ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಿಗೆ ಸಾಕಷ್ಟು ಕನಸುಗಳು, ಆಕಾಂಕ್ಷೆಗಳು ಇರುತ್ತವೆ. ನಾವು ಕಷ್ಟಪಟ್ಟರೂ ತೊಂದರೆಯಿಲ್ಲ, ನಮ್ಮ ಮಕ್ಕಳು ಸುಖವಾಗಿರಬೇಕು ಮತ್ತು ಅವರ ಜೀವನ ಉಜ್ವಲಾಗಿರಬೇಕೆಂಬ ಆಸೆ ಇರುತ್ತದೆ. ಹೀಗಾಗಿ ತಮ್ಮ ಮಕ್ಕಳ ಶಿಕ್ಷಣ ಮತ್ತು ಇತರ ಅಗತ್ಯಗಳಿಗಾಗಿ ಹೂಡಿಕೆ ಮಾಡಲು ಬಯಸುತ್ತಾರೆ. ಇಂತಹ ಪೋಷಕರ ಆದ್ಯತೆಗಳೆಂದರೆ, ಹೂಡಿಕೆಯ ರಕ್ಷಣೆ ಮತ್ತು ಆದಾಯ ಖಾತರಿಯನ್ನು ನೀಡುವ ಠೇವಣಿಗಳು. ಇವುಗಳು ಅಗತ್ಯವಿರುವ ಹಣವನ್ನು ಸಮಯಕ್ಕಿಂತ ಮುಂಚಿತವಾಗಿ ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ.
ನೀವು ದೀರ್ಘಾವಧಿಗೆ ಸುರಕ್ಷಿತ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇಚ್ಛಿಸಿದರೆ ಎಫ್‌ಡಿ (ಫಿಕ್ಸೆಡ್ ಡೆಪಾಸಿಟ್)ಗಳು ಸೂಕ್ತ. ಎಫ್‌ಡಿಗಳನ್ನು ವಿಶೇಷವಾಗಿ ಮಕ್ಕಳಿಗಾಗಿ ಪ್ರಾರಂಭಿಸಿದರೆ, ಭವಿಷ್ಯದಲ್ಲಿ ಉತ್ತಮ (ಕಾರ್ಪಸ್) ನಿಧಿಯನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಇದು ಮಕ್ಕಳ ಅಧ್ಯಯನ ಮತ್ತು ಇತರ ಅಗತ್ಯಗಳಿಗೆ ಉಪಯುಕ್ತ. ಬಹುತೇಕ ಪ್ರತಿಯೊಂದು ಬ್ಯಾಂಕ್ ಮಕ್ಕಳಿಗಾಗಿ ವಿಶೇಷ ಎಫ್‌ಡಿಗಳನ್ನು ನೀಡುತ್ತದೆ. ಕೆಲವು ಬ್ಯಾಂಕ್‌ಗಳು ಆನ್‌ಲೈನ್‌ನಲ್ಲೂ ಈ ಸೌಲಭ್ಯ ಒದಗಿಸುತ್ತಿವೆ. ಎಫ್‌ಡಿ ಮಾಡಲು ನೀವು, ನಿಮ್ಮ ಮಗುವಿನ ಜನನ ಪ್ರಮಾಣಪತ್ರ, ಪೋಷಕರ ಪ್ಯಾನ್ ಮತ್ತು ವಿಳಾಸದ ವಿವರಗಳನ್ನು ಬ್ಯಾಂಕ್‌ಗಳಿಗೆ ಸಲ್ಲಿಸಬೇಕು.
ಎಫ್‌ಡಿ ಯಾವಾಗ ಪ್ರಾರಂಭಿಸಬೇಕು?: ಮಕ್ಕಳು ಚಿಕ್ಕವರಿದ್ದಾಗ ಫಿಕ್ಸೆಡ್ ಡೆಪಾಸಿಟ್ ಮಾಡುವುದು ಉತ್ತಮ. ಇದನ್ನು ಮಾಡುವುದರಿಂದ ನಿಮ್ಮ ಹಣವು ದೀರ್ಘಾವಧಿಯಲ್ಲಿ ಬೆಳೆಯುತ್ತದೆ. ಆದರೆ, ನೀವು ನಿಯಮಿತವಾಗಿ ನಿಮ್ಮ ಠೇವಣಿಗಳನ್ನು ಪರಿಶೀಲಿಸಬೇಕು. ಬಡ್ಡಿದರ ಹೆಚ್ಚಾದಾಗ ಹಳೆಯ ಠೇವಣಿಗಳನ್ನು ರದ್ದುಪಡಿಸಬೇಕು. ಹೆಚ್ಚಿನ ಬಡ್ಡಿದರ ನೀಡುವ ಎಫ್‌ಡಿಗಳಲ್ಲಿ ಉಳಿತಾಯ ಮಾಡಬೇಕು.