ಚೆನ್ನೈ: ರಾಜಸ್ಥಾನ ಅಣು ವಿದ್ಯುತ್ ಯೋಜನೆಯ 700 ಮೆಗಾವ್ಯಾಟ್ ಸಾಮರ್ಥ್ಯದ ಸ್ಥಾವರದಲ್ಲಿ ಪರಮಾಣು ಇಂಧನ ಲೋಡ್ ಮಾಡುವ ಪ್ರಕ್ರಿಯೆ ಮಂಗಳವಾರ ಆರಂಭವಾಗಿದೆ ಎಂದು ಅಣು ವಿದ್ಯುತ್ ನಿಗಮ ಲಿಮಿಟೆಡ್ (ಎನ್‌ಪಿಸಿಐಎಲ್) ಬುಧವಾರ ಪ್ರಕಟಿಸಿದೆ. ಪರಮಾಣು ಶಕ್ತಿ ನಿಯಂತ್ರಣ ಮಂಡಳಿ (ಎಇಆರ್ಬಿ) ಯಿಂದ ಅನುಮತಿ ಪಡೆದ ನಂತರ ಮತ್ತು ಇತರ ಎಲ್ಲಾ ಅವಶ್ಯಕತೆಗಳನ್ನು ಪೂರ್ಣಗೊಳಿಸಿದ ನಂತರ ಆರಂಭಿಕ ಇಂಧನ ಲೋಡ್ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಎನ್‌ಪಿಸಿಐಎಲ್ ತಿಳಿಸಿದೆ.
ಆರಂಭಿಕ ಇಂಧನ ಲೋಡಿಂಗ್ ಪ್ರಕ್ರಿಯೆಯ ನಂತರ ಕ್ರಿಟಿಕ್ಯಾಲಿಟಿಯ ಮೊದಲ ಹಂತ ಆರಂಭವಾಗುತ್ತದೆ (ಮೊದಲ ಬಾರಿಗೆ ಪರಮಾಣು ವಿದಳನದ ಪ್ರಾರಂಭ) ಮತ್ತು ನಂತರ ವಿದ್ಯುತ್ ಉತ್ಪಾದನೆ ಪ್ರಾರಂಭವಾಗುತ್ತದೆ. ಎನ್‌ಪಿಸಿಐಎಲ್ ಪ್ರಕಾರ, 7ನೇ ಘಟಕದಿಂದ ವಾಣಿಜ್ಯ ವಿದ್ಯುತ್ ಉತ್ಪಾದನೆ ಈ ವರ್ಷ ನಡೆಯಲಿದೆ.
ಮತ್ತೊಂದು 700 ಮೆಗಾವ್ಯಾಟ್ ಸ್ಥಾವರ (ಯುನಿಟ್ 8) ಮುಂದಿನ ವರ್ಷ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದು ಅಣು ವಿದ್ಯುತ್ ನಿಗಮ ತಿಳಿಸಿದೆ. ದೇಶದಲ್ಲಿ ನಿರ್ಮಿಸಲಾಗುತ್ತಿರುವ ಹದಿನಾರು 700 ಮೆಗಾವ್ಯಾಟ್ ಪ್ರೆಶರೈಸ್ಡ್ ಹೆವಿ ವಾಟರ್ ರಿಯಾಕ್ಟರ್‌ಗಳ (ಪಿಎಚ್ ಡಬ್ಲ್ಯುಆರ್) ಸರಣಿಯಲ್ಲಿ ಆರ್‌ಎಪಿಪಿಯ 7ನೇ ಘಟಕ ಮೂರನೆಯದು ಎಂದು ಎನ್‌ಪಿಸಿಐಎಲ್ ತಿಳಿಸಿದೆ.
700 ಮೆಗಾವ್ಯಾಟ್ ಪಿಎಚ್ಡಬ್ಲ್ಯೂಆರ್ಗಳಲ್ಲಿ ಮೊದಲ ಎರಡು 2023-24ರಲ್ಲಿ ಗುಜರಾತ್ನ ಕಕ್ರಾಪರ್ನಲ್ಲಿ (ಘಟಕಗಳು 3 ಮತ್ತು 4) ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಎನ್‌ಪಿಸಿಐಎಲ್ ತಿಳಿಸಿದೆ. ಕಕ್ರಾಪರ್ನಲ್ಲಿರುವ ಈ ಎರಡೂ ಘಟಕಗಳು ಉತ್ತಮ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ.