ಕರ್ನಾಟಕ

karnataka

ETV Bharat / business

'ಅವಿವಾಹಿತ ಜೋಡಿಗೆ ರೂಮ್ ನೀಡಲ್ಲ': ಓಯೋ ಚೆಕ್ ಇನ್ ನೀತಿ ಮಾರ್ಪಾಟು - OYO CHECK IN POLICY

ಓಯೋ ತನ್ನ ರೂಮ್ ಬುಕಿಂಗ್ ನಿಯಮಗಳಲ್ಲಿ ಕೆಲ ಬದಲಾವಣೆ ಮಾಡಿದೆ.

ಓಯೋ ಹೋಟೆಲ್
ಓಯೋ ಹೋಟೆಲ್ (ಸಂಗ್ರಹ ಚಿತ್ರ) (IANS)

By PTI

Published : Jan 5, 2025, 1:59 PM IST

ನವದೆಹಲಿ: ಇನ್ನು ಮುಂದೆ ಅವಿವಾಹಿತ ಜೋಡಿಗಳಿಗೆ ತನ್ನ ಹೋಟೆಲ್​ ರೂಮ್​ಗಳನ್ನು ಬಾಡಿಗೆ ನೀಡುವುದಿಲ್ಲ ಎಂದು ಟ್ರಾವೆಲ್ ಬುಕಿಂಗ್ ಕಂಪನಿ ಓಯೋ ಪ್ರಕಟಿಸಿದೆ. ತನ್ನ ಪಾಲುದಾರ ಹೋಟೆಲ್‌ಗಳಿಗಾಗಿ ಹೊಸ ಚೆಕ್ ಇನ್ ಮಾರ್ಗಸೂಚಿಗಳನ್ನು ಹೊರಡಿಸಿರುವ ಓಯೋ, ಮೊದಲಿಗೆ ಮೀರತ್​ನಿಂದ ಇವುಗಳನ್ನು ಜಾರಿಗೊಳಿಸಲು ಆರಂಭಿಸಿದೆ.

ಪರಿಷ್ಕೃತ ನೀತಿಯ ಅಡಿಯಲ್ಲಿ, ಪುರುಷ ಮತ್ತು ಮತ್ತು ಮಹಿಳಾ ಜೋಡಿಗಳು ಆನ್​ಲೈನ್ ಬುಕಿಂಗ್ ಮಾಡುವಾಗ ಅಥವಾ ಚೆಕ್ ಇನ್ ಮಾಡುವಾಗ ಅವರು ತಮ್ಮ ಮಧ್ಯದ ಸಂಬಂಧವನ್ನು ತೋರಿಸುವ ಪುರಾವೆಗಳನ್ನು ನೀಡುವುದು ಕಡ್ಡಾಯವಾಗಲಿದೆ. ಸ್ಥಳೀಯ ಸಾಮಾಜಿಕ ಪರಿಸ್ಥಿತಿಗಳನ್ನು ನೋಡಿಕೊಂಡು ಪಾಲುದಾರ ಹೋಟೆಲ್​ಗಳು ಸಂಗಾತಿಗಳಿಗೆ ರೂಮ್ ನೀಡುವ ಅಥವಾ ನೀಡದಿರುವ ಬಗ್ಗೆ ವಿವೇಚನೆಯಿಂದ ನಿರ್ಧರಿಸಬಹುದು ಎಂದು ಕಂಪನಿ ತಿಳಿಸಿದೆ.

ಹೊಸ ನಿಯಮಗಳನ್ನು ತಕ್ಷಣದಿಂದ ಜಾರಿಗೆ ತರುವಂತೆ ಓಯೋ ಮೀರತ್‌ನಲ್ಲಿರುವ ತನ್ನ ಪಾಲುದಾರ ಹೋಟೆಲ್​ಗಳಿಗೆ ನಿರ್ದೇಶನ ನೀಡಿದೆ. ವಾಸ್ತವ ಸ್ಥಿತಿಗತಿಗಳ ಆಧಾರದ ಮೇಲೆ ಕಂಪನಿಯು ಇದನ್ನು ಮತ್ತಷ್ಟು ನಗರಗಳಿಗೆ ವಿಸ್ತರಿಸಬಹುದು ಎಂದು ಮೂಲಗಳು ತಿಳಿಸಿವೆ.

"ನಾಗರಿಕ ಸಮಾಜ ಸಂಘಟನೆಗಳು ಇಂಥದೊಂದು ನಿಯಮ ಜಾರಿಗೆ ತರುವಂತೆ ಬಹಳ ಹಿಂದಿನಿಂದ ಮನವಿ ನೀಡುತ್ತಿವೆ. ಹೀಗಾಗಿ ನಾವು ಹೊಸ ಮಾರ್ಗಸೂಚಿಗಳನ್ನು ತಯಾರಿಸಿದ್ದೇವೆ. ಇದಲ್ಲದೆ ಅವಿವಾಹಿತ ಜೋಡಿಗಳಿಗೆ ರೂಮ್ ನೀಡದಂತೆ ಕೆಲ ನಗರಗಳ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ" ಎಂದು ಕಂಪನಿಯ ಮೂಲಗಳು ಹೇಳಿವೆ.

ಸುರಕ್ಷಿತ ಮತ್ತು ಜವಾಬ್ದಾರಿಯುತ ಆತಿಥ್ಯ ಕ್ರಮಗಳನ್ನು ಎತ್ತಿಹಿಡಿಯಲು ಓಯೋ ಬದ್ಧವಾಗಿದೆ. ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸುವ ಮಧ್ಯೆ ನಾವು ಕಾರ್ಯನಿರ್ವಹಿಸುವ ಸೂಕ್ಷ್ಮ ಮಾರುಕಟ್ಟೆಗಳಲ್ಲಿ ಕಾನೂನು ಜಾರಿ ಮತ್ತು ನಾಗರಿಕ ಸಮಾಜಗಳ ಬೇಡಿಕೆಗಳನ್ನು ಆಲಿಸುವುದು ಹಾಗೂ ಅವುಗಳನ್ನು ಪರಿಶೀಲಿಸುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ ಎಂಬುದು ನಮಗೆ ತಿಳಿದಿದೆ. ಹೊಸ ನೀತಿ ಮತ್ತು ಅದರ ಪರಿಣಾಮಗಳನ್ನು ನಿಯಮಿತವಾಗಿ ಪರಿಶೀಲಿಸುತ್ತೇವೆ. ಈ ಉಪಕ್ರಮವು ಹಳೆಯ ಗ್ರಹಿಕೆಯನ್ನು ಪರಿವರ್ತಿಸುವ ಮತ್ತು ಕುಟುಂಬಗಳು, ವಿದ್ಯಾರ್ಥಿಗಳು, ವ್ಯವಹಾರ, ಧಾರ್ಮಿಕ ಮತ್ತು ಏಕವ್ಯಕ್ತಿ ಪ್ರಯಾಣಿಕರಿಗೆ ಸುರಕ್ಷಿತ ಅನುಭವವನ್ನು ಒದಗಿಸುವ ಬ್ರಾಂಡ್ ಆಗಿ ತನ್ನನ್ನು ತಾನು ಬಿಂಬಿಸಿಕೊಳ್ಳುವ ಓಯೋ ಕಾರ್ಯಕ್ರಮದ ಒಂದು ಭಾಗವಾಗಿದೆ ಎಂದು ಓಯೋ ಉತ್ತರ ಭಾರತದ ಪ್ರಾದೇಶಿಕ ಮುಖ್ಯಸ್ಥ ಪವಾಸ್ ಶರ್ಮಾ ಪಿಟಿಐಗೆ ತಿಳಿಸಿದರು.

ಹೆಚ್ಚುವರಿಯಾಗಿ, ಹೊಸ ನೀತಿಯು ದೀರ್ಘಕಾಲದ ವಾಸ್ತವ್ಯ ಮತ್ತು ಪುನರಾವರ್ತಿತ ಬುಕಿಂಗ್ ಅನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ಗ್ರಾಹಕರ ನಂಬಿಕೆ ಮತ್ತು ನಿಷ್ಠೆಯನ್ನು ಹೆಚ್ಚಿಸುತ್ತದೆ.

ಪೊಲೀಸರು ಮತ್ತು ಹೋಟೆಲ್ ಪಾಲುದಾರರೊಂದಿಗೆ ಸುರಕ್ಷಿತ ಆತಿಥ್ಯ ಕುರಿತು ಜಂಟಿ ಸೆಮಿನಾರ್​ ಏರ್ಪಡಿಸುವುದು, ಅನೈತಿಕ ಚಟುವಟಿಕೆಗಳನ್ನು ಉತ್ತೇಜಿಸುವ ಹೋಟೆಲ್​ಗಳನ್ನು ಕಪ್ಪುಪಟ್ಟಿಗೆ ಸೇರಿಸುವುದು ಮತ್ತು ಓಯೋ ಬ್ರ್ಯಾಂಡಿಂಗ್ ಬಳಸುವ ಅನಧಿಕೃತ ಹೋಟೆಲ್​ಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ಅಖಿಲ ಭಾರತ ಮಟ್ಟದಲ್ಲಿ ಓಯೋ ಹಲವಾರು ಉಪಕ್ರಮಗಳನ್ನು ಪ್ರಾರಂಭಿಸಿದೆ.

ಇದನ್ನೂ ಓದಿ : ನಂದಿನಿ ದೋಸೆ, ಇಡ್ಲಿ ಹಿಟ್ಟು ಮಾರಾಟ ಯಶಸ್ವಿ; ಇತರ ಜಿಲ್ಲೆಗಳಿಗೂ ಯೋಜನೆ ವಿಸ್ತರಿಸಲು ಮುಂದಾದ ಕೆಎಂಎಫ್ - KMF NANDINI BRAND

ABOUT THE AUTHOR

...view details