ವರ್ಷ ವಿಶ್ವದಾದ್ಯಂತ ದೇಶಗಳ 1.22 ಮಿಲಿಯನ್ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದರಲ್ಲಿ ಭಾರತೀಯ ಪ್ರವಾಸಿಗರ ಸಂಖ್ಯೆಯೇ ಶೇಕಡಾ 10ಕ್ಕಿಂತ ಹೆಚ್ಚಾಗಿದೆ. ಇಂಡಿಗೊ ಏರ್ಲೈನ್ಸ್ ಕಳೆದ ವರ್ಷ ರಾಸ್ ಅಲ್ ಖೈಮಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೈನಂದಿನ ವಿಮಾನ ಸಂಚಾರ ಆರಂಭಿಸಿದೆ. ಅಲ್ಲದೇ ಆರ್ಎಕೆಗೆ ಭಾರತದಿಂದ ವಾರಕ್ಕೆ 14 ವಿಮಾನಗಳು ಸಂಚಾರ ನಡೆಸುವುದು ವಿಶೇಷವಾಗಿದೆ.
ವಿವಾಹ ಸಮಾರಂಭಗಳನ್ನು ಏರ್ಪಡಿಸಲು ಭಾರತೀಯರು ಹೆಚ್ಚಾಗಿ ರಾಸ್ ಅಲ್ ಖೈಮಾಗೆ ಹೋಗುತ್ತಿರುವುದು ಕುತೂಹಲಕಾರಿಯಾಗಿದೆ. ಇದಕ್ಕೆ ಪೂರಕವಾಗಿ ಭಾರತೀಯ ವಧು ಮತ್ತು ವರರ ಬೇಡಿಕೆಗಳನ್ನು ಪೂರೈಸಲು ಆರ್ಎಕೆಯ ಪ್ರವಾಸೋದ್ಯಮ ಅಧಿಕಾರಿಗಳು ಯಾವುದೇ ಕೊರತೆ ಮಾಡದಿರುವುದು ವಿಶೇಷವಾಗಿದೆ.