ನವದೆಹಲಿ: ಭಾರತದ ಕ್ರೆಡಿಟ್ ಕಾರ್ಡ್ ಮಾರುಕಟ್ಟೆ ಗಮನಾರ್ಹ ಬೆಳವಣಿಗೆ ಕಂಡಿದ್ದು, ಕಳೆದೊಂದು ವರ್ಷದಲ್ಲಿ 1.10 ಕೋಟಿಗೂ ಹೆಚ್ಚು ಹೊಸ ಕ್ರೆಡಿಟ್ ಕಾರ್ಡ್ಗಳನ್ನು ವಿತರಿಸಲಾಗಿದೆ ಎಂದು ಇಂಡಸ್ ಈಕ್ವಿಟಿ ಅಡ್ವೈಸರ್ಸ್ ವರದಿ ತಿಳಿಸಿದೆ. ದೇಶದಲ್ಲಿ ಒಟ್ಟು ಕ್ರೆಡಿಟ್ ಕಾರ್ಡ್ಗಳ ಸಂಖ್ಯೆ 2023ರ ನವೆಂಬರ್ನಲ್ಲಿ ಇದ್ದ 9.60 ಕೋಟಿಯಿಂದ 2024 ರ ನವೆಂಬರ್ನಲ್ಲಿ 10.72 ಕೋಟಿಗೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. ಗ್ರಾಹಕರಲ್ಲಿ ಕ್ರೆಡಿಟ್ ಕಾರ್ಡ್ ಬಳಕೆಯ ಪ್ರವೃತ್ತಿ ಹೆಚ್ಚಾಗುತ್ತಿರುವುದನ್ನು ಇದು ತೋರಿಸುತ್ತದೆ.
ಕ್ರೆಡಿಟ್ ಕಾರ್ಡ್ ಮಾರುಕಟ್ಟೆಯಲ್ಲಿ ಖಾಸಗಿ ಬ್ಯಾಂಕುಗಳ ಪ್ರಾಬಲ್ಯ ಮುಂದುವರೆದಿದ್ದು, ಇವು ಶೇಕಡಾ 71 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿವೆ. ಇನ್ನು ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿಎಸ್ಯು ಬ್ಯಾಂಕುಗಳು) ಒಟ್ಟು ಕ್ರೆಡಿಟ್ ಕಾರ್ಡ್ ಮಾರುಕಟ್ಟೆಯಲ್ಲಿ ಕೇವಲ ಶೇ 23.82 ರಷ್ಟು ಮಾತ್ರ ಪಾಲು ಹೊಂದಿವೆ. ಖಾಸಗಿ ಬ್ಯಾಂಕುಗಳ ಮಾರುಕಟ್ಟೆ ಪಾಲು ನಿರಂತರವಾಗಿ ಏರಿಕೆಯಾಗುತ್ತಿದ್ದು, ವಿದೇಶಿ ಬ್ಯಾಂಕ್ ಕಾರ್ಡ್ಗಳ ವಿತರಣೆ ಕುಸಿತವಾಗುತ್ತಿದೆ.
2024 ರ ನವೆಂಬರ್ನಲ್ಲಿ ಕ್ರೆಡಿಟ್ ಕಾರ್ಡ್ಗಳನ್ನು ಬಳಸಿ ಮಾಡಿದ ವಹಿವಾಟಿನ ಮೌಲ್ಯವು 1.70 ಲಕ್ಷ ಕೋಟಿ ರೂ.ಗಳನ್ನು ತಲುಪಿದೆ ಎಂದು ವರದಿ ಹೇಳಿದೆ. ಪಾವತಿ ವಿಧಾನವಾಗಿ ಕ್ರೆಡಿಟ್ ಕಾರ್ಡ್ಗಳಿಗೆ ಆದ್ಯತೆ ಹೆಚ್ಚುತ್ತಿರುವುದನ್ನು ಇದು ತೋರಿಸಿದೆ. ಡೆಬಿಟ್ ಕಾರ್ಡ್ಗೆ ಸಂಬಂಧಿಸಿದಂತೆ, ನವೆಂಬರ್ 2024 ರ ವೇಳೆಗೆ ದೇಶದಲ್ಲಿ ಒಟ್ಟು 99.36 ಕೋಟಿ ಡೆಬಿಟ್ ಕಾರ್ಡ್ಗಳು ಬಳಕೆಯಲ್ಲಿವೆ ಎಂದು ವರದಿಯ ಅಂಕಿ ಅಂಶಗಳು ತಿಳಿಸಿವೆ. ಪಿಎಸ್ಯು ಬ್ಯಾಂಕುಗಳು ಡೆಬಿಟ್ ಕಾರ್ಡ್ ವಿಭಾಗದಲ್ಲಿ ಶೇಕಡಾ 64.67 ರಷ್ಟು ಪಾಲನ್ನು ಹೊಂದಿದ್ದರೆ, ಖಾಸಗಿ ಬ್ಯಾಂಕುಗಳು ಶೇಕಡಾ 24.94 ರಷ್ಟು ಸಣ್ಣ ಪಾಲನ್ನು ಹೊಂದಿವೆ.
ಆನ್ ಲೈನ್ (ಇ-ಕಾಮರ್ಸ್) ವಹಿವಾಟುಗಳಲ್ಲಿಯೂ ಖಾಸಗಿ ಬ್ಯಾಂಕುಗಳು ಹೆಚ್ಚು ಪ್ರಭಾವ ಹೊಂದಿವೆ. ನವೆಂಬರ್ 2024 ರಲ್ಲಿ ಆನ್ ಲೈನ್ ವಹಿವಾಟಿನ ಪ್ರಮಾಣವು 22.13 ಕೋಟಿಯಷ್ಟಿದ್ದು, ಇದರಲ್ಲಿ ಖಾಸಗಿ ಬ್ಯಾಂಕುಗಳು ಶೇಕಡಾ 68.54 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿವೆ. ಆನ್ ಲೈನ್ ವಹಿವಾಟುಗಳಲ್ಲಿ ಪಿಎಸ್ಯು ಬ್ಯಾಂಕುಗಳ ಪಾಲು ಶೇಕಡಾ 26.53 ಕ್ಕೆ ಇಳಿಕೆಯಾಗಿದೆ.
ಕ್ರೆಡಿಟ್ ಕಾರ್ಡ್ ಮಾರುಕಟ್ಟೆಯಲ್ಲಿನ ಈ ಚೇತರಿಕೆ ಮತ್ತು ಖಾಸಗಿ ಬ್ಯಾಂಕುಗಳ ನಿರಂತರ ಪ್ರಾಬಲ್ಯವು ಬಳಸಲು ಸುಲಭವಾಗಿರುವ ಮತ್ತು ಡಿಜಿಟಲ್ ಸಂಯೋಜಿತ ಬ್ಯಾಂಕಿಂಗ್ ಸೇವೆಗಳತ್ತ ಗ್ರಾಹಕರು ಆದ್ಯತೆ ನೀಡುತ್ತಿರುವುದನ್ನು ಸೂಚಿಸುತ್ತದೆ. ಅದೇ ಸಮಯದಲ್ಲಿ, ಪಿಎಸ್ಯು ಬ್ಯಾಂಕುಗಳು ಡೆಬಿಟ್ ಕಾರ್ಡ್ ವಿಭಾಗದಲ್ಲಿ ಪ್ರಬಲವಾಗಿವೆ. ಇವು ಪ್ರಾಥಮಿಕವಾಗಿ ಬೃಹತ್ ಸಂಖ್ಯೆಯಲ್ಲಿರುವ ಸಾಂಪ್ರದಾಯಿಕ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆ ಒದಗಿಸುತ್ತವೆ.
ಇದನ್ನೂ ಓದಿ : ಕ್ರಿಸ್ಮಸ್ನ ಎರಡೇ ದಿನಗಳಲ್ಲಿ 152 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ: ಯಾವ ರಾಜ್ಯದಲ್ಲಿ ಗೊತ್ತಾ? - SALE OF LIQUOR