ಬೆಂಗಳೂರು: GRAM SURAKSHA YOJANA :ಸಾಮಾನ್ಯವಾಗಿ ಜನರು ಭವಿಷ್ಯದಲ್ಲಿ ಉತ್ತಮವಾಗಿ ಬದುಕಬೇಕು ಎಂದು ಕನಸು ಕಾಣುತ್ತಾರೆ. ಎಲ್ಲ ಯೋಚನೆ ಯೋಜನೆಯನ್ನು ಮಾಡಿರುತ್ತಾರೆ. ಆದರೆ ಕಾರ್ಯಾಚರಣೆಗೆ ಮಾತ್ರ ಇಳಿದಿರುವುದಿಲ್ಲ. ಇನ್ನು ಕೆಲವರು ನಿಯಮಿತ ಆದಾಯದೊಂದಿಗೆ ಕಡಿಮೆ ಅಪಾಯದ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿರುತ್ತಾರೆ. ಇಂತಹವರಿಗಾಗಿಯೇ ಕೇಂದ್ರ ಸರ್ಕಾರ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಅಂಚೆ ಇಲಾಖೆ ಸಣ್ಣ ಉಳಿತಾಯಗಾರರಿಗಾಗಿ "ಗ್ರಾಮ ಸುರಕ್ಷಾ ಯೋಜನೆ" ಪರಿಚಯಿಸಿದೆ. ಇದರಲ್ಲಿ ನೀವು ನಿತ್ಯ ರೂ.50 ಹೂಡಿಕೆ ಮಾಡಿದರೆ ಮೆಚ್ಯೂರಿಟಿ ವೇಳೆಗೆ ಅದು 30 ಲಕ್ಷ ಬಂಡವಾಳವಾಗಿ ಬೆಳೆಯಬಹುದು. ಹಾಗಾದರೆ, ಈ ಯೋಜನೆಗೆ ಸೇರಲು ಯಾರು ಅರ್ಹರು? ಮೆಚುರಿಟಿ ಅವಧಿ ಏನು? ಸೇರುವುದು ಹೇಗೆ? ಈ ಬಗ್ಗೆ ಇಲ್ಲಿ ನಾವು ಸಂಪೂರ್ಣ ಮಾಹಿತಿ ನೀಡುತ್ತಿದ್ದೇವೆ.
ಯೋಜನೆ ಆರಂಭಿಸಲು ಬೇಕಾಗೋ ಅರ್ಹತೆಗಳೇನು?: ಭಾರತೀಯ ಅಂಚೆ ಇಲಾಖೆ ನೀಡುವ ಗ್ರಾಮ ಸುರಕ್ಷಾ ಯೋಜನೆ ಉಳಿತಾಯ ಯೋಜನೆ ಮಾತ್ರವಲ್ಲದೇ ಆರೋಗ್ಯ ಮತ್ತು ಜೀವ ವಿಮಾ ಪಾಲಿಸಿಯಾಗಿದೆ. ದೇಶದ ಗ್ರಾಮೀಣ ಜನರಿಗಾಗಿ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಗಳ ಕಾರ್ಯಕ್ರಮದ ಭಾಗವಾಗಿ 1995 ರಲ್ಲಿ ಅಂಚೆ ಇಲಾಖೆ ಇದನ್ನು ಪ್ರಾರಂಭಿಸಿದೆ. 19 ರಿಂದ 55 ವರ್ಷ ವಯಸ್ಸಿನ ಯಾವುದೇ ಭಾರತೀಯರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಗೆ ಪ್ರೀಮಿಯಂ ಪಾವತಿಸಲು ವಿವಿಧ ಆಯ್ಕೆಗಳಿವೆ. ಅದೇನೆಂದರೆ.. ನೀವು ಪ್ರೀಮಿಯಂ ಹಣವನ್ನು ಮಾಸಿಕ ಆಧಾರದ ಮೇಲೆ ಯಾವಾಗ ಬೇಕಾದರೂ ಪಾವತಿಸಬಹುದು. ಪ್ರತಿ ಮೂರು ತಿಂಗಳಿಗೊಮ್ಮೆ, ಪ್ರತಿ 6 ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ. ಹೀಗೆ ಹಲವು ಆಯ್ಕೆಗಳನ್ನು ಆರಿಸಿಕೊಂಡು ಹಣ ಪಾವತಿಸಬಹುದು.
ನಿತ್ಯ ನೀವು 417 ಹೂಡಿಕೆಯೊಂದಿಗೆ ಹೂಡಿಕೆ ಆರಂಭಿಸಿ ಅಂತಿಮವಾಗಿ ಮೆಚ್ಯೂರಿಟಿ ವೇಳೆಗೆ ಕೋಟಿ ರೂಪಾಯಿಗಳ ಲಾಭವನ್ನು ಪಡೆದುಕೊಳ್ಳಬಹುದು.
ಪ್ರೀಮಿಯಂ ಪಾವತಿ ವಿಧಾನಗಳು ಇಂತಿವೆ:ಗ್ರಾಮ ಸುರಕ್ಷಾ ಯೋಜನೆಯ ಪಕ್ವಗೊಳ್ಳುವ ಅಂದರೆ, ಮೆಚ್ಯೂರಿಟಿ ಅವಧಿಯು 55 ವರ್ಷಗಳಾಗಿವೆ. 58 , 60 ವರ್ಷಗಳಿಗೂ ನೀವು ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ವಯಸ್ಸಿಗೆ ಅನುಗುಣವಾಗಿ ನೀವು ಪ್ರೀಮಿಯಂ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು 19 ನೇ ವಯಸ್ಸಿನಲ್ಲಿ 10 ಲಕ್ಷದ ಪ್ರೀಮಿಯಂ ಅನ್ನು ಆಯ್ಕೆ ಮಾಡಿದರೆ, ಅಂತಹವರು 55 ವರ್ಷವನ್ನು ತಲುಪುವವರೆಗೆ ತಿಂಗಳಿಗೆ 1,515 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಅಂದರೆ ದಿನಕ್ಕೆ 50 ರೂ. ಅದೇ.. ಅವರು 58 ವರ್ಷಗಳವರೆಗೆ ಹೂಡಿಕೆ ಮಾಡಲು ಬಯಸಿದರೆ, ತಿಂಗಳಿಗೆ ರೂ.1,463 ಪ್ರೀಮಿಯಂ ಪಾವತಿಸಬೇಕು. 60 ವರ್ಷಗಳವರೆಗಿನ ಪ್ರೀಮಿಯಂ ರೂ.1,411 ಪಾವತಿಸಬೇಕಾಗುತ್ತದೆ.