ಮುಂಬೈ: ಟಾಟಾ ಟ್ರಸ್ಟ್‌ನ ಹೊಸ ಉತ್ತರಾಧಿಕಾರಿಯಾಗಿ ನೋಯೆಲ್ ಟಾಟಾ ಅವರನ್ನು ಅವಿರೋಧವಾಗಿ ಇಂದು ಆಯ್ಕೆ ಮಾಡಲಾಯಿತು. ಟಾಟಾ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನೋಯೆಲ್ ಟಾಟಾ ಅವರು ರತನ್ ಟಾಟಾರ ಮಲ ಸಹೋದರ. ಟಾಟಾ ಟ್ರಸ್ಟ್‌ನ ಶಾಶ್ವತ ಟ್ರಸ್ಟಿಯಾಗಿ ಮೆಹ್ಲಿ ಮಿಸ್ತ್ರಿ ಅವರನ್ನು ನೇಮಿಸಲಾಯಿತು. ಮೆಹ್ಲಿ ಅವರು ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ದಿವಂಗತ ಸೈರಸ್ ಮಿಸ್ತ್ರಿಯವರ ಸಂಬಂಧಿ.
ನೋಯೆಲ್ ಟಾಟಾ ಯಾರು ?:ನೋಯೆಲ್ ಟಾಟಾ ಅವರು ರತನ್ ಟಾಟಾ ಅವರ ಮಲಸಹೋದರ. ನೇವಲ್ ಹೆಚ್ ಟಾಟಾ ಮತ್ತು ಸಿಮೋನ್ ಎನ್ ಟಾಟಾ ಅವರ ಪುತ್ರನಾಗಿರುವ ನೋಯೆಲ್ ಟಾಟಾ ಸಾರ್ವಜನಿಕವಾಗಿ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಆದರೆ ಇವರು ನಾಲ್ಕು ದಶಕಗಳಿಂದ ಟಾಟಾ ಸಮೂಹದ ಭಾಗವಾಗಿದ್ದಾರೆ. ಟಾಟಾ ಇಂಟರ್‌ನ್ಯಾಶನಲ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕೇತರ ನಿರ್ದೇಶಕ, ಟ್ರೆಂಟ್, ವೋಲ್ಟಾಸ್ ಮತ್ತು ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಶನ್‌ನ ಅಧ್ಯಕ್ಷ, ಹಾಗೆಯೇ ಟಾಟಾ ಸ್ಟೀಲ್ ಮತ್ತು ಟೈಟಾನ್ ಕಂಪನಿ ಲಿಮಿಟೆಡ್‌ನ ಉಪಾಧ್ಯಕ್ಷ ಸ್ಥಾನ ಸೇರಿದಂತೆ ಟಾಟಾ ಸಮೂಹದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಟಾಟಾ ಇಂಟರ್‌ನ್ಯಾಶನಲ್ ಲಿಮಿಟೆಡ್ನಲ್ಲಿ ವೃತ್ತಿಜೀವನ ಆರಂಭಿಸಿದ್ದ ನೋಯೆಲ್ ಟಾಟಾ ಅವರು 1999 ರ ಜೂನ್ನಲ್ಲಿ ಟ್ರೆಂಟ್‌ನ ವ್ಯವಸ್ಥಾಪಕ ನಿರ್ದೇಶಕರಾದರು. ಈ ಸಂಸ್ಥೆಯನ್ನು ಅವರ ತಾಯಿ ಸಿಮೋನ್ ಡುನೋಯರ್ ಅವರು ಸ್ಥಾಪಿಸಿದ್ದರು. ಈ ಸಂಸ್ಥೆಯ ಎಂಡಿ ಆದ ಬಳಿಕ ಮತ್ತಷ್ಟು ಅಭಿವೃದ್ಧಿಪಡಿಸಿ, ಲಾಭದಾಯಕ ಉದ್ಯಮವನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಬಳಿಕ 2003 ರಲ್ಲಿ ಟೈಟಾನ್ ಇಂಡಸ್ಟ್ರೀಸ್ ಮತ್ತು ವೋಲ್ಟಾಸ್‌ನ ನಿರ್ದೇಶಕ ಸ್ಥಾನವನ್ನು ನೋಯೆಲ್ ಅಲಂಕರಿಸಿದರು. ಟೈಟಾನ್ ಕಂಪನಿಯು ತನಿಷ್ಕ್, ಟೈಟಾನ್, ಟೈಟಾನ್ ಐ ಮತ್ತು ಫಾಸ್ಟ್ರ್ಯಾಕ್‌ನಂತಹ ಬ್ರ್ಯಾಂಡ್‌ಗಳನ್ನು ಹೊಂದಿದೆ.