ಮುಂಬೈ: ನಿನ್ನೆ ನಿಧನರಾದ ದೇಶದ ಪ್ರಖ್ಯಾತ ಆರ್ಥಿಕ ತಜ್ಞ, ನವಭಾರತದ ಆರ್ಥಿಕ ಬೆಳವಣಿಗೆಯ ಹರಿಕಾರ ಡಾ. ಮನಮೋಹನ್ ಸಿಂಗ್ ಅವರಿಗೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ನಮನ ಸಲ್ಲಿಕೆ ಮಾಡಲಾಯಿತು.
ಅತ್ತ ಕೆಲ ದಿನಗಳಿಂದ ಹಿಂಜರಿತ ಕಂಡಿದ್ದ ಷೇರುಪೇಟೆ ಇಂದು ಶುಭಾರಂಭ ಮಾಡಿದೆ. ನಿಫ್ಟಿಯಲ್ಲಿ ಆಟೋ, ಪಿಎಸ್‌ಯು ಬ್ಯಾಂಕ್, ಹಣಕಾಸು ಸೇವಾ ಫಾರ್ಮಾ, ಎಫ್‌ಎಂಸಿಜಿ ಮತ್ತು ಲೋಹದ ವಲಯಗಳಲ್ಲಿ ಭರ್ಜರಿ ಖರೀದಿ ಕಂಡು ಬಂದಿದೆ. ಮಿಶ್ರ ಜಾಗತಿಕ ಸೂಚನೆಗಳ ನಡುವೆಯೂ ಭಾರತೀಯ ಷೇರು ಮಾರುಕಟ್ಟೆ ಶುಕ್ರವಾರ ಏರಿಕೆಯೊಂದಿಗೆ ದಿನದ ವಹಿವಾಟು ಶುರು ಮಾಡಿದೆ.
ಬೆಳಗ್ಗೆ 9:30 ರ ಸುಮಾರಿಗೆ ಸೆನ್ಸೆಕ್ಸ್ 337.92 ಪಾಯಿಂಟ್ ಅಥವಾ ಶೇ 0.43ರಷ್ಟು ಏರಿಕೆ ದಾಖಲಿಸಿ, 78,810.40 ಅಂಕಗಳೊಂದಿಗೆ ವಹಿವಾಟು ನಡೆಸುತ್ತಿತ್ತು. ಇನ್ನು ನಿಫ್ಟಿ 108.80 ಪಾಯಿಂಟ್ ಅಥವಾ ಶೇ 0.46 ರಷ್ಟು ಏರಿಕೆ ದಾಖಲಿಸಿ. 23,859 ಅಂಕಗಳೊಂದಿಗೆ ವಹಿವಾಟು ನಡೆಸುತ್ತಿದೆ.
ಇಂದು ಮಾರುಕಟ್ಟೆಯ ಟ್ರೆಂಡ್ ಸಕಾರಾತ್ಮಕವಾಗಿಯೇ ಇತ್ತು. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಎನ್‌ಎಸ್‌ಇಯಲ್ಲಿನ ಸುಮಾರು 1,400 ಷೇರುಗಳು ಹಸಿರು ಬಣ್ಣದಲ್ಲಿ ವಹಿವಾಟು ನಡೆಸುತ್ತಿದ್ದರೆ, 503 ಷೇರುಗಳು ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿರುವುದು 9:30 ರ ಸುಮಾರಿಗೆ ಕಂಡು ಬಂತು.
ಷೇರು ಮಾರುಕಟ್ಟೆಯ ಅಮೋಘ ಬೆಳವಣಿಗೆಗೆ ಮನಮೋಹನ್ ಸಿಂಗ್ ಕೊಡುಗೆ: ಭಾರತದ ಉದಾರೀಕರಣದ ಶಿಲ್ಪಿ ಮನಮೋಹನ್ ಸಿಂಗ್ ಅವರಿಗೆ ರಾಷ್ಟ್ರವು ಗೌರವ ಸಲ್ಲಿಸುತ್ತಿದೆ. 1991 ರಲ್ಲಿ ಉದಾರೀಕರಣದ ಪ್ರಾರಂಭದ ನಂತರ, ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯು ಸೃಷ್ಟಿಸಿದ ಸಂಪತ್ತನ್ನು ಕೃತಜ್ಞತೆಯಿಂದ ಒಪ್ಪಿಕೊಳ್ಳಬೇಕಾಗಿದೆ ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
1991ರಲ್ಲಿ 1,000 ರದ ಆಸುಪಾಸಿನಲ್ಲಿದ್ದ ಸೆನ್ಸೆಕ್ಸ್ ನಂತರ ಸುಮಾರು 780 ಪಟ್ಟು ಬೆಳವಣಿಗೆ ಕಂಡು ಈ ವರ್ಷ 85 ಸಾವಿರ ಅಂಕಗಳ ಗಡಿ ದಾಟಿ ಮುನ್ನಗ್ಗಿತ್ತು. ಆದರೆ ಇತ್ತೀಚಿನ ಜಾಗತಿಕ ಆರ್ಥಿಕ ಬೆಳವಣಿಗೆ ಹಿನ್ನೆಲೆಯಲ್ಲಿಇಂದು 78,000 ಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ವಹಿವಾಟು ನಡೆಸುತ್ತಿದೆ. ಅಂದು ಮನಮೋಹನ್ ಸಿಂಗ್ ಅವರ ಪ್ರಯತ್ನದ ಫಲವಾಗಿ ಇಂದು ಭಾರತೀಯ ಷೇರು ಮಾರುಕಟ್ಟೆಗಳು ದೀರ್ಘಾವಧಿಯ ಹೂಡಿಕೆದಾರರಿಗೆ ಅತ್ಯುತ್ತಮ ಆದಾಯವನ್ನು ನೀಡುತ್ತಿವೆ.
ಉದಾರೀಕರಣಕ್ಕೆ ಸಿಂಗ್ ಮುನ್ನುಡಿ ಬರೆದಿದ್ದರಿಂದಲೇ ಇಷ್ಟು ಎತ್ತರಕ್ಕೆ: ಉದಾರೀಕರಣಕ್ಕೆ ಭಾರತಲ್ಲಿ ಅವಕಾಶ ಮಾಡಿಕೊಟ್ಟಿದ್ದರಿಂದಲೇ ದೇಶದ ಬೆಳವಣಿಗೆಯ ಕಥೆಯು ಮತ್ತೊಂದು ದಿಕ್ಕಿನತ್ತ ಸಾಗಿದ್ದು, ಇಂದು ವಿಶ್ವದ ಐದನೇ ಆರ್ಥಿಕ ಶಕ್ತಿಯಾಗಿ ಬೆಳವಣಿಗೆ ಕಂಡಿದೆ. ಮುಂಬರುವ ವರ್ಷಗಳಲ್ಲಿ ಭಾರತದ ಷೇರು ಮಾರುಕಟ್ಟೆಯು ಹೂಡಿಕೆದಾರರಿಗೆ ಉತ್ತಮ ಆದಾಯವನ್ನು ನೀಡುವುದನ್ನು ಮುಂದುವರಿಸುತ್ತದೆ ಎಂದು ಆರ್ಥಿಕ ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಷೇರುಗಳಲ್ಲಿ ಏರಿಕೆ, ಇವುಗಳಲ್ಲಿ ಇಳಿಕೆ: ಇಂಡಸ್ ಇಂಡ ಬ್ಯಾಂಕ್, ಟಾಟಾ ಮೋಟಾರ್ಸ್, ಜೊಮಾಟೊ, ಎನ್‌ಟಿಪಿಸಿ, ಐಸಿಐಸಿಐ ಬ್ಯಾಂಕ್, ಟೆಕ್ ಮಹೀಂದ್ರಾ, ಎಸ್‌ಬಿಐ ಮತ್ತು ಎಂ & ಎಂ ಇಂದಿನ ಬೆಳಗಿನ ವಹಿವಾಟಿನಲ್ಲಿ ಟಾಪ್ ಗೇನರ್‌ಗಳಾಗಿ ಗುರುತಿಸಿಕೊಂಡಿವೆ.
ಎಚ್‌ಸಿಎಲ್ ಟೆಕ್, ಟೈಟಾನ್, ಟಿಸಿಎಸ್, ಎಲ್ & ಟಿ ಮತ್ತು ಸನ್ ಫಾರ್ಮಾ ಷೇರುಗಳು ಆರಂಭಿಕ ವಹಿವಾಟಿನಲ್ಲಿ ನಷ್ಟ ಅನುಭವಿಸಿದವು.