ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಸ್ಪರ್ಧೆ ಮತ್ತು ಭಾರತದ ಮಾರುಕಟ್ಟೆಯಲ್ಲಿನ ವಿಫುಲ ಅವಕಾಶದಿಂದಾಗಿ ಓಲಾ ತನ್ನ ಜಾಗತಿಕ ಕಾರ್ಯಾಚರಣೆಯನ್ನು ಬಂದ್ ಮಾಡಿ, ಭಾರತದ ಮಾರುಕಟ್ಟೆಗೆ ಮಾತ್ರ ಗಮನ ನೀಡುವುದಾಗಿ ಘೋಷಿಸಿದೆ.
ಆಸ್ಟ್ರೇಲಿಯಾ, ಯುಕೆ ಮತ್ತು ನ್ಯೂಜಿಲೆಂಡ್ನಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ಈ ದೇಶದಲ್ಲಿನ ಓಲಾ ಸೇವೆ ಬಂದ್ ಮಾಡುವ ಮೂಲಕ ನಮ್ಮ ಜಾಗತಿಕ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಹೇಳಿದೆ. ಇದೇ ವೇಳೆ ಸಂಸ್ಥೆಯು ಭಾರತದಲ್ಲಿ ತಮ್ಮ ಮಾರುಕಟ್ಟೆ ವಿಸ್ತರಣೆಗೆ ಅದ್ಭುತ ಅವಕಾಶಗಳಿದ್ದು, ಅದರತ್ತ ಗುರಿ ನೆಟ್ಟಿರುವುದಾಗಿ ತಿಳಿಸಿದೆ.
ಭವಿಷ್ಯದ ವಾಹನಗಳು ಎಲೆಕ್ಟ್ರಿಕ್ ಆಗಿವೆ. ಇದು ಕೇವಲ ವೈಯಕ್ತಿಕ ಓಡಾಟಕ್ಕೆ ಮಾತ್ರ ಸೀಮಿತವಾಗಿಲ್ಲ. ರೈಡ್ ಹೈಲಿಂಗ್ನಂತಹ ಉದ್ಯಮಕ್ಕೂ ಸೂಕ್ತ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ತಮ್ಮ ಉದ್ಯಮ ವಿಸ್ತರಣೆಗೆ ಸಾಕಷ್ಟು ಅವಕಾಶವಿದೆ ಎಂದು ಓಲಾ ವಕ್ತಾರರು ಪ್ರಕಟಣೆ ಹೊರಡಿಸಿದ್ದಾರೆ.
ಸ್ಪಷ್ಟ ಗುರಿಯೊಂದಿಗೆ ನಾವು ನಮ್ಮ ಆದ್ಯತೆಯ ಮರು ಮೌಲ್ಯಮಾಪನ ಮಾಡಿದ್ದೇವೆ. ಪ್ರಸ್ತುತ ಯುಕೆ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿರುವ ಸಾಗರದಾಚೆಗಿನ ರೈಡ್ ಹೈಲಿಂಗ್ ಉದ್ಯಮವನ್ನು ಮುಚ್ಚುವುದಾಗಿ ಹೇಳಿದ್ದಾರೆ.